ADVERTISEMENT

ಪ್ಯಾಂಟ್–ಶರ್ಟ್, ₹ 1 ಲಕ್ಷ ನಗದು ವಶ

ವಿಧಾನಸಭೆ ಚುನಾವಣೆ: ಮೊದಲ ದಿನ ಒಂದು ನಾಮಪತ್ರ ಮಾತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 5:23 IST
Last Updated 18 ಏಪ್ರಿಲ್ 2018, 5:23 IST

ಬಾಗಲಕೋಟೆ: ವಿಧಾನಸಭೆ ಚುನಾವಣೆ ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ಮಂಗಳವಾರ ತೇರದಾಳ ಹೊರತುಪಡಿಸಿದರೆ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ಯಾರೂ ಉಮೇದುವಾರಿಕೆ ಸಲ್ಲಿಕೆಗೆ ಮುಂದಾಗಲಿಲ್ಲ.

ಬಾಗಲಕೋಟೆ, ಜಮಖಂಡಿಯ ಕ್ಷೇತ್ರಗಳಿಗೆ ಆಯಾ ಉಪವಿಭಾಗಾಧಿಕಾರಿ ಕಚೇರಿ ಹಾಗೂ ಉಳಿದ ಕ್ಷೇತ್ರಗಳಿಗೆ ಆಯಾ ತಹಶೀಲ್ದಾರ್ ಕಚೇರಿಗಳಲ್ಲಿ (ತೇರದಾಳಕ್ಕೆ ಮಾತ್ರ ಜಮಖಂಡಿ ತಹಶೀಲ್ದಾರ್ ಕಚೇರಿ) ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿತ್ತು.

ಬೆಳಿಗ್ಗೆಯಿಂದಲೇ ಅಧಿಕಾರಿಗಳು ಕಾದು ಕುಳಿತರೂ ಯಾರೂ ನಾಮಪತ್ರ ಸಲ್ಲಿಸಲು ಬರಲಿಲ್ಲ. ಆದರೆ ತೇರದಾಳದಿಂದ ವರ್ತೂರು ಪ್ರಕಾಶ ಅವರ ನಮ್ಮ ಕಾಂಗ್ರೆಸ್ ಪಕ್ಷದಿಂದ ಆರ್.ವೀರೇಶ ಪ್ರಸಾದ ನಾಮಪತ್ರ ಸಲ್ಲಿಸಿ ಜಿಲ್ಲೆಯಲ್ಲಿ ಮೊದಲು ಉಮೇದುವಾರಿಕೆ ಸಲ್ಲಿಸಿದ ಅಭ್ಯರ್ಥಿ ಎಂಬ ಶ್ರೇಯಕ್ಕೆ ಪಾತ್ರವಾದರು.

ADVERTISEMENT

‘ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದರೂ ಇನ್ನೂ ಬಿ ಫಾರಂ ಕೊಟ್ಟಿಲ್ಲ. ಹಾಗಾಗಿ ಮೊದಲ ದಿನ ನಾಮಪತ್ರ ಸಲ್ಲಿಸಲಿಲ್ಲ’ ಎಂದು ಆ ಪಕ್ಷಗಳ ಮುಖಂಡರು ಹೇಳುತ್ತಾರೆ.

ಪ್ಯಾಂಟ್–ಶರ್ಟ್ ವಶಕ್ಕೆ: ಜಮಖಂಡಿ ತಾಲ್ಲೂಕಿನ ಚಿಕ್ಕಳಕಿ ಕ್ರಾಸ್‌ನ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ದಾಖಲೆ ಇಲ್ಲದೇ ಸಾಗಣೆ ಮಾಡುತ್ತಿದ್ದ 195 ಪ್ಯಾಂಟ್ ಹಾಗೂ 45 ಶರ್ಟ್‌ ಗಳನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಾಗಲಕೋಟೆಯತ್ತ ಹೊರಟಿದ್ದ ವಾಹನ ತಡೆದು ತಪಾಸಣೆ ಮಾಡಿದಾಗ ಪ್ಯಾಂಟ್–ಶರ್ಟ್ ದೊರೆತಿವೆ ಎಂದು ತಿಳಿದುಬಂದಿದೆ.

ಕುಳಗೇರಿ ಕ್ರಾಸ್– ₹ 1 ಲಕ್ಷ ವಶ: ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್‌ನ ಚೆಕ್‌ಪೋಸ್ಟ್‌ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ₹ 1,03,700 ವಶಪಡಿಸಿಕೊಳ್ಳಲಾಗಿದೆ.ಹೈಡ್ರೋಜನ್ ಬಲೂನ್ ಹಾರಾಟ: ಮತದಾನ ಜಾಗೃತಿ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದಲ್ಲಿ ಬೃಹತ್ ಹೈಡ್ರೋಜನ್ ಬಲೂನ್ ಹಾರಿ ಬಿಡಲಾಯಿತು. ಕಡ್ಡಾಯವಾಗಿ ಮತದಾನ ಮಾಡುವಂತೆ ಸಂದೇಶ ಹೊತ್ತಿರುವ ಬಲೂನನ್ನು ಸ್ವೀಪ್ ಸಮಿತಿ ಸದಸ್ಯರು ನವನಗರದ ಜಿಲ್ಲಾಡಳಿತ ಭವನದ ಮೇಲಿನಿಂದ ಹಾರಿ ಬಿಟ್ಟರು.

21ರಂದು ನಾಮಪತ್ರ ಸಲ್ಲಿಕೆ

ಬಾದಾಮಿ: ‘ರಾಜ್ಯ ಜೆಡಿಎಸ್‌ ಮುಖಂಡರ ಹಾಗೂ ಕಾರ್ಯಕರ್ತರ ಬೃಹತ್‌ ಸಮಾವೇಶದೊಂದಿಗೆ ಜೆಡಿಎಸ್‌ ಪಕ್ಷದಿಂದ ಏ.21ರಂದು ನಾಮಪತ್ರವನ್ನು ಸಲ್ಲಿಸುವೆ’ ಎಂದು ಬಾದಾಮಿ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಹನುಮಂತ ಮಾವಿನಮರದ ಹೇಳಿದರು.

ಮುಖಂಡರಾದ ಬಸವರಾಜ ಹೊರಟ್ಟಿ, ಎಚ್‌.ವಿಶ್ವನಾಥ, ಶಾಸಕ ಎಚ್‌.ಎನ್‌. ಕೋನರಡ್ಡಿ, ಸೈಯದ್‌ ಮೊಹಿದ್‌ ಅಲ್ತಾಫ್, ಆರ್‌. ಚಂದ್ರಶೇಖರ್‌ ಆಗಮಿಸುವರು ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.ರೈಲ್ವೆ ಸ್ಟೇಷನ್‌ ರಸ್ತೆಯ ಬಸವೇಶ್ವರ ವೃತ್ತದಿಂದ ಮಿನಿ ವಿಧಾನಸೌಧದ ತಹಶೀಲ್ದಾರ್‌ ಕಾರ್ಯಾಲಯದವರೆಗೆ ಮೆರವಣಿಗೆಯೊಂದಿಗೆ ನಾಮಪತ್ರವನ್ನು ಸಲ್ಲಿಸುವುದಾಗಿ ಹೇಳಿದರು.

ವಂಶಿಕೃಷ್ಣ ನೂತನ ಎಸ್‌.ಪಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಿ.ಬಿ.ರಿಷ್ಯಂತ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ವಂಶಿಕೃಷ್ಣ ಅಧಿಕಾರ ಸ್ವೀಕರಿಸಲಿದ್ದಾರೆ. ‘ಚುನಾವಣಾ ಆಯೋಗ ತಾತ್ಕಾಲಿಕವಾಗಿ ರಿಷ್ಯಂತ್ ಅವರ ವರ್ಗಾವಣೆ ಮಾಡಿದೆ. ಆದರೆ ಅವರಿಗೆ ಬೇರೆ ಕಡೆ ಸ್ಥಳ ತೋರಿಸಿಲ್ಲ’ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.