ADVERTISEMENT

ಬಸ್‌ ನಿಲ್ದಾಣ: ಅವ್ಯವಸ್ಥೆ ತಾಣ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 5:47 IST
Last Updated 2 ಸೆಪ್ಟೆಂಬರ್ 2017, 5:47 IST
ಬಸ್ ನಿಲ್ದಾಣದ ಹಿಂದಿನ ಪುರುಷರ ಶೌಚಾಲಯ ಗಬ್ಬೆದ್ದು ನಾರುತ್ತಿದೆ
ಬಸ್ ನಿಲ್ದಾಣದ ಹಿಂದಿನ ಪುರುಷರ ಶೌಚಾಲಯ ಗಬ್ಬೆದ್ದು ನಾರುತ್ತಿದೆ   

ಕಲಾದಗಿ: ಇಲ್ಲಿನ ಬಸ್‌ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಕುಡಿಯುವ ನೀರು, ಶೌಚಾಲಯದಂತಹ ಮೂಲ ಸೌಕರ್ಯ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್‌ ನಿಲ್ದಾಣದಲ್ಲಿ ಅಲ್ಲಲ್ಲಿ ತೆಗ್ಗು, ಗುಂಡಿ ಬಿದ್ದಿದ್ದು, ಮಳೆಗಾಲದಲ್ಲಿ ನಿಲ್ಲಲೂ ತೊಂದರೆಯಾಗುತ್ತದೆ.

ಪುರುಷರ ಮೂತ್ರಾಲಯ ಇದ್ದರೂ ಸೂಕ್ತ ನಿರ್ವಹಣೆ ಇಲ್ಲದೇ ಅದು ಬಳಕೆಗೆ ಬಾರದಂತಾಗಿದೆ. ಆದರೆ ಮಹಿಳೆಯರಿಗೆ ಯಾವುದೇ ವ್ಯವಸ್ಥೆ ಇಲ್ಲ. ಬೇರೆ ಊರಿನಿಂದ ಬರುವ ಪ್ರಯಾಣಿಕರು ಬಯಲಿನಲೇ ಮೂತ್ರವಿಸರ್ಜನೆ ಮಾಡುತ್ತಾರೆ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ.

ಸಾರಿಗೆ ಸಂಸ್ಥೆಯ ಹೊಣೆ: ಬಸ್‌ ನಿಲ್ದಾಣ ಅಭಿವೃದ್ಧಿಪಡಿಸಲು ಇಲ್ಲಿನ ಗ್ರಾಮ ಪಂಚಾಯ್ತಿ ಆಡಳಿತ 2015ರ ಆಗಸ್ಟ್ 11ರಂದು ಜಾಗ ನೀಡಿದೆ. ಜೊತೆಗೆ ನಿರ್ವಹಣೆ ಜವಾಬ್ದಾರಿಯನ್ನು ವಾಯವ್ಯ ಸಾರಿಗೆ ಸಂಸ್ಥೆಗೆ ವಹಿಸಿದೆ. ಆದರೆ ಎರಡು ವರ್ಷ ಕಳೆದರೂ ಸಾರಿಗೆ ಸಂಸ್ಥೆ ಮಾತ್ರ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ADVERTISEMENT

ಬಸ್‌ ನಿಲ್ದಾಣದ ನಿರ್ವಹಣೆ ಜವಾಬ್ದಾರಿ ಮೊದಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತು. ಆಗ ನಿಲ್ದಾಣದ ಗೋಡೆ, ನೆಲದ ರಿಪೇರಿ ಕಾರ್ಯ, ಶೌಚಾಲಯ ದುರಸ್ತಿ ಪ್ರತಿ ವರ್ಷ ನಡೆಯುತ್ತಿತ್ತು. ಅದಕ್ಕಾಗಿ ಪಂಚಾಯ್ತಿ ಅಭಿವೃದ್ಧಿ ನಿಧಿಯಿಂದಲೂ ಹಣ ತೆಗೆದಿಡಲಾಗಿತ್ತಿತ್ತು.

ಆದರೆ ಸಾರಿಗೆ ಸಂಸ್ಥೆಗೆ ಹಸ್ತಾಂತರದ ನಂತರ ನಿರ್ವಹಣೆ ಮರೀಚಿಕೆ ಯಾಯಿತು. ಇದರಿಂದ ಬಸ್ ನಿಲ್ದಾಣ ಹಾಳು ಕೊಂಪೆಯಾಗಿದೆ. ದಿನ ನಿತ್ಯ ಇಲ್ಲಿಂದ ಬಾಗಲಕೋಟೆ ಹಾಗೂ ಬೆಳಗಾವಿ ಕಡೆಗೆ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಬಸ್‌ಗಳು ಬಂದು ಹೋಗುತ್ತವೆ. ಕಲಾದಗಿ ಈ ಭಾಗದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಗ್ರಾಮವಾಗಿದೆ.

ಪ್ರಯಾಣಿಕರ ಹಿತದೃಷ್ಟಿಯನ್ನು ಸಾರಿಗೆ ಇಲಾಖೆ ಕಾಪಾಡ ಬೇಕಾಗಿದೆ. ಎರಡು ವರ್ಷದಿಂದ ನಿಲ್ದಾಣದಲ್ಲಿ ಸಂಚಾರ ನಿಯಂತ್ರಣ ಅಧಿಕಾರಿಗಳು ಇಲ್ಲ, ಬೆಳ್ಳಿಗ್ಗೆ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

* * 

ಸಾರಿಗೆ ಸಂಸ್ಥೆ ಬೇಜವಾಬ್ದಾರಿತನದಿಂದ ಬಸ್‌ ನಿಲ್ದಾಣ ಅಭಿವೃದ್ಧಿ ಹೊಂದಿಲ್ಲ. ಕೂಡಲೇ ಇಲ್ಲಿ ಮೂಲ ಸೌಕರ್ಯ ಕಲ್ಪಿಸಲು ಇಲಾಖೆ ಮುಂದಾಗಲಿ
ಹಣಮಂತ ಹಡಪದ
ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.