ADVERTISEMENT

ಬಡತನದಲ್ಲಿ ಅರಳಿದ ಪ್ರತಿಭೆ ಶಾಬಾನು

​ಪ್ರಜಾವಾಣಿ ವಾರ್ತೆ
Published 14 ಮೇ 2017, 10:17 IST
Last Updated 14 ಮೇ 2017, 10:17 IST

ಕೂಡಲಸಂಗಮ: ಶಾಬಾನು ಪಿರೇಸಾಬ ಬಾದಾಮಿ ಎಂಬ ವಿದ್ಯಾರ್ಥಿನಿ ಕೂಡಲಸಂಗಮದ  ಸಂಗಮೇಶ್ವರ ಪಿಯು ಕಾಲೇಜಿನ ಕಲಾ ವಿಭಾಗದಲ್ಲಿ 600ಕ್ಕೆ 513 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದು ಕೊಂಡಿರುವುದು ಹೆಮ್ಮೆಯ ಸಂಗತಿ.

ಕೂಡಲಸಂಗಮಕ್ಕೆ ಸಮೀಪದ ಚಿಕ್ಕಮಳಗಾವಿ ಗ್ರಾಮದ ಕೃಷಿ ಕುಟುಂಬದಲ್ಲಿ  ಹುಟ್ಟಿ ಬೆಳೆದ ಶಾಬಾನು ಪ್ರತಿಭಾವಂತೆ ಮಾತ್ರವಲ್ಲ ಕಠಿಣ ಪರಿಶ್ರಮ ಜೀವಿ. ಅರ್ಥಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಯ 70 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಪ್ರಶ್ನೆ ಪತ್ರಿಕೆ ಕಠಿಣವಾಗಿದೆ ಎಂದು ಬೇಸರವಾಗಿ ಉತ್ತರ ಪತ್ರಿಕೆಯನ್ನು 4 ತುಂಡಾಗಿಸಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಳು.

ಪರೀಕ್ಷಾ ಮೇಲ್ವಿಚಾರಕರಿಗೆ ವಿಷಯ ಗೊತ್ತಾಗಿ ವಿದ್ಯಾರ್ಥಿನಿಯ ಆತಂಕವನ್ನು ಗಮನಿಸಿ, ತುಂಡಾದ ಪತ್ರಿಕೆಯನ್ನು ಪುನಃ ಜೋಡಿಸಿ ಮೌಲ್ಯಮಾಪನ ಮಾಡುವಂತೆ ಬೇವೂರ ಕಾಲೇಜು ಪ್ರಾ. ಜಿ.ಎಸ್.ಬಿಜಾಪೂರ ಅವರು ವರದಿ ನೀಡಿದ್ದರಿಂದ ಮೌಲ್ಯಮಾಪನವಾಗಿ 100ಕ್ಕೆ 69 ಅಂಕ ಪಡೆದು ಕೊಂಡಿದ್ದಲ್ಲದೇ ಕಲಾ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ADVERTISEMENT

‘ನಮ್ಮದು ಬಡತನದ ಕುಟುಂಬ. ಮಗಳು ಜಾಣಳಾಗಿದ್ದರೂ ಕಲಿಸುವ ಶಕ್ತಿ ಇಲ್ಲ. ಯಾರಾದರೂ ಆರ್ಥಿಕ ಸಹಾಯ ಮಾಡಿದರೆ ಮುಂದೆ ಕಲಿಸಲು ಸಾಧ್ಯ’ ಎನ್ನುತ್ತಾರೆ ತಂದೆ ಪೀರೇಸಾಬ.
‘ನನ್ನ ಕನ್ನಡ ಬರವಣಿಗೆ ದೇವರು ಕೊಟ್ಟ ವರ. ಚೆನ್ನಾಗಿ ಓದುತ್ತ, ಉತ್ತಮವಾಗಿ ಬರೆದು ಕೆ.ಎ.ಎಸ್, ಐಎಎಸ್ ಮಾಡುವ ಕನಸನ್ನು ಇಟ್ಟುಕೊಂಡಿರುವೆ. ಪಿಯುಸಿ ಮೇಲೆ ಯವುದಾದರೂ ಉದ್ಯೋಗ ಲಭಿಸಿದರೆ ನೌಕರಿ ಮಾಡುತ್ತಲೇ  ಮುಂದಿನ ಅಧ್ಯಯನ ಮಾಡಲು ಇಚ್ಛಿಸಿರುವೆ’ ಎನ್ನುತ್ತಾರೆ ಶಾಬಾನು.

ಶ್ರುತಿ ಜೇರಕಲ್ಲಗೆ ಪ್ರಥಮ  ಸ್ಥಾನ
ಗುಳೇದಗುಡ್ಡ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸ್ಥಳೀಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶೇ.68 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಉತ್ತಮ ಫಲಿತಾಂಶ ನೀಡಿದ್ದಾರೆ ಎಂದು ಪ್ರಾಚಾರ್ಯೆ ದಾಕ್ಷಾಯಣಿ ಜಿ. ಜತ್ತಿ ತಿಳಿಸಿದ್ದಾರೆ. 

ಪರೀಕ್ಷೆಗೆ ಹಾಜರಾದ 118 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್, 39 ವಿದ್ಯಾರ್ಥಿಗಳು (ಪ್ರಥಮ), 24  ವಿದ್ಯಾರ್ಥಿಗಳು (ದ್ವಿತೀಯ) 14 (ತೃತೀಯ) ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೃತಿ ಚನ್ನಪ್ಪ ಜೇರಕಲ್ಲ  ಬೌತ ಶಾಸ್ತ್ರ ವಿಷಯದಲ್ಲಿ 100 ಅಂಕ ಸೇರಿ ಶೇ 95ರಷ್ಟು ಅಂಕ ಪಡೆದು ಕಾಲೇಜಿಗೆ (ಪ್ರಥಮ), ಅಂಬಿಕಾ ಡಮಾಮ್ ಶೇ,88 ರಷ್ಟು ಅಂಕ ಪಡೆದು (ದ್ವಿತೀಯ), ಪಕೀರವ್ವ ಗುನ್ನಳ್ಳಿ ಶೇ,72 ರಷ್ಟು ಅಂಕ ಪಡೆದು (ತೃತೀಯ) ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಲಕ್ಷಿಂಬಾಯಿ ಗಾಜಿ ಶೇ, 86 ಅಂಕ ಪಡೆದು (ಪ್ರಥಮ), ಜ್ಯೋತಿ ಕೊಳ್ಳಿ ಶೇ, 81,16 ಅಂಕ ಪಡೆದು (ದ್ವಿತೀಯ), ಹಲಿಮಾ ನದಾಫ್ ಶೇ, 80,83 ರಷ್ಟು ಅಂಕ ಪಡೆದು (ತೃತೀಯ) ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ಶಿಲ್ಪಾ ಮೊಟೇಕರ ಶೇ, 83,33ರಷ್ಟು ಅಂಕ ಪಡೆದು (ಪ್ರಥಮ), ಕುಮಾಶ್ರೀ ಮಾದರ ಶೇ, 82,16 (ದ್ವಿತೀಯ), ಸವಿತಾ ಚವಾಣ ಶೇ, 75,66 ಅಂಕ ಪಡೆದು (ತೃತೀಯ) ಸ್ಥಾನದಲ್ಲಿ ಉತ್ತೀರ್ಣ ರಾಗಿದ್ದಾರೆ.

ವೆಂಕಟೇಶ ಪ್ರೌಢಶಾಲೆಗೆ ಶೇ.95

ಗುಳೇದಗುಡ್ಡ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸ್ಥಳೀಯ ವೆಂಕಟೇಶ ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ಶೇ, 95.34 ರಷ್ಟು ಫಲಿತಾಂಶ ಬಂದಿದೆ. ಒಟ್ಟು 43 ವಿದ್ಯಾರ್ಥಿಗಳಲ್ಲಿ 8 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಅವರಲ್ಲಿ ವಿನಾಯಕ ಬನ್ನಟ್ಟಿ ಶೇ 98.24 ರಷ್ಟು ಅಂಕ ಪಡೆದು ಶಾಲೆಗೆ (ಪ್ರಥಮ), ಪೂಜಾ ಹನಮಸಾಗರ ಶೇ 96ರಷ್ಟು ಅಂಕ ಪಡೆದು (ದ್ವಿತೀಯ), ಸ್ವಾತಿ ಉಂಕಿ ಶೇ 91.68 ರಷ್ಟು ಅಂಕ ಪಡೆದು (ತೃತೀಯ) ಹಾಗೂ ವಿನಾಯಕ ಆಲೂರ ಶೇ 91.52ರಷ್ಟು ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಆಡಳಿತ ಮಂಡಳಿ ಸದಸ್ಯರು ಮತ್ತು ಶಾಲೆಯ ಮುಖ್ಯಶಿಕ್ಷಕ ಆರ್.ಎನ್. ಕಾಟವಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.