ADVERTISEMENT

ಪಲ್ಲವಿ ಶಿರಹಟ್ಟಿಯ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಮೇ 2017, 10:20 IST
Last Updated 14 ಮೇ 2017, 10:20 IST
ಪಲ್ಲವಿ ಶಿರಹಟ್ಟಿಯ ಭವ್ಯ ಮೆರವಣಿಗೆ
ಪಲ್ಲವಿ ಶಿರಹಟ್ಟಿಯ ಭವ್ಯ ಮೆರವಣಿಗೆ   

ರಬಕವಿ ಬನಹಟ್ಟಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಸ್ಥಳೀಯ ಪಲ್ಲವಿ ಶಿರಹಟ್ಟಿಯವರನ್ನು ತೆರೆದ ಜೀಪ್‌ನಲ್ಲಿ ಶನಿವಾರ ಮೆರವಣಿಗೆ ಮಾಡಲಾಯಿತು.

ಸ್ಥಳೀಯ ಎಸ್‌ಆರ್‌ಎ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಿಂದ ಆರಂಭಗೊಂಡ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು ಮೂರುವರೆ ಗಂಟೆಗಳ ಕಾಲ ವಾದ್ಯ ಮೇಳಗಳೊಂದಿಗೆ ನಡೆಯಿತು.

ಜನತಾ ಶಿಕ್ಷಣ ಸಂಘದ ಕಾರ್ಯಾಧ್ಯಕ್ಷ ಸುರೇಶ ಕೋಲಾರ ಮೆರವಣಿಗೆಗೆ ಚಾಲನೆ ನೀಡಿದರು. ಪಲ್ಲವಿ ಅವರಿಗೆ ಮಾರ್ಗದುದ್ದಕ್ಕೂ ಸನ್ಮಾನ, ಬಹುಮಾನ ನೀಡಲಾಯಿತು. ಮೆರವಣಿಗೆಯ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ನೂರಾರು ಬಾಂಧವರು ಪಲ್ಲವಿಗೆ ಸನ್ಮಾನ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ADVERTISEMENT

ಮೆರವಣಿಗೆಯಲ್ಲಿ ಜನತಾ ಶಿಕ್ಷಣ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ಭದ್ರನ್ನವರ, ಜಯವಂತ ಗುಂಡಿ, ಡಾ.ಈರಣ್ಣ ಹಟ್ಟಿ, ಬಸವರಾಜ ಜಾಡಗೌಡ, ಜಯವಂತ ಕಣಗೊಂಡ, ಮಲ್ಲಿಕಾರ್ಜುನ ಬಾಣಕಾರ, ದೇವೇಂದ್ರ ಹಳ್ಯಾಳ, ರಮೇಶ ಮುಳೆ, ವೀರಭದ್ರ ಕೊಳಕಿ, ವಿಮಲಾ ಧಬಾಡಿ, ಮುಖ್ಯ ಶಿಕ್ಷಕ ಎಂ.ಎಂ. ಹೊಂಬರಡಿ, ಪ್ರಾಚಾ ರ್ಯ ಬಿ.ಆರ್‌.ಗೊಡ್ಡಾಳೆ, ಶಿಕ್ಷಕರು, ಉಪನ್ಯಾಸಕರು, ಸಾರ್ವಜನಿಕರು  ಮತ್ತು ನೂರಾರು ವಿದ್ಯಾರ್ಥಿಗಳು ಇದ್ದರು.

ಜನತಾ ಶಿಕ್ಷಣ ಸಂಘದ ಕಾರ್ಯಾಧ್ಯಕ್ಷ ಸುರೇಶ ಕೋಲಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಎಸ್‌ಆರ್‌ಎ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತಂದ ಪಲ್ಲವಿ ಶಿರಹಟ್ಟಿಗೆ ಹನ್ನೆರಡು ಗ್ರಾಂ ಬಂಗಾರ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದಿದ್ದು, 2 ವರ್ಷ ಉಚಿತ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.

ಬನಹಟ್ಟಿ ನಗರಕ್ಕೆ ಕೀರ್ತಿ ತಂದ ಪಲ್ಲವಿ ಶಿರಹಟ್ಟಿ: ಬಾಗಲಕೋಟೆ ಜಿಲ್ಲೆಯ ಇತಿಹಾಸದಲ್ಲಿಯೇ ಸ್ಥಳೀಯ ಎಸ್‌ಆರ್‌ಎ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪಲ್ಲವಿ ಶಿರಹಟ್ಟಿ ಬನಹಟ್ಟಿ ಮತ್ತು ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟಕ್ಕೆ ತೆಗೆದುಕೊಂಡು ಹೋಗಿರು ವುದು ಅಭಿಮಾನದ ಸಂಗತಿ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ವೈ.ಕುಂದರಗಿ ತಿಳಿಸಿದರು. ಸ್ಥಳೀಯ ಎಸ್‌ಆರ್‌ಎ ಪದವಿ ಪೂರ್ವ ವಿದ್ಯಾಲಯದ ಆವರಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪಲ್ಲವಿ ಶಿರಹಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.