ADVERTISEMENT

ನಜೀಬ್‌ ಪತ್ತೆಗೆ ಆಗ್ರಹಿಸಿ ರಾಷ್ಟ್ರಪತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 6:18 IST
Last Updated 1 ಮಾರ್ಚ್ 2017, 6:18 IST

ಇಳಕಲ್‌:  ದೆಹಲಿಯ ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಕಾಣೆಯಾಗಿರುವ ಸಂಶೋಧನಾ ವಿದ್ಯಾರ್ಥಿ ನಜೀಬ್‌ ಅಹ್ಮದ್‌ ಅವರನ್ನು ಹುಡುಕಿಕೊಡುವಂತೆ ಆಗ್ರಹಿಸಿ ಭಾನುವಾರ ಇಲ್ಲಿಯ ಕಂಠಿ ವೃತ್ತದಲ್ಲಿ ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಆರ್ಗನೈಜೇಶನ್‌ ಆಫ್ ಇಂಡಿಯಾ (ಎಸ್‌ಐಓ) ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ವಿಶೇಷ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
 
ಎಸ್‌ಐಓ ರಾಜ್ಯ ಕಾರ್ಯದರ್ಶಿ ಜಿಶಾನ್‌ ಸಿದ್ದಿಕಿ ಮಾತನಾಡಿ, ‘ಜೆಎನ್‌ಯು ಬಯೋ ಟೆಕ್ನಾಲಜಿ ವಿಭಾಗದ ಸಂಶೋಧನಾ ವಿದ್ಯಾರ್ಥಿ ನಜೀಬ್‌ ಅಹ್ಮದ್‌ ಮೇಲೆ 2016ರ ಅಕ್ಟೋಬರ್‌ 14ರಂದು ವಿಶ್ವವಿದ್ಯಾಲಯ ಆವರಣದಲ್ಲಿಯೇ ಹಲ್ಲೆ ನಡೆಯಿತು. ನಂತರ ಕಾಣೆಯಾಗಿದ್ದಾನೆ.

ನಜೀಬ್‌ ನಾಪತ್ತೆ ಹಿಂದೆ ದೇಶದ ಪಟ್ಟಭದ್ರ ಹಿತಾಶಕ್ತಿಗಳ ಕೈವಾಡವಿದೆ. ಅನೇಕ ತಿಂಗಳುಗಳೇ ಗತಿಸಿದರೂ ದೆಹಲಿಯ ಪೊಲೀಸರಾಗಲಿ, ಕೇಂದ್ರ ಸರ್ಕಾರವಾಗಲಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ಗಮನಿಸಿದರೇ ಅವರ ಮೇಲೆಯೇ ಅನುಮಾನ ಬರುತ್ತದೆ’ ಎಂದು ಆರೋಪಿಸಿದರು.

ಎಸ್ಐಓ ಜಿಲ್ಲಾ ಸಂಚಾಲಕ ಇಬ್ರಾಹಿಂ ಸಯೀದ್‌ ಹುಮ್ನಾಬಾದ್‌ ಮಾತನಾಡಿ, ‘ಮನ್ ಕೀ ಬಾತ್ ಎಂದು ದೇಶವನ್ನು ಉದ್ದೇಶಿಸಿ ಮನದ ಮಾತುಗಳನ್ನು ಆಡುತ್ತಿರುವುದಾಗಿ ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಜೀಬ್‌ ಅಹ್ಮದನ ತಾಯಿಯ  ಮನ್ ಕಿ ಬಾತ್  ಕೇಳುತ್ತಿಲ್ಲವೆ?  ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾದ ರಾಜ್ಯ ಘಟಕದ ಉಪಾಧ್ಯಕ್ಷ ತಾಜುದ್ಧಿನ್ ಹುಮ್ನಾಬಾದ, ಇಳಕಲ್‌ ಘಟಕದ ಅಧ್ಯಕ್ಷ ಸಿರಾಜ್‌ ಹುಣಸಗಿ, ಕಾರ್ಯದರ್ಶಿ ಅಬಿಬ್‌ ರೆಹಮಾನ್‌ ತಾವರಗೇರಿ, ಲಿಯಾಕತ್‌ ಶೇಖ್‌, ಜಮಾತೆ ಇಸ್ಲಾಂ ಹಿಂದ್‌ನ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಸಂಚಾಲಕ ಮೆಹಬೂಬ್‌ ಆಲಂ ಬಡಗನ್,  ಕಾರ್ಯದರ್ಶಿ ಅಬ್ದುಲ್ ರೆಹಮಾನ್‌ ಬಿಳೇಕುದರಿ, ಬಹಾವುದ್ಧಿನ್‌ ಖಾಜಿ, ಹುಸೇನ್‌ಬಾಷಾ ಸೂಳೆಬಾವಿ, ಮೆಹಬೂಬ್‌ ಗಬ್ಬೂರ್‌, ಅಬ್ದುಲ್‌ ಗಫಾರ್‌ ತಹಶೀಲ್ದಾರ್, ಫಾರೂಕ್ ಉಮರಿ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.