ADVERTISEMENT

ಬಿಪಿಎಲ್‌ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 9:36 IST
Last Updated 23 ಜುಲೈ 2017, 9:36 IST

ಬಾಗಲಕೋಟೆ: ‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಎಲ್ಲಾ ಕುಟುಂಬಗಳಿಗೂ ಉಚಿತ ಅನಿಲ ಸಿಲಿಂಡರ್ ಹಾಗೂ ಒಲೆ ವಿತರಿಸಲು ಸರ್ಕಾರ ಮುಂದಾಗಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಲ್ಲಿ ಬಡವರಿಗೆ ಉಚಿತವಾಗಿ ಸಿಲಿಂಡರ್ ನೀಡಿದರೂ ಫಲಾನುಭವಿ ಒಲೆಗೆ ದುಡ್ಡು ಕೊಡಬೇಕಿದೆ. ನಂತರ ಪ್ರತಿ ತಿಂಗಳು ಸಬ್ಸಿಡಿ ಹಣದಲ್ಲಿ ಮುರಿದುಕೊಳ್ಳಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಸವಲತ್ತು ಕಲ್ಪಿಸಲಾಗುವುದು’ ಎಂದರು.

ಗ್ರಾಮ ಪಂಚಾಯ್ತಿಯಲ್ಲಿ ಅರ್ಜಿ: ಫಲಾನುಭವಿಗಳು ಆಯಾ ಗ್ರಾಮ ಪಂಚಾಯ್ತಿಗಳಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದೆ. ಆ ನಿಟ್ಟಿನಲ್ಲಿ ತಂತ್ರಾಂಶ (ಸಾಫ್ಟ್‌ವೇರ್) ಅಭಿವೃದ್ಧಿಪಡಿಸಲಾಗುತ್ತಿದೆ. ಜುಲೈ ಕೊನೆಗೆ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ADVERTISEMENT

ದಾಸೋಹ ಯೋಜನೆ: ಸೇವಾ ಸಂಸ್ಥೆಗಳು, ಆಶ್ರಮಗಳು, ವೃದ್ಧಾಶ್ರಮ, ಅಬಲೆಯರು, ಅಂಗವಿಕಲರ ಕಲ್ಯಾಣ ಕೇಂದ್ರಗಳು ಸೇರಿದಂತೆ ಸಮಾಜದ ದುರ್ಬಲ ವರ್ಗದವರಿಗೆ ಆಶ್ರಯ ನೀಡಿದ ಸಂಸ್ಥೆಗಳಿಗೆ ನೆರವಾಗಲು ಸರ್ಕಾರ ದಾಸೋಹ ಯೋಜನೆ ಜಾರಿಗೊಳಿಸಿದೆ. ಅದರಡಿ ಪ್ರತಿ ಫಲಾನುಭವಿಗೆ ಮಾಸಿಕ 15 ಕೆ.ಜಿ ಅಕ್ಕಿ ಉಚಿತವಾಗಿ ವಿತರಿಸಲಾಗುವುದು. ಆರು ತಿಂಗಳಿಗೆ ಕೊಡಬೇಕಾದ ಅಕ್ಕಿಯನ್ನು ಒಮ್ಮೆಗೆ ಕೊಡಲಾಗುವುದು. ಸಂಬಂಧಿಸಿದ ಸಂಸ್ಥೆಯವರು ಅಕ್ಕಿ ಪಡೆಯಲು ಜಿಲ್ಲಾ ಕೇಂದ್ರಕ್ಕೆ ಬರುವ ಅಗತ್ಯವಿಲ್ಲ. ಆಯಾ ತಾಲ್ಲೂಕು ಕೇಂದ್ರಗಳಿಗೆ ಪೂರೈಸಲಾಗುವುದು ಎಂದರು.

ಪುನರ್ಬೆಳಕು ಯೋಜನೆ: ಗ್ರಾಮೀಣ ಪ್ರದೇಶಗಳಲ್ಲಿ ಅನಿಲ ಸಿಲಿಂಡರ್‌ ಸೌಲಭ್ಯ ಹೊಂದಿರುವ ಬಿಪಿಎಲ್‌ ಕುಟುಂಬಗಳಿಗೆ ಪ್ರತಿ ತಿಂಗಳು ಒಂದು ಲೀಟರ್ ಸೀಮೆಎಣ್ಣೆ ವಿತರಿಸಲಾಗುತ್ತಿದೆ. ಸೀಮೆಎಣ್ಣೆ ಬೇಡ ಎಂದು ಹೇಳುವವರಿಗೆ ಇನ್ನು ಮುಂದೆ ಪುನರ್ಬೆಳಕು ಯೋಜನೆಯಡಿ ಎರಡು ಎಲ್‌ಇಡಿ ಬೆಳಕಿನ ಸಾಧನಗಳನ್ನು (ಚಾರ್ಜೆಬಲ್‌ ಲೈಟ್‌) ನೀಡಲಾಗುವುದು ಎಂದು ಹೇಳಿದರು.

ಉಪ್ಪು–ತಾಳೆ ಎಣ್ಣೆ ಸ್ಥಗಿತ: ಅನ್ನಭಾಗ್ಯ ಯೋಜನೆಯಡಿ ಇನ್ನು ಮುಂದೆ ಫಲಾನುಭವಿಗಳಿಗೆ ಉಪ್ಪು ಹಾಗೂ ತಾಳೆಎಣ್ಣೆ ವಿತರಣೆ ಸ್ಥಗಿತಗೊಳಿಸಲಾಗುವುದು. ಗ್ರಾಹಕರಿಂದ ಬೇಡಿಕೆ ಇಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಸಂಗ್ರಹ ಇರುವ ತಾಳೆಎಣ್ಣೆಯನ್ನು ಅದು ಖಾಲಿ ಆಗುವವರೆಗೂ ವಿತರಣೆ ಮಾಡಲಾಗುವುದು.

‘ಪಡಿತರ ವ್ಯವಸ್ಥೆಯಲ್ಲಿ ಸಕ್ಕರೆ ವಿತರಣೆಗೆ ನೀಡುತ್ತಿದ್ದ ಸಹಾಯಧನವನ್ನು ಕೇಂದ್ರ ಸರ್ಕಾರ ನಿಲ್ಲಿಸಿತ್ತು. ಈಗ ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಮಾತ್ರ ಸಕ್ಕರೆ ಕೊಡುವಂತೆ ಆದೇಶಿಸಿದೆ. ತಾರತಮ್ಯ ಮಾಡದೇ ಎಲ್ಲಾ ಬಡವರಿಗೂ ಸಕ್ಕರೆ ಕೊಡಲು ಅನುದಾನ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿಂದ ಅನುಮತಿ ದೊರೆತ ನಂತರ ಮತ್ತೆ ಸಕ್ಕರೆ ವಿತರಣೆ ಆರಂಭಿಸುವುದಾಗಿ’ ಖಾದರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.