ADVERTISEMENT

ತಾಲ್ಲೂಕು ಸಾಹಿತ್ಯ ಸಮ್ಮೇಳನ: ಸಿದ್ಧತೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 5:35 IST
Last Updated 18 ಮಾರ್ಚ್ 2017, 5:35 IST

ಮುಧೋಳ: ಮಾರ್ಚ್‌ 18ರಂದು ತಾಲ್ಲೂಕಿನ ಮಾಲಾಪುರ ಗ್ರಾಮದಲ್ಲಿ  4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಬೆಳಿಗ್ಗೆ 7 ಗಂಟೆಗೆ ಶಾಸಕ ಗೋವಿಂದ ಕಾರಜೋಳ ರಾಷ್ಟ್ರಧ್ವಜವನ್ನು, ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಪರಿಷತ್ತಿನ ಧ್ವಜವನ್ನು ಹಾಗೂ ತಾಲ್ಲೂಕು  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂಗಮೇಶ ನಿಲಗುಂದ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಬೆಳಿಗ್ಗೆ 8 ಗಂಟೆಗೆ ತಾಯಿ ಭುವನೇಶ್ವರಿಯನ್ನು ಹಾಗೂ ಸರ್ವಾನುಮತದಿಂದ ಆಯ್ಕೆಯಾದ ಸಾಹಿತಿ ಬಿ.ಪಿ.ಹಿರೇಸೋಮಣ್ಣವರ ಅವರನ್ನು ಸಾಲಂಕೃತವಾದ ವಾಹನದ ಮೂಲಕ ಮೆರವಣಿಗೆಯಲ್ಲಿ ನಾರಾಯಣ ಪ್ರೌಢಶಾಲೆಯಿಂದ ಪ್ರಧಾನ ವೇದಿಕೆ ಕವಿರತ್ನ ರನ್ನ ವೇದಿಕೆಗೆ ಕರೆತರಲಾಗುವುದು. ಮೆರವಣಿಗೆಯ ಉದ್ಘಾಟನೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೇಣುಕಾಬಾಯಿ ಮಾಲಾಪುರ ನೆರವೇರಿಸುವರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಸಂತವ್ವ ಮೇತ್ರಿ, ಮೀನಾಕ್ಷಿ ಸುಣಗಾರ ಹಾಗೂ 55 ಜನ ಅತಿಥಿಗಳು, 10 ವಿವಿಧ ಸಂಘಟನೆಗಳು ಭಾಗವಹಿಸಲಿದ್ದಾರೆ.

10.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಗೋವಿಂದ ಕಾರಜೋಳ ವಹಿಸಲಿದ್ದಾರೆ. ಉದ್ಘಾಟನೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ವಿವಿಧ ಲೇಖಕರ ಕೃತಿಗಳನ್ನು ಸಂಸದ ಪಿ.ಸಿ.ಗದ್ದಿಗೌಡರ ನೆರವೇರಿಸಲಿದ್ದಾರೆ. ನಿಕಟಪೂರ್ವ ಸರ್ವಾಧ್ಯಕ್ಷ ಮಲ್ಲಿಕಾರ್ಜುನ ಹೆಗ್ಗಳಗಿ ಹಾಗೂ ಸರ್ವಾಧ್ಯಕ್ಷ ಬಿ.ಪಿ.ಹಿರೇಸೋಮಣ್ಣವರ ಮಾತನಾಡಲಿದ್ದಾರೆ.

ADVERTISEMENT

ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ, ಆರ್.ಬಿ.ತಿಮ್ಮಾಪುರ, ಎಚ್.ಆರ್.ನಿರಾಣಿ, ಬಸನಗೌಡ ಪಾಟೀಲ, ಅರುಣ ಶಹಾಪುರ, ತಾಲ್ಲೂಕಿನ ವಿವಿಧ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12.30 ಕ್ಕೆ ಮುಧೋಳ ತಾಲ್ಲೂಕಾ ದರ್ಶನ ಕರಿತು ಪ್ರಥಮ ಗೋಷ್ಠಿ ಅಧ್ಯಕ್ಷತೆಯನ್ನು ಡಾ.ಬಿ.ಎಂ.ಪಾಟೀಲ ವಹಿಸಲಿದ್ದಾರೆ. ತಾಲ್ಲೂಕಿನ ಶೈಕ್ಷಣಿಕ ಆಯಾಮಗಳ ಕುರಿತು ಎಂ.ಜಿ.ದಾಸರ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ವೆಂಕಟೇಶ ಗುಡೆಪ್ಪನವರ, ಲಲಿತ ಕಲೆ ಕುರಿತು ಡಾ.ಶಿವಾನಂದ ಕುಬಸದ, ಸಾಮಾಜಿಕ ಚಳುವಳಿ ಕುರಿತು ಹಣಮಂತಗೌಡ ಮುದಿಗೌಡರ, ನೇಕಾರಿಕೆ ವೃತ್ತಿ ಹಾಗೂ ಸಮಸ್ಯೆ ಕುರಿತು ಡಾ.ಅಶೋಕ ನರೋಡೆ, ಜಾನಪದ ಪದ್ಯ ಸಾಹಿತ್ಯದಲ್ಲಿ ಮಾನವೀಯ ಮೌಲ್ಯ ಕುರಿತು ಗಂಗಾಧರ ಅವಟೇರ್, ಮಹಿಳಾ ಸಾಹಿತ್ಯದ ಕುರಿತು ಬನಶ್ರೀ ಕಂಬಿ, ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಕುರಿತು ಮಹೇಶ ಮನ್ನಯ್ಯನವರಮಠ ಮಾತನಾಡಲಿದ್ದಾರೆ. 16 ಜನ ಅತಿಥಿಗಳು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 1.30 ಕ್ಕೆ ಸರ್ವಾಧ್ಯಕ್ಷರ ಬದುಕು ಬರಹ ಕರಿತು ಎರಡನೇ ಗೋಷ್ಠಿ ಅಧ್ಯಕ್ಷತೆಯನ್ನು ಡಾ.ಸಿದ್ದು ದಿವಾಣ ವಹಿಸಲಿದ್ದಾರೆ. ಎನ್.ವಿ ತುಳಸಿಗೇರಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾದ ಶಂಕರ ಉತ್ತೂರ, ಕಾಡಣ್ಣ ಹೊಸಟ್ಟಿ, ಅಶೋಕ ಕುಲಕರ್ಣಿ, ಸಿದ್ದಪ್ಪ ಬಾಡಗಿ ಹಾಗೂ 25 ಜನ ಸಂವಾದಕರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2.30 ಕ್ಕೆ ಕಾವ್ಯಧಾರೆ ಮೂರನೇ ಗೋಷ್ಠಿ ಅಧ್ಯಕ್ಷತೆಯನ್ನು ಅಣ್ಣಾಜಿ ಪಡತಾರೆ ವಹಿಸಲಿದ್ದಾರೆ. ವೆಂಕಟೇಶ ಇನಾಮದಾರ ಆಶಯ ನುಡಿಗಳನ್ನಾಡಲಿದ್ದಾರೆ. ಎಸ್.ಬಿ.ಕೃಷ್ಣಗೌಡರ ಉದ್ಘಾಟಿಸಲಿದ್ದಾರೆ. ಶಿವಾನಂದ ಶೆಲ್ಲಿಕೇರಿ, ವಿರೇಶ ಆಸಂಗಿ, ಮಹಾಂತೇಶ ಕರೆಹೊನ್ನ ಹಾಗೂ 20 ಕವಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ಬಹಿರಂಗ ಅಧಿವೇಶನದ ಅಧ್ಯಕ್ಷತೆಯನ್ನು ಸಂಗಮೇಶ ನಿಲಗುಂದ ವಹಿಸಲಿದ್ದಾರೆ. ವೆಂಕಟೇಶ ಗುಡೆಪ್ಪನವರ, ಬಸವರಾಜ ಕಾಂಬಳೆ ಚಂದ್ರಶೇಖರ ರೂಗಿ ನಿರ್ಣಯ ಮಂಡಿಸಲಿದ್ದಾರೆ.

ಸಂಜೆ 4.30 ಕ್ಕೆ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ವಹಿಸಲಿದ್ದಾರೆ.

ಸಂಜೆ 6ಕ್ಕೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ  ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ವಹಿಸಲಿದ್ದಾರೆ. ಬಿ.ಪಿ.ಹಿರೇಸೋಮಣ್ಣವರ, ಡಾ.ವಿರೇಶ ಬಡಿಗೇರ ಹಾಗೂ 7 ಅತಿಥಿಗಳು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.