ADVERTISEMENT

ದೂಳಿನ ಮಜ್ಜನ; ಪ್ರಯಾಣಿಕರು ಹೈರಾಣ

ವೆಂಕಟೇಶ್ ಜಿ.ಎಚ್
Published 14 ಮೇ 2017, 10:25 IST
Last Updated 14 ಮೇ 2017, 10:25 IST
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ಲೋಕಾಪುರದ ಬಸ್‌ ನಿಲ್ದಾಣದ ನೋಟ
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ಲೋಕಾಪುರದ ಬಸ್‌ ನಿಲ್ದಾಣದ ನೋಟ   

ಬಾಗಲಕೋಟೆ: ಇಲ್ಲಿ ಬಸ್ ನಿಲ್ದಾಣದ ಒಳಗೆ ಕಾಲಿಟ್ಟರೆ ಪ್ರಯಾಣಿಕರ ತಲೆಗೆ ಕಲ್ಲಿನೇಟು, ದೂಳಿನ ಮಜ್ಜನ ಉಚಿತ!ಇದು ಮುಧೋಳ ತಾಲ್ಲೂಕು ಲೋಕಾಪುರದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣದ ದುಸ್ಥಿತಿ.

ಪ್ಲಾಟ್‌ಫಾರಂನ ತುಂಬಾ ಹರಡಿರುವ ಕಲ್ಲುಗಳು ಬಸ್‌ನ ಚಕ್ರದ ತುದಿಗೆ ಸಿಲುಕಿ ಸಿಡಿದು ನಿಲ್ದಾಣದಲ್ಲಿ ನಿಂತ ಪ್ರಯಾಣಿಕರಿಗೆ ಬಡಿಯುತ್ತಿವೆ. ತಲೆ,ಮೈ–ಕೈಗೆ ಏಟು ಬಿದ್ದು ರಕ್ತ ಸ್ರಾವ ಕ್ಕೀಡಾದವರನ್ನು ಹಲವು ಬಾರಿ ಸಂಸ್ಥೆ ಸಿಬ್ಬಂದಿಯೇ ಉಪಚರಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

‘ಕಲ್ಲು ಸಿಡಿದು ಪ್ರಯಾಣಿಕರಿಗೆ ಗಾಯಗೊಳ್ಳುತ್ತಿರುವ ಬಗ್ಗೆ ಸಂಸ್ಥೆಯ ಕೇಂದ್ರ ಕಚೇರಿಗೆ ವರದಿ ಸಲ್ಲಿಸಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಲ್ಲಿನ ಸಿಬ್ಬಂದಿ ಹೇಳುತ್ತಾರೆ.
ಸಂಪರ್ಕ ಕೇಂದ್ರ: ಬೆಳಗಾವಿ–ರಾಯಚೂರು ಹಾಗೂ ಧಾರವಾಡ–ರಾಮದುರ್ಗ–ವಿಜಯಪುರ ನಡುವಿನ ರಾಜ್ಯ ಹೆದ್ದಾರಿಗಳು ಲೋಕಾಪುರ ಮೂಲಕವೇ ಹಾಯ್ದು ಹೋಗಿವೆ. ಹಾಗಾಗಿ ಈ ಊರು ಹೈದರಾಬಾದ್ ಕರ್ನಾಟಕ ಭಾಗಕ್ಕೆ ಮಹಾರಾಷ್ಟ್ರ, ಗೋವಾ ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ.

ADVERTISEMENT

ಸಿಮೆಂಟ್, ಸುಣ್ಣದಕಲ್ಲಿನ ಗಣಿಗಾರಿಕೆ ಕಾರಣ ವಾಣಿಜ್ಯ ದೃಷ್ಟಿಯಿಂದಲೂ ಮಹತ್ವ ಹೊಂದಿರುವ ಲೋಕಾಪುರ ಪಟ್ಟಣದ ಮೂಲಕ ರಾಜ್ಯ ಹಾಗೂ ಹೊರರಾಜ್ಯದ 600ಕ್ಕೂ ಹೆಚ್ಚು ಬಸ್‌ಗಳು ದಿನದ 24 ಗಂಟೆಯೂ ಓಡಾಟ ನಡೆಸುತ್ತವೆ. ಬಸ್‌ ನಿಲ್ದಾಣದಲ್ಲಿ ಕೆಲಕಾಲ ತಂಗುತ್ತವೆ.

ಅವ್ಯವಸ್ಥೆಯ ಆಗರ: 1983ರಲ್ಲಿ ಅಂದಿನ ಸಾರಿಗೆ ಸಚಿವ ಎಂ.ಪಿ.ಪ್ರಕಾಶ್‌ ಅವರಿಂದ ಇಲ್ಲಿನ ಬಸ್‌ ನಿಲ್ದಾಣ ಉದ್ಘಾಟನೆಯಾಗಿದೆ. ಮೂರೂವರೆ ದಶಕಗಳ ನಂತರ ಬಸ್‌ ನಿಲ್ದಾಣ ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿದೆ.

ನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋದರೂ ಇಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಇದ್ದರೂ ನೀರು ಇಲ್ಲದೇ ಅದು ಬಳಕೆಗೆ ಬಾರದಂತಾಗಿವೆ. ಬಸ್‌ನಿಲ್ದಾಣಕ್ಕೆ ಶನಿವಾರ ‘ಪ್ರಜಾವಾಣಿ’ ಭೇಟಿ ಕೊಟ್ಟಾಗ ಆಗಷ್ಟೇ  ಸಾಂಗ್ಲಿ–ಯಾದಗಿರಿ ಬಸ್‌ ನಿಲ್ದಾಣಕ್ಕೆ ಬಂದಿತ್ತು. ಬಾಯಾರಿಕೆಯಿಂದ ದಣಿದಿದ್ದ ನಿರ್ವಾಹಕ ಬಸವಲಿಂಗ ರಾಠೋಡ ನೀರಿನ ಹುಡುಕಾಟದಲ್ಲಿದ್ದರು.

ಅದನ್ನು ಕಂಡ ಸಂಚಾರ ನಿಯಂತ್ರಕ ಎಚ್.ವಿ.ಜೋಶಿ, ಮನೆಯಿಂದ ತಂದಿದ್ದ ನೀರಿನ ಬಾಟಲಿಯನ್ನೇ ಕೊಟ್ಟರು. ‘ಸ್ವಲ್ಪವೇ ಕುಡಿ ಮಾರಾಯ ಸಂಜೆವರೆಗೂ ನನಗೆ ಬೇಕು’ ಎಂದು ಮನವಿ ಮಾಡಿದರು.

‘ಮಣ್ಣಿನ ಪ್ಲಾಟ್‌ಫಾರಂನ ಕಾರಣ ಬಸ್‌ಗಳು ಬರುತ್ತಿದ್ದಂತೆಯೇ ಪ್ರಯಾಣಿಕರ ಮೇಲೆ ದೂಳಿನ ಮಜ್ಜನವಾಗುತ್ತದೆ. ಉಸಿರಾಡಲೂ ಕಷ್ಟಪಡಬೇಕಾಗಿದೆ. ಪ್ರಯಾಣಿಕರು ಕಣ್ಣು ಉಜ್ಜಿಕೊಂಡು ಮುಂದೆ ಹೆಜ್ಜೆ ಇಡುತ್ತಿದ್ದಂತೆಯೇ ಬಸ್ ಹೊರಟು ಹೋಗಿರುತ್ತದೆ’ ಎಂದು ಪ್ರಯಾಣಿಕ ಅನೂಪ್‌ ಬಟಕುರ್ಕಿ ಅನುಭವ ಹಂಚಿಕೊಂಡರು.

‘ಬೇಸಿಗೆಯಲ್ಲಿ ಬಿಸಿಲ ಝಳಕ್ಕೆ ಬೆವರು ಹರಿದು ಅದು ದೂಳಿನೊಂದಿಗೆ ಮಿಶ್ರಣಗೊಂಡು ಹಳ್ಳಿಬಸ್‌ಗಳಿಗೆ ಗಂಟೆಗಟ್ಟಲೇ ನಿಂತು ಕಾಯುವ ಪ್ರಯಾಣಿಕರು ಹೈರಾಣರಾಗುತ್ತಾರೆ. ಇನ್ನು ಮಳೆಗಾಲದಲ್ಲಿ ನಿಲ್ದಾಣ ಪೂರ್ತಿ ಕೆಸರಿನ ಹೊಂಡವಾಗಿ ಮಾರ್ಪಡುತ್ತದೆ’ ಎಂದರು.


ಬಯಲು ಶೌಚಾಲಯ: ಬಸ್‌ ನಿಲ್ದಾಣದ ಖಾಲಿ ಜಾಗದಲ್ಲಿ ಮುಳ್ಳು–ಕಂಟಿಗಳು ಬೆಳೆದಿವೆ. ಅದನ್ನೀಗ ಊರಿನವರು ಬಯಲು ಶೌಚಾಲಯವಾಗಿ ಬಳಕೆ ಮಾಡುತ್ತಿದ್ದಾರೆ. ರಾತ್ರಿ ವೇಳೆ ಕಸ ತಂದು ಬಸ್‌ ನಿಲ್ದಾಣದ ಮೂಲೆಯಲ್ಲಿ ಸುರಿಯುತ್ತಾರೆ. ‘ಶಿಕ್ಷಿತರು, ಮನೆಯಲ್ಲಿ ಶೌಚಾಲಯ ಇದ್ದವರೂ ಇಲ್ಲಿಗೆ ಬಹಿರ್ದೆಸೆಗೆ ಬರುತ್ತಾರೆ. ಇದರಿಂದ ಹಂದಿ, ನಾಯಿಗಳ ಆಶ್ರಯ ತಾಣವಾಗಿ ಬದಲಾಗಿದೆ. ಜೊತೆಗೆ ದುರ್ನಾತವೂ ಹರಡಿದೆ’ ಎಂದು ಸ್ಥಳೀಯರಾದ ಮಹೇಶ ಬೇಸರ ವ್ಯಕ್ತಪಡಿಸುತ್ತಾರೆ.

ಲೋಕಾಪುರದಲ್ಲಿ ಹೊಸ ಬಸ್‌ ನಿಲ್ದಾಣ ಕಟ್ಟಲು ಉದ್ದೇಶಿಸಲಾಗಿದೆ. ಇದೇ 17ಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಶೀಘ್ರ ಯೋಜನೆ ಕೈಗೆತ್ತಿಕೊಳ್ಳಲಾಗುವುದು
ಪ್ರಶಾಂತ ಸುರಪುರ
ಮುಧೋಳ ಡಿಪೊ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.