ADVERTISEMENT

ತಿನಿಸು ಕಟ್ಟಿಕೊಡಲು ಪತ್ರಿಕೆ ಬಳಕೆ ಸಲ್ಲ!

ವೆಂಕಟೇಶ್ ಜಿ.ಎಚ್
Published 15 ಮೇ 2017, 6:44 IST
Last Updated 15 ಮೇ 2017, 6:44 IST

ಬಾಗಲಕೋಟೆ: ನಗರದ ಹೋಟೆಲ್‌, ಗೂಡಂಗಡಿಗಳಲ್ಲಿ ಗ್ರಾಹಕರಿಗೆ ಪಾರ್ಸೆಲ್‌ ಕೊಡಲು ತಿಂಡಿ–ತಿನಿಸು ಕಟ್ಟಲು ಇನ್ನು ಮುಂದೆ ವೃತ್ತ ಪತ್ರಿಕೆ (ನ್ಯೂಸ್‌ ಪೇಪರ್) ಬಳಸುವಂತಿಲ್ಲ. ಜೊತೆಗೆ ಚುರಮುರಿ, ಗಿರಮಿಟ್ಟು, ವಡೆ, ಬಜಿಯನ್ನು ಪೇಪರ್‌ನಲ್ಲಿ ಇಟ್ಟು ಗ್ರಾಹಕರಿಗೆ ತಿನ್ನಲು ಕೊಡುವುದು ದಂಡ ಪಾವತಿಗೆ ದಾರಿಯಾಗಲಿದೆ. 

ಗ್ರಾಹಕರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಹಾರ ಪದಾರ್ಥ ಪ್ಯಾಕ್‌ ಮಾಡಲು ವೃತ್ತ ಪತ್ರಿಕೆಗಳ ಬಳಕೆ ದೇಶಾದ್ಯಂತ ನಿಷೇಧಿಸಿದೆ.

ಎಫ್‌ಎಸ್‌ಎಸ್ಎಐ ಆದೇಶದ ಅನುಷ್ಠಾನಕ್ಕೆ ಈಗ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ನಿಯಂತ್ರಣ ಇಲಾಖೆ ಮುಂದಾಗಿದೆ. ಕೂಡಲೇ ವೃತ್ತ ಪತ್ರಿಕೆಗಳ ಬಳಕೆ ನಿಲ್ಲಿಸುವಂತೆ ಬಾಗಲಕೋಟೆ ಹೋಟೆಲ್ ಮಾಲೀಕರ ಸಂಘಕ್ಕೆ ಸುತ್ತೋಲೆ ಕಳುಹಿಸಿದೆ.

ADVERTISEMENT

ಆರೋಗ್ಯಕ್ಕೆ ಹಾನಿಕರ: ‘ವೃತ್ತ ಪತ್ರಿಕೆಗಳ ಮುದ್ರಣಕ್ಕೆ ಬಳಕೆ ಮಾಡಿರುವ ಶಾಹಿ (ಇಂಕ್) ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡಿದೆ. ಅವು ಆಹಾರ ಪದಾರ್ಥದೊಂದಿಗೆ ಮಿಶ್ರಣವಾದಲ್ಲಿ ಗ್ರಾಹಕರ ಹೊಟ್ಟೆ ಸೇರಲಿವೆ. ಇದರಿಂದ ಕ್ಯಾನ್ಸರ್‌ನಂತರ ಗಂಭೀರ ಆರೋಗ್ಯದ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಎಫ್‌ಎಸ್‌ಎಸ್‌ಎಐ ಎಚ್ಚರಿಸಿದೆ.

ಮೊದಲಿಗೆ ತಿಳಿವಳಿಕೆ: ಪ್ಯಾಕಿಂಗ್‌ಗೆ ವೃತ್ತ ಪತ್ರಿಕೆ ಬಳಕೆ ಮಾಡದಂತೆ ಜೂನ್‌ ಅಂತ್ಯದವರೆಗೂ ಹೋಟೆಲ್ ಮಾಲೀಕರು ಹಾಗೂ ಬೀದಿ ಬದಿಯ ಮಾರಾಟಗಾರರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮುಂದಿನ ಹಂತದಲ್ಲಿ ಎಚ್ಚರಿಕೆ ರೂಪದಲ್ಲಿ ನೋಟಿಸ್ ನೀಡಲಿದ್ದೇವೆ.

ಮತ್ತೆ ಅದೇ ಚಾಳಿ ಮುಂದಿವರೆಸಿದಲ್ಲಿ ಆಹಾರ ಸುರಕ್ಷತೆ ನಿಯಮ ಉಲ್ಲಂಘನೆ ಆರೋಪದ ಮೇಲೆ ಸಂಬಂಧಿಸಿದವರಿಗೆ ₹500ರಿಂದ 10,000ದವರೆಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ನಿಯಂತ್ರಣ ಇಲಾಖೆ ಅಧಿಕಾರಿ ಎಂ.ಎನ್.ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಮಾಹಿತಿ ನೀಡಿದ್ದೇವೆ: ‘ಆಹಾರ ಸುರಕ್ಷತೆ ಇಲಾಖೆ ಸೂಚನೆ ಅನ್ವಯ ಈಗಾಗಲೇ ನಮ್ಮ ವ್ಯಾಪ್ತಿಯ ಎಲ್ಲಾ 80 ಹೋಟೆಲ್‌ಗಳ ಮಾಲೀಕರಿಗೂ ಮಾಹಿತಿ ನೀಡಿದ್ದೇವೆ. ಅವರು ಪ್ಯಾಕಿಂಗ್‌ಗೆ ವೃತ್ತ ಪತ್ರಿಕೆ ಬಳಕೆ ಮಾಡುವುದನ್ನು ನಿಲ್ಲಿಸಿದ್ದಾರೆ’ ಎಂದು ಬಾಗಲಕೋಟೆ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ದಾಸ್ ಹೇಳುತ್ತಾರೆ.

‘ರಸ್ತೆ ಬದಿಯ ತಳ್ಳು–ಗಾಡಿ ವ್ಯಾಪಾರಸ್ಥರು ಮಾತ್ರ ಇನ್ನೂ ವೃತ್ತಪತ್ರಿಕೆ ಬಳಕೆ ಮಾಡುತ್ತಿದ್ದಾರೆ. ಆಹಾರ ಸುರಕ್ಷತೆಯ ಕಾನೂನು ಪಾಲಿಸದೇ ಗಾಳಿಗೆ ತೂರುತ್ತಿದ್ದಾರೆ. ಅವರ ವಿರುದ್ಧ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಯುಕ್ತರಿಗೆ ದೂರು ನೀಡಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.