ADVERTISEMENT

ದೇಶದ ಏಕತೆಗೆ ಹಿಂದಿ ಭಾಷೆ ಮಾಧ್ಯಮ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 5:49 IST
Last Updated 16 ಸೆಪ್ಟೆಂಬರ್ 2017, 5:49 IST

ಬಾಗಲಕೋಟೆ: ‘ರಾಷ್ಟ್ರೀಯ ಭಾಷೆಯಾದ ಹಿಂದಿ ಜನರ ನಾಲಿಗೆಯಿಂದ ದೂರ ಸರಿಯುತ್ತಿದೆ. ಪ್ರಾದೇಶಿಕ ಭಾಷೆಗಳಿಗೆ ಹಿಂದಿ ಪ್ರತಿಸ್ಪರ್ಧಿ ಎನಿಸಿದರೂ ಅದನ್ನು ಕಲಿಯುವ ಅಗತ್ಯವಿದೆ’ ಎಂದು ವಿಜಯಪುರದ ಅಂಜುಮನ್ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಹಿಂದಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಎಸ್.ಜೆ. ಜಹಗೀರದಾರ ಹೇಳಿದರು.

ಇಲ್ಲಿನ ಬಿ.ವಿ.ವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ‘ರಾಷ್ಟ್ರೀಯ ಹಿಂದಿ ದಿವಸ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಅನ್ಯಭಾಷೆಗಳನ್ನು ದ್ವೇಷಿಸ­ಬಾರದು. ಭಾಷೆಗೆ ಭಾವನಾತ್ಮಕ ಬೆಸು­ಗೆಯ ಶಕ್ತಿ ಇದೆ. ಜನರ ಆಡುಭಾಷೆ, ಆಡಳಿತ ಭಾಷೆ ಅಥವಾ ರಾಷ್ಟ್ರಭಾಷೆ­ಯಾಗಿ ಹಿಂದಿ ಬೆಳೆದು ನಿಂತಿದೆ. ಅದ­ಕ್ಕಾಗಿ ಹಿಂದಿ ಕಲಿಕೆ ಅವಶ್ಯಕತೆ ಇದೆ’ ಎಂದರು.

ADVERTISEMENT

‘ಹಿಂದಿ ಭಾಷೆ ಎಲ್ಲಾ ರಾಜ್ಯಗಳನ್ನು  ಬೆಸೆದು ರಾಷ್ಟ್ರದ ಏಕತೆಗೆ ಸಹಕಾರಿ­ಯಾಗಿದೆ. ಭಾಷೆಯಲ್ಲಿ ಭಾವನಾತ್ಮಕತೆ ಇದೆ. ಚೆನ್ನಾಗಿ ಮಾತನಾಡುವ ವ್ಯಕ್ತಿ ಸುಂದರ ಬದುಕು ಕಟ್ಟಿಕೊಳ್ಳಬಲ್ಲ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಪ್ರೊ. ಎಸ್.ಎಚ್.ಶೆಟ್ಟರ, ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆ ಕಲಿತರೆ ಉದ್ಯೋಗಾವ­ಕಾಶಗಳು ಸಾಕಷ್ಟಿವೆ. ಅಂತಹ ಸಂದರ್ಭ ಬಳಸಿಕೊಳ್ಳಬೇಕು. ಮಾತೃಭಾಷೆಯಾಗಿ ಕನ್ನಡ, ಆಡಳಿತ ಭಾಷೆಯಾಗಿ ಇಂಗ್ಲಿಷ್ ಹಾಗೂ ರಾಷ್ಟ್ರೀಯ ಭಾಷೆಯಾಗಿ ಹಿಂದಿ ಕಲಿಯುವ ಮೂಲಕ ಭಾಷಾ ಸಾಮರಸ್ಯ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹಿಂದಿ ದಿವಸ ಪ್ರಯುಕ್ತ ಪ್ರಬಂಧ, ಶಾಯಿರಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಹಿಂದಿ ಉಪನ್ಯಾಸಕರಾದ ಡಾ. ಎಂ.ಪಿ. ಗೌಡಗಾಂವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಯೋಜಕ ಡಾ. ಜೆ.ವಿ. ಚೌಹಾಣ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಎಂ.ವಿ. ಜಿಗಬಡ್ಡಿ, ಡಾ. ಎಂ.ಎನ್. ಪಾಟೀಲ, ಪ್ರೊ. ಬಿ.ಪಿ. ಕುಂಬಾರ, ಪ್ರೊ. ಎಸ್.ಐ. ಪತ್ತಾರ, ಪ್ರೊ. ಸಿ.ಎ. ಹಿರೇಮಠ, ಪ್ರೊ. ಮಂಜುನಾಥ ಬುರ್ಲಿ, ಪ್ರೊ. ಐ.ಎಸ್.ತಿಡಗುಂದಿ, ಎಂ.ಐ. ಕಂಬಾರ, ವಿದ್ಯಾರ್ಥಿಗಳು ಇದ್ದರು.

ಇಂಗ್ಲಿಷ್‌ ವ್ಯಾಮೋಹದಿಂದ ಹಿಂದಿಗೆ ಪ್ರಾಮುಖ್ಯತೆ ದೊರೆತಿಲ್ಲ
ಜಮಖಂಡಿ: ಇಂಗ್ಲಿಷ್‌ ಭಾಷೆಯ ಮೇಲಿನ ವ್ಯಾಮೋಹ ಹಾಗೂ ಪ್ರಾದೇಶಿ­ಕತೆಯ ಸಂಕುಚಿತ ಭಾವನೆಯಿಂದಾಗಿ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರಭಾಷೆ ಹಿಂದಿಗೆ ದೊರೆಯಬೇಕಾದ ಪ್ರಾಮುಖ್ಯತೆ ದೊರೆ­ಯುತ್ತಿಲ್ಲ ಎಂದು ವಿಜಯಪುರ ಬಿ.ಡಿ. ಜತ್ತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಿ.ಎಂ. ಅಡಕಿ ಅಭಿಪ್ರಾಯಪಟ್ಟರು.

ಸ್ಥಳೀಯ ಬಿಎಲ್‌ಡಿಇ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್‌ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜಿನ ಹಿಂದಿ ವಿಭಾಗದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಹಿಂದಿ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಬಹುಭಾಷೆಗಳಲ್ಲಿನ ಶಬ್ದಗಳನ್ನು ಹಿಂದಿ ಭಾಷೆಯಲ್ಲಿ ಅಳವಡಿಸಿಕೊಳ್ಳ­ಲಾಗಿದೆ. ಹಿಂದಿ ಅತ್ಯಂತ ಸರಳ ಭಾಷೆ. ಗಂಗಾ ನೀರಿನಷ್ಟೇ ಹಿಂದಿ ಭಾಷೆ ಪವಿತ್ರ­ವಾಗಿದೆ. ಹಿಂದಿ ಭಾಷೆಯಲ್ಲಿ ದೇವವಾಣಿ ಇದೆ. ಹಿಂದಿಗೆ ದೇವನಾಗರಿ ಲಿಪಿ ಇದೆ. ಹಿಂದಿ ಹಿಂದಿ ಭಾಷೆಯ ಬೆಳವಣಿಗೆಗೆ ಎಲ್ಲರೂ ಶಪಥ ಮಾಡಬೇಕು ಎಂದರು.

ಪ್ರಾಚಾರ್ಯ ಡಾ.ಎಸ್‌.ಸಿ. ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಕೆ. ಚನ್ನಬಸಪ್ಪ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿ.ಎಲ್‌. ನಾರಾಯಣಕರ, ಡಾ.ಮಲ್ಲಿಕಾರ್ಜುನ ಮಠ ವೇದಿಕೆಯಲ್ಲಿದ್ದರು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ರುತಿ ನಿಡೋಣಿ, ಜಂತುಬ ನದಾಫ, ಆಕಾಶ ಕಾಂಬಳೆ, ಆರತಿ ಹಜಾರಿ, ಕೇದಾರ ಸಾವಂತ ಅವರನ್ನು ಸನ್ಮಾನಿಸಲಾಯಿತು.
ಲಕ್ಷ್ಮಿ ಜಿರಲಿ, ಕೋಮಲ ತಳವಾರ ಸ್ವಾಗತ ಗೀತೆ ಹಾಡಿದರು. ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ.ಎ.ವಿ. ಸೂರ್ಯವಂಶಿ ಸ್ವಾಗತಿಸಿದರು. ಶಬನಮ ಕೊಲ್ಹಾರ, ಆರತಿ ಹಜಾರಿ ನಿರೂಪಿಸಿದರು. ಕಿಶನಲಾಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.