ADVERTISEMENT

ನದಿಯಿದ್ದರೂ ಕುಡಿವ ನೀರಿಗೆ ಹಾಹಾಕಾರ!

ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ; ಕಿತ್ತಲಿ ಗ್ರಾಮಸ್ಥರ ಪರಿಸ್ಥಿತಿ, ಗ್ರಾಮದ ಕೊಳವೆಬಾವಿಗಳಲ್ಲಿ ನೀರೇ ಇಲ್ಲ..

ವೆಂಕಟೇಶ್ ಜಿ.ಎಚ್
Published 18 ಜನವರಿ 2017, 5:54 IST
Last Updated 18 ಜನವರಿ 2017, 5:54 IST
ಬಾದಾಮಿ ತಾಲ್ಲೂಕು ಕಿತ್ತಲಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ
ಬಾದಾಮಿ ತಾಲ್ಲೂಕು ಕಿತ್ತಲಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ   

ಬಾಗಲಕೋಟೆ: ‘ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’ ಇದು ಬಾದಾಮಿ ತಾಲ್ಲೂಕು ಕಿತ್ತಲಿ ಗ್ರಾಮಸ್ಥರ ಹಾಡು–ಪಾಡು. ಊರ ಪಕ್ಕದಲ್ಲಿ ಮಲಪ್ರಭಾ ನದಿ ಹರಿದರೂ ಕಳೆದ 20 ದಿನಗಳಿಂದ ಕುಡಿಯಲು ನೀರು ಸಿಗದೇ ಗ್ರಾಮದಲ್ಲಿ ತೀವ್ರ ಹಾಹಾಕಾರ ತಲೆದೋರಿದೆ.

ನೀರು ಇಲ್ಲದೇ ಮಲಪ್ರಭಾ ನದಿ ಬತ್ತಿ ಹೋಗಿದ್ದು, ಊರಿನಲ್ಲಿ ಕುಡಿ ಯುವ ನೀರಿನ ಮೂಲವಾಗಿದ್ದ ಮೂರು ಕೊಳವೆ ಬಾವಿಗಳೂ ಕೈಕೊಟ್ಟಿವೆ. ಇದ ರಿಂದ ಒಂದು ಸಾವಿರ ಮನೆಗಳು ಇರುವ ಊರಿನಲ್ಲಿ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ತಲೆದೋರಿದೆ ಎಂದು ಗ್ರಾಮ ಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಟ್ಯಾಂಕರ್ ನೀರು: ಕೊಳವೆಬಾವಿಗಳು ಬತ್ತಿರುವ ಕಾರಣ ಗ್ರಾಮಕ್ಕೆ ಈಗ ನಿತ್ಯ ಮೂರು ಟ್ಯಾಂಕರ್ ನೀರು ಕೊಡಲಾಗು ತ್ತಿದೆ. ಆರು ಸಾವಿರ ಜನಸಂಖ್ಯೆ ಇದ್ದು, ಗ್ರಾಮ ಪಂಚಾಯ್ತಿಯಿಂದ ಪೂರೈಸುತ್ತಿ ರುವ ನೀರು ಯಾವುದಕ್ಕೂ ಸಾಲುವು ದಿಲ್ಲ. ಅದರಿಂದ ಕುಡಿಯುವ ನೀರಿನ ಬೇಡಿಕೆ ಈಡೇರಿಸಿಕೊಳ್ಳಬಹುದು. ಆದರೆ ದನ–ಕರುಗಳಿಗೆ ಕುಡಿಯಲು ಹಾಗೂ ನಿತ್ಯದ ಬಳಕೆಗೆ ಏನು ಮಾಡ ಬೇಕು ಎಂದು ಪ್ರಶ್ನಿಸುವ ಗ್ರಾಮದ ನಿವಾಸಿ ಪ್ರಕಾಶ ಗಾಣಿಗೇರ, ಇದರಿಂದ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎನ್ನುತ್ತಾರೆ.

ಪ್ರಭಾವಿಗಳಿಗೆ ಮೊದಲ ಆದ್ಯತೆ: ‘ಟ್ಯಾಂಕರ್ ಮೂಲಕ ನೀರು ಪೂರೈಸುವ ವೇಳೆ ಮೊದಲು ಪಂಚಾಯ್ತಿ ಸದಸ್ಯರಿಗೆ ಆದ್ಯತೆ ನೀಡಲಾಗುತ್ತಿದೆ.  ಮೊದಲು ಅವರ ಮನೆಗಳಿಗೆ  ತೆರಳಿ ಟ್ಯಾಂಕರ್‌ಗಳು ನೀರು ಪೂರೈಸಿದ ನಂತರ ಗ್ರಾಮದ ಬೇರೆಯವರಿಗೆ ನೀರು ಕೊಡುತ್ತಿವೆ. ಇದರಿಂದ ಎಲ್ಲರಿಗೂ ಸರಿಯಾಗಿ ನೀರು ಸಿಗುತ್ತಿಲ್ಲ’ ಎಂದು ಆರೋಪಿಸುವ ಅವರು, ‘ವಾಹನಗಳಲ್ಲಿ ಸುತ್ತಲಿನ ತೋಟ, ಹೊಲಗಳ ಕೊಳವೆ ಬಾವಿ ಗಳಿಂದ ನೀರು ತಂದು ಕೆಲವರು ನೀರಿನ ಬೇಡಿಕೆ ಪೂರೈಸಿಕೊಳ್ಳುತ್ತಿದ್ದಾರೆ. ಆದರೆ ಬಡವರ ಸ್ಥಿತಿ ದೇವರಿಗೆ ಪ್ರೀತಿ’ ಎಂದು ಗಾಣಿಗೇರ ಬೇಸರ ವ್ಯಕ್ತಪಡಿಸುತ್ತಾರೆ.

ಜಾಕ್‌ವೆಲ್‌ಗೆ ಗ್ರಹಣ:  ಕಿತ್ತಲಿ ಸೇರಿದಂತೆ ಸುತ್ತಲಿನ ಸುಳ್ಳ, ಕಳಸ ಹಾಗೂ ಗೋವನಕೊಪ್ಪ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ಜಾಕ್‌ ವೆಲ್ ನಿರ್ಮಿಸಲಾಗಿದೆ. ಯೋಜನೆ ಮುಗಿದು ನಾಲ್ಕು ವರ್ಷಗಳು ಕಳೆದರೂ ಅದು ಇನ್ನೂ ಕಾರ್ಯಾರಂಭ ಮಾಡಿಲ್ಲ. ಇದರಿಂದ ಜಾಕ್‌ವೆಲ್‌ಗೆ ಅಳವಡಿಸಿ ರುವ ಉಪಕರಣಗಳು ತುಕ್ಕು ಹಿಡಿದಿವೆ ಎಂದು ಗಾಣಿಗೇರ ತಿಳಿಸಿದರು.

ಸಮಸ್ಯೆ ಗಮನಕ್ಕೆ ಬಂದಿದೆ: ‘ಟ್ಯಾಂಕರ್‌ ಮೂಲಕ ನೀರು ಪೂರೈಕೆ ವೇಳೆ ಮೊದಲು ಪಂಚಾಯ್ತಿ ಸದಸ್ಯರಿಗೆ ಆದ್ಯತೆ ನೀಡಲಾಗುತ್ತಿದೆ ಎಂಬ ದೂರು ನನಗೂ ಬಂದಿತ್ತು. ಹಾಗಾಗಿ ಟ್ಯಾಂಕರ್‌ಗಳನ್ನು ಊರಿನ ಮಧ್ಯದಲ್ಲಿ ನಿಲ್ಲಿಸಲು ಚಾಲಕ ರಿಗೆ ಸೂಚನೆ ನೀಡಲಾಗಿದೆ’ ಎಂದು ಬಾದಾಮಿ ತಾಲ್ಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಬಿ.ಮ್ಯಾಗೇರಿ ತಿಳಿಸಿದರು.

‘ಈಗ ಪ್ರತಿ ಮನುಷ್ಯನಿಗೆ ದಿನಕ್ಕೆ ಅಗತ್ಯವಿರುವ ಪ್ರಮಾಣದ (ಎಲ್‌ಪಿ ಸಿಡಿ) ಅನ್ವಯ ನೀರು ಪೂರೈಸಲಾಗು ತ್ತಿದೆ. ಅಗತ್ಯಬಿದ್ದಲ್ಲಿ ದನಕರುಗಳಿಗೆ ಪ್ರತ್ಯೇಕವಾಗಿ ನೀರಿನ ವ್ಯವಸ್ಥೆ ಮಾಡು ವುದಾಗಿ’ ಮ್ಯಾಗೇರಿ ಹೇಳಿದರು.

ಜಾಕ್‌ವೆಲ್‌; ವರದಿ ಕೇಳಿರುವೆ..
ಕಿತ್ತಲಿ ಬಳಿ ಜಲನಿರ್ಮಲ ಯೋಜನೆಯಡಿ ಮಲಪ್ರಭಾ ನದಿಗೆ ಜಾಕ್‌ವೆಲ್ ನಿರ್ಮಿಸಲಾ ಗಿದೆ. ಅದು ಇನ್ನೂ ಕಾರ್ಯಾ ರಂಭ ಮಾಡಿಲ್ಲ ಎಂಬ ಸಂಗತಿ ಯನ್ನು ಸೋಮವಾರವಷ್ಟೇ ಅಲ್ಲಿನ ಪಿಡಿಓ ನನ್ನ ಗಮನಕ್ಕೆ ತಂದಿದ್ದಾರೆ. ಆ ಬಗ್ಗೆ ವರದಿ ನೀಡುವಂತೆ ಕೇಳಿದ್ದೇನೆ. ಪಿಡಿಒ ವರದಿ ಕೊಟ್ಟ ನಂತರ ಅದನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಲ್ಲಿಸಲಾಗುವುದು. ಶೀಘ್ರ ನಾನೂ ಸ್ಥಳಕ್ಕೆ ಭೇಟಿ ನೀಡುವೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಬಿ.ಮ್ಯಾಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.