ADVERTISEMENT

ಬದ್ಧತೆ ತೋರದ ಸರ್ಕಾರ:ಆರೋಪ

ಸಸಾಲಟ್ಟಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಮೀನಮೇಷ

ಉದಯ ಕುಲಕರ್ಣಿ
Published 21 ಫೆಬ್ರುವರಿ 2017, 4:40 IST
Last Updated 21 ಫೆಬ್ರುವರಿ 2017, 4:40 IST
ಮುಧೋಳ: ಸಸಾಲಟ್ಟಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ತನ್ನ ಬದ್ಧತೆ ಹಾಗೂ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
 
ಕಳೆದ ಮೂರು ವರ್ಷಗಳಿಂದ ಘಟಪ್ರಭಾ ಜಲಾಶಯ ತುಂಬುತ್ತಿಲ್ಲ. ಇದರಿಂದ ಬೆಳೆ ಬೆಳೆಯಲು ಅಚ್ಚುಕಟ್ಟು ಪ್ರದೇಶದ ಎಡದಂಡೆ ಕಾಲುವೆಗೆ  ನೀರು ಹರಿಸಿಲ್ಲ. ಕಾಲುವೆಗೆ ಬಿಡುವ  ನೀರಿನಿಂದ ಅಲ್ಪಾವಧಿ ಬೆಳೆ ಬೆಳೆಯಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ತಾಲ್ಲೂಕಿನಲ್ಲಿ ಅಂತರ್ಜಲಮಟ್ಟ ಪಾತಾಳಕ್ಕೆ ಇಳಿದಿದ್ದು, ತೆರದ ಬಾವಿ, ಕೊಳವೆ ಬಾವಿಗಳು ಸೇರಿದಂತೆ ನೀರನ ಮೂಲಗಳು ಬತ್ತಿಹೋಗಿವೆ. ಇದರಿಂದ ಜನ–ಜಾನುವಾರುಗಳು ಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. 
 
ಸಸಾಲಟ್ಟಿ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಈ ಸಂಕಷ್ಟಗಳಿಗೆ ಪರಿಹಾರ ಎಂದು 2012ರಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ, ಈಗಿನ ಶಾಸಕ ಗೋವಿಂದ ಕಾರಜೋಳ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದರು. ಇದಕ್ಕಾಗಿ  ₹ 250 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. 2,500 ಎಚ್‌ಪಿಯ 26 ಪಂಪಸೆಟ್‌ಗಳ ಮೂಲಕ ಮುಖ್ಯ ಕಾಲುವೆಗೆ ನೀರು ಹರಿಸಲು  ಕೃಷ್ಣಾ ನದಿಯ 8.47 ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಳ್ಳಲು ಯೋಜನೆ ಸಿದ್ಧಪಡಿಸಲಾಗಿತ್ತು.
 
ಆದರೆ, ಕೃಷ್ಣಾ ನ್ಯಾಯಮಂಡಳಿಯ ನೀರು ಹಂಚಿಕೆಯಾಗದ ಕಾರಣ ಆಗ ಯೋಜನೆಗೆ ಮಂಜೂರಾತಿ ದೊರೆತಿರಲಿಲ್ಲ. ನ್ಯಾಯಮಂಡಳಿ ರಾಜ್ಯದ ಪಾಲಿಗೆ 177 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ಇದೀಗ 4 ವರ್ಷ ಗತಿಸಿದೆ. ಇದರಲ್ಲಿ 8.47 ಟಿಎಂಸಿ ಅಡಿ ನೀರು ಬಳಕೆ ಮಾಡಿದರೆ ಮುಧೋಳ, ಬೀಳಗಿ, ಜಮಖಂಡಿ ತಾಲ್ಲೂಕುಗಳ ಜನರ ನೀರಿನ ಬವಣೆ ನೀಗುತ್ತದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್.ಮಾಚಪ್ಪನವರ ಹೇಳುತ್ತಾರೆ.
 
ಕೃಷ್ಣಾ ನದಿಯಲ್ಲಿ ನೀರಿನ ಹರಿವು ಜೂನ್ 2 ನೇ ವಾರದಲ್ಲಿ ಆರಂಭವಾಗಿ ಅಕ್ಟೋಬರ್‌ ವರೆಗೂ ಇರುತ್ತದೆ. ಈ ಸಮಯದಲ್ಲಿ ಕೃಷ್ಣಾ ನದಿಯ ನೀರನ್ನು ಘಟಪ್ರಭಾ ಎಡದಂಡೆ ಮುಖ್ಯ ಕಾಲುವೆ ನೀರು ಹರಿಸಿದರೆ ಮೂರು ತಾಲ್ಲೂಕು  36,856 ಹೆಕ್ಟೇರ್‌ ಜಮೀನಿಗೆ ಮುಂಗಾರು ಬೆಳೆಗೆ ನೀರು ಸಮೃದ್ಧವಾಗುತ್ತದೆ. ಅಲ್ಲದೆ ಉಳಿದ ನೀರನ್ನು ಹಿಂಗಾರು ಹಂಗಾಮಿಗೆ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಅವರ ಅಭಿಮತ. 
 
**
ನಮಗೂ ಬದ್ಧತೆ ಇದೆ: ಕಡಪಟ್ಟಿ
ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ರೂಪುರೇಷೆ, ಅಂದಾಜು ವೆಚ್ಚ ತಯಾರಿಸುವಲ್ಲಿ ನಿರತವಾಗಿದೆ. ದೊಡ್ಡ ಯೋಜನೆ ಇದಾಗಿರುವುದರಿಂದ ಇದು ತರಾತುರಿಯಲ್ಲಿ ಮಾಡುವ ಕಾರ್ಯವಲ್ಲ. ಸರ್ಕಾರದಿಂದ ಮಂಜೂರಾತಿ ದೊರೆತ ನಂತರ ಈ ಯೋಜನೆ ಪ್ರಕಟಿಸಲಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎ.ಕಡಪಟ್ಟಿ ತಿಳಿಸಿದರು.
 
**
ಬಿಎಸ್‌ವೈ  ನೇತೃತ್ವದಲ್ಲಿ  ಪ್ರತಿಭಟನೆ  ಇಂದು
ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ  ಇದೇ 21ರಂದು ಮುಧೋಳದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಗೋವಿಂದ ಕಾರಜೋಳ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.