ADVERTISEMENT

ಪೌರಕಾರ್ಮಿಕರ ಧರಣಿ: ಎಲ್ಲೆಡೆ ಕಸದ ರಾಶಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:28 IST
Last Updated 25 ಏಪ್ರಿಲ್ 2017, 6:28 IST

ತೇರದಾಳ(ಬನಹಟ್ಟಿ): ಬಾಕಿ ವೇತನ ನೀಡಲು ಆಗ್ರಹಿಸಿ ಗುತ್ತಿಗೆ ಪೌರಕಾರ್ಮಿಕರು ಎಳೆಂಟು ದಿನಗಳಿಂದ  ಕಾರ್ಯನಿರ್ವಹಿಸದೆ ಇರುವುದರಿಂದ ಪಟ್ಟಣದ ಎಲ್ಲ ಕಡೆಗೂ ಕಸದ ರಾಶಿ ತುಂಬಿ ದುರ್ವಾಸನೆ ಹರಡಿದೆ.ಭಾನುವಾರ ಬಿಜೆಪಿ ಕಾರ್ಯಕರ್ತರು ಪುರಸಭೆ ನೆರವಿನೊಂದಿಗೆ ಸ್ವಚ್ಛತೆಗೆ ಮುಂದಾದಾಗ ದಿಢೀರನೆ ಸ್ಥಳಕ್ಕೆ ಬಂದ ಪೌರಕಾರ್ಮಿಕರ ಮುಖಂಡ ರಘು ಗೋಟಡಕಿ ಹಾಗೂ ಮಹಿಳೆಯರು ಸೇರಿದಂತೆ ದಿನಗೂಲಿ ಪೌರನೌಕರರು, ಕಸ ತುಂಬದಂತೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು.

‘ಗುತ್ತಿಗೆ ಪೌರಕಾರ್ಮಿಕರಿಗೆ ಹತ್ತು ಹನ್ನೊಂದು ತಿಂಗಳಿನಿಂದ ವೇತನ ನೀಡಿಲ್ಲವೆಂದು ಪೌರಕಾರ್ಮಿಕರಾದ ನಾವು ಹೋರಾಟ ಮಾಡುತ್ತಿದ್ದರೆ, ನೀವು ಪುರಸಭೆ ಟ್ರ್ಯಾಕ್ಟರ್ ತಂದು ಕಸ ತುಂಬಿ ಕಸವನ್ನು ಬೇರೆ ಕಡೆಗೆ ಸಾಗಿಸುವುದು ಸರಿಯಲ್ಲ. ನಮ್ಮ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡರು, ಪುರಸಭೆಯ ಸದಸ್ಯರು ಹಾಗೂ ಪೌರ ಕಾರ್ಮಿಕರ ಮಧ್ಯದಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಗುತ್ತಿಗೆ ಪೌರಕಾರ್ಮಿಕರು ಪುರಸಭೆಯ ಕಸ ತುಂಬುವ ಟ್ರ್ಯಾಕ್ಟರ್‌ ಅನ್ನು ಬಳಸಲು ಹಾಗೂ ಪುರಸಭೆ ಕಾಯಂ ಕಾರ್ಮಿಕರನ್ನು ಸಹ ಕಸ ತುಂಬುವ ಕಾರ್ಯಕ್ಕೆ ಬಿಡಲಿಲ್ಲ. ನಂತರ ಬಿಜೆಪಿ ಕಾರ್ಯಕರ್ತರು ಖಾಸಗಿ ಟ್ರ್ಯಾಕ್ಟರ್‌ಗಳನ್ನು ತಂದು ಕಸ ತುಂಬಲು ಮುಂದಾದರು.

ADVERTISEMENT

ಸ್ವಚ್ಛತಾ ಅಭಿಯಾನದಲ್ಲಿ ಧನಪಾಲ ಸವದಿ, ಪ್ರಭಾಕರ ಬಾಗಿ, ಸಿದ್ದು ಅಮ್ಮಣಗಿ, ಮಹಾವೀರ ಕೊಕಟನೂರ, ನಿಂಗಪ್ಪ ಮಲಾಬಾದಿ, ಸದಾಶಿವ ಹೊಸಮನಿ, ಪ್ರಕಾಶ ಮಾನಶೆಟ್ಟಿ,   ಶಂಕರ ಹುನ್ನೂರ, ಬಾಹುಬಲಿ  ಸವದತ್ತಿ, ಪುರಸಭೆ, ಯುವ ಮೋರ್ಚಾ ಸದಸ್ಯರು ಮತ್ತು ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.