ADVERTISEMENT

ನೇಕಾರಿಕೆ ವೃತ್ತಿ ಉಳಿವಿಗೆ ಒಗ್ಗಟ್ಟು ಅತ್ಯವಶ್ಯ

ಸ್ವಕುಳಸಾಳಿ ವಾರ್ತೆ ಪತ್ರಿಕೆಯ 7ನೇ ವರ್ಷದ ಸಂಚಿಕೆ ಬಿಡುಗಡೆ ವೇಳೆ ಸಚಿವೆ ಉಮಾಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 6:51 IST
Last Updated 20 ಫೆಬ್ರುವರಿ 2017, 6:51 IST

ಬನಹಟ್ಟಿ: ನೇಕಾರರ ಸಮುದಾಯದಲ್ಲಿ ಶಕ್ತಿ ಇದೆ, ಯುಕ್ತಿ ಇದೆ. ನೇಕಾರರನ್ನು ಗುರುತಿಸುವ, ರಕ್ಷಿಸುವ ಮತ್ತು ಪ್ರೋತ್ಸಾ­ಹಿಸುವ ಕಾರ್ಯಗಳಾಗಬೇಕು. ನೇಕಾ­ರರು  ಶಕ್ತಿ ಮತ್ತು ಸ್ವಾಭಿಮಾನದಿಂದ ಬದು­ಕಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಉಸ್ತು­ವಾರಿ ಸಚಿವೆ ಉಮಾಶ್ರೀ ತಿಳಿಸಿದರು.

ಅವರು ಭಾನುವಾರ ಸಮೀಪದ ರಾಮಪುರದ ಜಿಹ್ವೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸ್ವಕುಳ­ಸಾಳಿ ಸಮಾಜದ ಸ್ವಕುಳಸಾಳಿ ವಾರ್ತೆ ಮಾಸ ಪತ್ರಿಕೆಯ 7ನೇ ವರ್ಷದ ಪ್ರಥಮ ಸಂಚಿಕೆ ಬಿಡುಗಡೆ ಮತ್ತು ಸಮಾಜದ ಸರ್ವ ಸಾಧರಣ ಸಭೆ ಉದ್ಘಾಟಿಸಿ ಮಾತನಾಡಿದರು.

ನೇಕಾರರು ರಾಜಕೀಯವಾಗಿ, ಸಾಮಾ­ಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿ­ಕ­ವಾಗಿ ಅಭಿವೃದ್ಧಿ ಹೊಂದಬೇಕು. ಅದ­ಕ್ಕಾಗಿ ನೇಕಾರಿಕೆ ವೃತ್ತಿ ಉಳಿಯುವಂತೆ ನಾವೆಲ್ಲರೂ ಚಿಂತನೆ ಮಾಡಬೇಕಾದ ಅಗತ್ಯವಿದೆ. ನೇಕಾರರು ಇಂದು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ  ನೇಕಾರ ವೃತ್ತಿಯ ಉಳಿವೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯ ಮಾಡಬೇಕಾಗಿದೆ ಎಂದರು.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರಗಿ ಮಾತನಾಡಿ 29 ಉಪ ಪಂಗಡಗಳನ್ನು ಒಳಗೊಂಡ ನೇಕಾರರು ರಾಜ್ಯದಲ್ಲಿ ಅಂದಾಜು 50ರಿಂದ 60 ಲಕ್ಷ ಜನಸಂಖ್ಯೆ ಇದೆ. ಇವರೆಲ್ಲರೂ ಒಗ್ಗಟ್ಟಾಗಿ ಕಾರ್ಯ ಮಾಡಬೇಕಾಗಿದೆ. ಪ್ರಜ್ಞಾವಂತ ಸಮಾಜದ­ವರಾದ ನೇಕಾರರು ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ ಸೋರಗಾವಿ ಮಾತನಾಡಿದರು. ಕರ್ನಾ­ಟಕ ರಾಜ್ಯ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಚಂದ್ರಕಾಂತ ಭಂಡಾರಿ ಕಾರ್ಯ­ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಶಿವಾನಂದ ಕುಟೀರದ ಸದಾನಂದ ಭಸ್ಮೆ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಅಖಿಲ ಭಾರತ ಸ್ವಕುಳಸಾಳಿ ವಿದ್ಯಾವರ್ಧಕ ಸಂಘಧ ಅಧ್ಯಕ್ಷ ರಮೇಶ ಚಿಲ್ಲಾಳೆ, ಡಾ.ಮನೋಹರ ಕಾರ್ವೇಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದುಂಡಪ್ಪ ಕರಿಗಾರ, ಅಖಿಲ ಕರ್ನಾಟಕ ಸ್ವಕುಳಸಾಳಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಜಿಂದೆ ಇದ್ದರು.

ಸೋನಾಲಿ ಕಾರ್ವೇಕರ್‌ ಮತ್ತು ವಾಸುದೇವ ಜೋಶಿ ಪ್ರಾರ್ಥಿಸಿದರು. ಸ್ಥಳೀಯ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಮಹಾದೇವ ದಳವಿ ಪ್ರಾಸ್ತಾವಿಕ ನುಡಿ­ಗಳ­ನ್ನಾಡಿದರು. ಸೋನಾಲಿ ಮಾಂಡ­ವಕರ್‌ ಸ್ವಾಗತಿಸಿದರು. ಸುಶೀಲ ದಳವಿ ವಂದಿಸಿದರು. ಜಿ.ಎಸ್‌.ವಡಗಾವಿ ನಿರೂ­ಪಿಸಿದರು. ಸಂಗಪ್ಪ ಕುಂದಗೋಳ, ಚಂದ್ರು ಪಟ್ಟಣ, ಚಿದಾನಂದ ಗಾಳಿ, ಬಾಲಚಂದ್ರ ಕಾರ್ವೇಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.