ADVERTISEMENT

ಭಯೋತ್ಪಾದಕ ದಾಳಿ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 11:34 IST
Last Updated 13 ಜುಲೈ 2017, 11:34 IST

ಬಾಗಲಕೋಟೆ: ಕಾಶ್ಮೀರದ ಅನಂತ ನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಗಳ ಮೇಲೆ ನಡೆದ ಭಯೋ ತ್ಪಾದಕ ದಾಳಿ ಖಂಡಿಸಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಬಸವೇಶ್ವರ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪ್ರವಾಸಿ ತಾಣವಾಗಬೇಕಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯ ಭಯೋತ್ಪಾದಕರ ಅಟ್ಟಹಾಸದಿಂದಾಗಿ ಸದಾ ಹಿಂಸೆ ಹಾಗೂ ಅಶಾಂತಿಯ ತಾಣವಾಗಿದೆ. ಉಗ್ರರ ಇಂತಹ ಹೇಯ ಕೃತ್ಯಗಳನ್ನು ಮಟ್ಟಹಾಕಲು ಸರ್ಕಾರ ನಮ್ಮ ಸೈನಿಕರಿಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು.

ದಾಳಿಯಲ್ಲಿ ಏಳು ಜನ ಮುಗ್ದ ಅಮರನಾಥ ಯಾತ್ರಿಗಳು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಭಯೋತ್ಪಾದಕರ ಈ ಕೃತ್ಯದಿಂದಾಗಿ ಕಣಿವೆ ರಾಜ್ಯಕ್ಕೆ ತೆರಳುವ ಯಾತ್ರಾರ್ಥಿಗಳಲ್ಲಿ ಆತಂಕ ಮನೆಮಾಡಿದೆ. ಜಮ್ಮು ಮತ್ತು ಕಾಶ್ಮೀರ ದಲ್ಲಿ ಶಾಂತಿ ಕದಡುತ್ತಿರುವ ಹಾಗೂ ಉಗ್ರರಿಗೆ ಸಹಾಯ ಹಸ್ತ ಚಾಚು ತ್ತಿರುವ ಪಾಕಿಸ್ತಾನಕ್ಕೆ ಸರಿಯಾದ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಣಿವೆ ರಾಜ್ಯ ಇಂದು ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ತಾಣವಾಗು ತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಉಗ್ರ ಗಾಮಿ ಸಂಘಟನೆ ಹಾಗೂ ಅವುಗಳಿಗೆ ಬೆಂಬಲ ನೀಡುತ್ತಿರುವ ದೇಶದ್ರೋಹಿ ಗಳನ್ನು ಮಟ್ಟಹಾಕಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಅಮರನಾಥ ಯಾತ್ರೆ ಕೈಗೊಳ್ಳುವ ಯಾತ್ರಿಕರಿಗೆ ಸೈನಿಕ ಭದ್ರತೆ ಒದಗಿಸಬೇಕು ಎಂದು ಪ್ರಧಾನಿ ಹಾಗೂ ಗೃಹ ಸಚಿವರಿಗೆ ಮನವಿ ಮಾಡಿದರು.

ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್.ಮೇಲ್ನಾಡ್, ಭಜರಂಗದಳ ವಿಭಾಗ ಸಂಚಾಲಕ ಪುಂಡಲೀಕ ದಳವಾಯಿ, ಜಿಲ್ಲಾ ಸಂಚಾಲಕ ವಿಜಯ ಕಾಂಬ್ಳೆ, ಮನೋಜ್, ಕೃಷ್ಣರಾಜು, ಆನಂದ ಭಾಂಡಗೆ, ರಮೇಶ ಬಂಡಿವಡ್ಡರ, ಮಹಾಂತೇಶ ಸಿದ್ದಾಪುರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.