ADVERTISEMENT

ನಾಲೆಗೆ ನೀರು ಹರಿಸಲು ಒತ್ತಾಯ

ಏ. 3ರಂದು ಬೀಳಗಿ ಬಂದ್‌ಗೆ ಕರೆ, ರಾಷ್ಟ್ರೀಯ ಹೆದ್ದಾರಿ 218ರ ತಡೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 8:48 IST
Last Updated 22 ಮಾರ್ಚ್ 2017, 8:48 IST

ಬೀಳಗಿ: ಕೆರೆಗೆ ನೀರು ತುಂಬುವ ಯೋಜನೆಯಡಿ ₹ 1.98 ಕೋಟಿ ವೆಚ್ಚದ ಪಟ್ಟಣದ ಕೆರೆ ಕಾಮಗಾರಿ ಸೇರಿದಂತೆ ತಾಲ್ಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬುವ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಲಾಯಿತು.

ಪಟ್ಟಣದ ಮಲ್ಲಿಕಾರ್ಜುನ ದೇಗುಳದಲ್ಲಿ ಭಾರತೀಯ ಕಿಸಾನ್ ಸಂಘ, ತಾಲ್ಲೂಕು ಸಾರ್ವಜನಿಕ ಹಿತ ರಕ್ಷಣಾ ವೇದಿಕೆ ಸಂಯುಕ್ತವಾಗಿ ಸಂಘಟಿಸಿದ್ದ ಸಭೆಯಲ್ಲಿ ಸಂಘಟನೆಗಳ ಪ್ರಮುಖರು ಮಾತನಾಡಿದರು.

ಗಲಗಲಿ ಬಳಿ ಕೃಷ್ಣಾ ನದಿಯಿಂದ ನೀರನ್ನು 10 ಕಿ.ಮೀ.ದೂರದ ಘಟಪ್ರಭಾ ಕಾಲುವೆಗೆ (ಎಕ್ಕಾಹತ್ತರ ವರೆಗೆ) ಸಾಗಿಸಿದರೆ ಸಂಪೂರ್ಣ ಬೀಳಗಿ ತಾಲ್ಲೂಕು, ಮುಧೋಳ ತಾಲ್ಲೂಕಿನ ಜಮೀನುಗಳು ಸಂಪೂರ್ಣವಾಗಿ ನೀರಾವರಿಗೊಳಪಡುತ್ತವೆ. ಜೊತೆಗೆ ಜಿ.ಎಲ್.ಬಿ.ಸಿ. ಕಾಲುವೆ ಮೇಲಿರುವ ಒತ್ತಡ ಕಡಿಮೆಯಾಗುತ್ತದೆ ಎಂದು ಸಲಹೆ ಮಾಡಲಾಯಿತು.

ತಾಲ್ಲೂಕಿನ 19 ಗ್ರಾಮಗಳ 2,793 ರೈತರ 3,238 ಹೆಕ್ಟೇರ್ ಜಮೀನಿಗೆ 2016–17ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನ ತೇವಾಂಶ ಕೊರತೆಯಿಂದಾದ ₹ 80.51 ಲಕ್ಷ ಬೆಳೆ ಪರಿಹಾರ ಇನ್ನೂ ದೊರೆತಿಲ್ಲವೆಂದು ಸಭೆಯಲ್ಲಿ ವಿಷಾದಿಸಲಾಯಿತು.

ಸವುಳು, ಜವುಳು ಭೂಮಿಯ ಸುಧಾರಣೆಗೆ ಒತ್ತಾಯಿಸಿದ ಸಭೆ ಪಟ್ಟಣದ ರಸ್ತೆ ವಿಸ್ತರಣೆ, ಆಮೆಗತಿಯಲ್ಲಿ ಸಾಗಿರುವ ಒಳಚರಂಡಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಸಂಬಂಧಿಸಿದವರನ್ನು ಒತ್ತಾಯಿಸಿತು.

ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಸಮಿತಿ ಒಡೆದು ಈಗಾಗಲೇ ಮೂರಾಗುವ ಹಂತ ತಲುಪಿದೆ. ಹೀಗಾಗುವುದರಿಂದ ಸಂತ್ರಸ್ತರಿಗೆ ಸರಿಯಾದ ನ್ಯಾಯ ಸಿಗುವುದಿಲ್ಲ. ಅಧಿಕಾರಿಗಳು ಒಡಕಿನ ಲಾಭ ಪಡೆದುಕೊಂಡು ಉದಾಸೀನ ಮಾಡುತ್ತ ಹೋಗುತ್ತಾರೆ. ಸರ್ಕಾರವೂ ನಿರ್ಲಕ್ಷಿಸುತ್ತದೆ.

ಆ ಕಾರಣಕ್ಕಾಗಿ ಎಲ್ಲರೂ ಒತ್ತಟ್ಟಿಗೆ ಕುಳಿತು ಚರ್ಚಿಸಿ ಒಂದೇ ಸಮಿತಿಯಡಿ ಕೆಲಸ ಮಾಡಲು ವಿನಂತಿಸಿಕೊಳ್ಳಲಾಯಿತು. ಇವೆಲ್ಲವುಗಳನ್ನು ಸಂಬಂಧಿಸಿದವರ ಗಮನಕ್ಕೆ ತರಲು ಏ.3ರಂದು ಬೀಳಗಿ ಬಂದ್ ಗೆ ಕರೆ ನೀಡಲಾಗುವುದು. ಜೊತೆಗೆ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ರಸ್ತೆತಡೆ ನಡೆಸಲಾಗುವುದು ಎಂದ ತಿಳಿಸಲಾಯಿತು.

ರೈತ ಮುಖಂಡ ಸಿದ್ದಣ್ಣ ನಾಯ್ಕರ ಅಧ್ಯಕ್ಷತೆವಹಿಸಿದ್ದರು. ಎಸ್.ಎನ್.ಪಾಟೀಲ, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿ.ಜಿ.ರೇವಡಿಗಾರ, ಬಸನಗೌಡ ಪಾಟೀಲ, ಗುರುಸಿದ್ದಪ್ಪ ಪೂಜಾರಿ, ಸದಾನಂದ ಶೆಟ್ಟರ,ಮಲ್ಲಪ್ಪ ಮೇಟಿ, ಬಸಪ್ಪ ಚಲವಾದಿ ಇದ್ದರು. ಪ್ರೊ.ಎಸ್.ಎನ್.ಮುತ್ತಗಿ ಸ್ವಾಗತಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.