ADVERTISEMENT

ತೇರದಾಳ ಬಂದ್‌ ಸಂಪೂರ್ಣ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 8:57 IST
Last Updated 13 ಡಿಸೆಂಬರ್ 2017, 8:57 IST
ತೇರದಾಳ ಬಂದ್‌ ಸಂದರ್ಭದಲ್ಲಿ ಬಸ್‌ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿರುವುದು.
ತೇರದಾಳ ಬಂದ್‌ ಸಂದರ್ಭದಲ್ಲಿ ಬಸ್‌ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿರುವುದು.   

ತೇರದಾಳ(ಬನಹಟ್ಟಿ): ತೇರದಾಳ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿಯ ಜನತೆ ನಾಲ್ಕೂವರೆ ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಸರ್ಕಾರ ತಾಲ್ಲೂಕು ಎಂದು ಘೋಷಣೆ ಮಾಡದಿದ್ದರೆ 2018ರ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಹೋರಾಟ ಸಮಿತಿ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಎಚ್ಚರಿಸಿದರು.

ಅವರು ಮಂಗಳವಾರ ಬಸ್‌ ನಿಲ್ದಾಣದ ಹತ್ತಿರ ಇರುವ ಬಸವೇಶ್ವರ ವೃತ್ತದ ಹತ್ತಿರ ತೇರದಾಳ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಬಂದ್‌ಗೆ ಕರೆದ ನೀಡಿದ್ದ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಮಾತನಾಡಿದರು.

ಈ ಕುರಿತು ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಹೇರಲು ಬೆಂಗಳೂರಿನಲ್ಲಿ ಮುಷ್ಕರ ಕೈಗೊಳ್ಳಲಾಗಿತ್ತು. ತಾಲ್ಲೂಕಿಗಾಗಿ ಕಳೆದ ಬಾರಿ ಪುರಸಭೆಯ ಚುನಾವಣೆಯನ್ನು ಬಹಿಷ್ಕರಿಸಲಾಗಿತ್ತು. ಪಟ್ಟಣವನ್ನು ತಾಲ್ಲೂಕು ಎಂದು ಘೋಷಣೆ ಮಾಡುವವರೆಗೆ ಧರಣಿ ಸತ್ಯಾಗ್ರಹವನ್ನು ಕೈಗೊಳ್ಳಲಾಗುವುದು. ಮೂಡಲಗಿ ಪಟ್ಟಣವನ್ನು ಮೊದಲು ಕೈ ಬಿಟ್ಟು, ಈಗ ಮತ್ತೆ ಮೂಡಲಗಿಯನ್ನು ಕೂಡಾ ತಾಲ್ಲೂಕು ಕೇಂದ್ರವೆಂದು ಘೋಷಣೆ ಮಾಡಿದ್ದಾರೆ. ಅದೇ ರೀತಿಯಾಗಿ ತೇರದಾಳನ್ನು ನೂತನ ತಾಲ್ಲೂಕು ಎಂದು ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ದಯಾನಂದ ಬಿಜ್ಜರಗಿ ಮಾತನಾಡಿ, ತೇರದಾಳ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿಸಲು ರಾಜಕೀಯ ಇಚ್ಛಾಶಕ್ತಿ ಕಡಿಮೆಯಾಗಿದೆ. ರಾಜ್ಯ ಸರ್ಕಾರಕ್ಕೆ ಸಾಕಷ್ಟು ಕಂದಾಯವನ್ನು ತೇರದಾಳ ಕಂದಾಯ ಇಲಾಖೆಯಿಂದ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಡಾ.ಡಿ.ಎಂ.ಕುಪಾಟೆ, ಅನ್ವರ್‌ ಸಂಗತ್ರಾಸ್‌, ಮದೆಪ್ಪ ಖವಾಸಿ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಭುಜಬಲಿ ಕೆಂಗಾಲಿ ಪಟ್ಟಣವನ್ನು ತಾಲ್ಲೂಕು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಜಮಖಂಡಿ ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಸ್ಥಳೀಯ ಕಲ್ಲಟ್ಟಿಯ ಗಲ್ಲಿಯ ಗಂಗಾಧರ ಮಠದಿಂದ ಆರಂಭಗೊಂಡ ಪ್ರತಿಭಟನಾ ರ್‍್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದ ಬಳಿ ಮುಕ್ತಾಯಗೊಂಡಿತು. ನಗರದ ವ್ಯಾಪಾರ, ವಹಿವಾಟ, ಅಂಗಡಿ ಮುಗ್ಗಟ್ಟುಗಳು, ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟಿದ್ದವು. ಬಸ್‌ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು. ಬಹಳಷ್ಟು ಜನರು ಟಂ ಟಂಗಳ ಮೊರೆ ಹೋದರು. ವೈದ್ಯಕೀಯ ಸೇವೆ ಮತ್ತು ತರಕಾರಿ ಮಾರುಕಟ್ಟೆ ಕಾರ್ಯ ಮಾಡಿದವು.

ಜಮಖಂಡಿ ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಬನಹಟ್ಟಿ ಸಿಪಿಐ ಬಿ.ಎಸ್‌.ಮಂಟೂರ ನೇತೃತ್ವದಲ್ಲಿ ನಾಲ್ಕು ಜನ ಪಿಎಸ್‌ಐ, ಎರಡು ಡಿ.ಆರ್‌.ತುಕಡಿಗಳು ಸೂಕ್ತ ಬಂದೊಬಸ್ತ್‌ ನೀಡಿದ್ದರು. ಸಂಗಪ್ಪ ಗಡೆನ್ನವರ ಹೋರಾಟ ಸಮಿತಿಗೆ ಹತ್ತು ಸಾವಿರ ಮತ್ತು ಪಟ್ಟಣದ ಸಹಕಾರಿ ಸಂಘಗಳು ತಲಾ ಒಂದೊಂದು ಸಾವಿರ ಹಣವನ್ನು ದೇಣಿಗೆಯಾಗಿ ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.