ADVERTISEMENT

ಭರ್ತಿಯಾಗದ ಆಲಮಟ್ಟಿ: ರೈತರಲ್ಲಿ ಆತಂಕ

ಕಳೆದ ವರ್ಷ ಈ ವೇಳೆಗೆ ತುಂಬಿದ್ದ ಎರಡೂ ಜಲಾಶಯಗಳು; 6.24ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆಗೆ ಸಿದ್ಧತೆ

ವೆಂಕಟೇಶ್ ಜಿ.ಎಚ್
Published 20 ಜುಲೈ 2017, 9:07 IST
Last Updated 20 ಜುಲೈ 2017, 9:07 IST
ಆಲಮಟ್ಟಿ ಜಲಾಶಯ (ಪ್ರಜಾವಾಣಿ ಸಂಗ್ರಹ ಚಿತ್ರ)
ಆಲಮಟ್ಟಿ ಜಲಾಶಯ (ಪ್ರಜಾವಾಣಿ ಸಂಗ್ರಹ ಚಿತ್ರ)   

ಬಾಗಲಕೋಟೆ: ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳು ಇನ್ನೂ ಭರ್ತಿಯಾಗಿಲ್ಲ. ಇದರಿಂದ ಕಾಲುವೆ ನೀರು ನಂಬಿಕೊಂಡು ಮುಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧತೆ ನಡೆಸಿದ್ದ 6.24 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತರಲ್ಲಿ ಅನಿಶ್ಚಿತತೆ ತಲೆದೋರಿದೆ.

ಕಳೆದ ವರ್ಷ ಜುಲೈ 15ಕ್ಕೆ ಎರಡೂ ಜಲಾಶಯಗಳು ತುಂಬಿದ್ದವು. ಹಾಗಾಗಿ ಅದೇ ದಿನ ಕಾಲುವೆಗಳಿಗೆ ನೀರು ಹರಿಸಲಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಬುಧವಾರ ಆಲಮಟ್ಟಿ ಜಲಾಶಯದಲ್ಲಿ 513.9 ಮೀಟರ್‌ನಷ್ಟು ನೀರು ಸಂಗ್ರಹವಾಗಿದೆ. ಭರ್ತಿಯಾಗಲು ಇನ್ನೂ 7 ಮೀಟರ್‌ನಷ್ಟು ನೀರು ಬರಬೇಕಿದೆ. ಕಾಲುವೆಗಳಿಗೆ ನೀರು ಹರಿಸಲು ನಾರಾಯಣಪುರ ಜಲಾಶಯದಲ್ಲಿ 489 ಮೀಟರ್‌ವರೆಗೆ ನೀರು ಸಂಗ್ರಹವಾಗಬೇಕಿದೆ. ಆದರೆ ಈಗ 485.7 ಮೀಟರ್‌ ಇದೆ.

ಮಳೆ ಕೊರತೆ: ‘ಆಲಮಟ್ಟಿ ಜಲಾಶಯ ಭರ್ತಿಯಾಗಬೇಕಾದರೆ ಬೆಳಗಾವಿ ಜಿಲ್ಲೆಯ ಜೊತೆಗೆ ಮಹಾರಾಷ್ಟ್ರದಲ್ಲಿನ ಕೃಷ್ಣಾ ಕೊಳ್ಳದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಬೇಕಿದೆ. ಅಲ್ಲಿನ ಕೊಲ್ಲಾಪುರ, ಸಾಂಗ್ಲಿ, ಸತಾರ ಭಾಗದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಹಾಗಾಗಿ ಇನ್ನೂ ಜಲಾಶಯ ಭರ್ತಿಯಾಗಿಲ್ಲ. ಆಲಮಟ್ಟಿ ಭರ್ತಿಯಾದರೆ ನಾರಾಯಣಪುರ ಜಲಾಶಯಕ್ಕೆ ನೀರು ಹರಿಸಲಾಗುತ್ತದೆ’ ಎಂದು ಕೃಷ್ಣಾ ಭಾಗ್ಯ ಜಲನಿಗಮದ (ಕೆ.ಬಿ.ಜೆ.ಎನ್‌.ಎಲ್‌) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈಜನಾಥ ಪಾಟೀಲ ಹೇಳುತ್ತಾರೆ.

ADVERTISEMENT

ಕುಡಿಯುವ ನೀರಿನ ಚಿಂತೆ: ‘ಎರಡೂ ಜಲಾಶಯಗಳಲ್ಲಿ ಈಗ ಸಂಗ್ರಹವಾಗಿರುವ ನೀರನ್ನು ಕಾಲುವೆಗಳಿಗೆ ಹರಿಸಬಹುದು. ಆದರೆ ಮಳೆ ಪರಿಸ್ಥಿತಿ ಹೀಗೆ ಮುಂದುವರೆದರೆ ಜಲಾಶಯದಲ್ಲಿ ನೀರು ಬರಿದಾಗಲಿದೆ. ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಲಿದೆ’ ಎಂಬುದು ಕೆ.ಬಿ.ಜೆ.ಎನ್‌.ಎಲ್ ಅಧಿಕಾರಿಗಳ ಚಿಂತೆ.

ನೀರು ಬರುವ ನಿರೀಕ್ಷೆ:  ನಾರಾಯಣಪುರ ಜಲಾಶಯದ ಎಡದಂಡೆ ಕಾಲುವೆ, ಶಹಾಪುರ, ಮುಡಬಾಳ, ಇಂಡಿ, ಜೇವರ್ಗಿ ವಿಭಾಗೀಯ ಕಾಲುವೆ ಹಾಗೂ ಆಲಮಟ್ಟಿ ಜಲಾಶಯದ ಎಡ ಹಾಗೂ ಬಲದಂಡೆ ಕಾಲುವೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಬೇಕಿದೆ. ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳ ರೈತರು ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಲೋಕಾರ್ಪಣೆಗೆ ಗ್ರಹಣ: ನಾರಾಯಣಪುರ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದಿರಂದ ಹುನಗುಂದ ತಾಲ್ಲೂಕಿನ 24 ಸಾವಿರ ಹೆಕ್ಟೇರ್ ಬರಡು ಭೂಮಿಗೆ  ಹನಿ ನೀರಾವರಿ ಮೂಲಕ  ನೀರುಣಿಸಿದ ರಾಮಥಾಳ ಯೋಜನೆ ಲೋಕಾರ್ಪಣೆಗೆ ಗ್ರಹಣ ಬಡಿದಿದೆ. ಏಷ್ಯಾ ಖಂಡದಲ್ಲಿ ಮೊದಲ ಯಶಸ್ವಿ ಪ್ರಯೋಗ ಎಂಬ ಶ್ರೇಯ ಹೊಂದಿರುವ ಈ ಯೋಜನೆ ನಾರಾಯಣಪುರ ಜಲಾಶಯದ ಹಿನ್ನೀರನ್ನು ಅವಲಂಬಿಸಿದೆ.

ಈಗಾಗಲೇ ಪ್ರಾಯೋಗಿಕ ಹಂತದಲ್ಲಿ ರೈತರ ಜಮೀನುಗಳಿಗೆ ನೀರು ಹನಿಸಿ ಸಮೃದ್ಧ ಬೆಳೆ ತೆಗೆಯಲಾಗಿದೆ. ಈ ಹಂಗಾಮಿನಲ್ಲಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲು ಕೃಷ್ಣಾ ಭಾಗ್ಯ ಜಲ ನಿಗಮ ಸಿದ್ಧತೆ ಮಾಡಿಕೊಂಡಿದೆ. ಆದರೆ ನೀರು ಬಾರದೇ ಯೋಜನೆಗೆ ಸಿಗುವುದಿಲ್ಲ. ಇದರೊಂದಿಗೆ ಮರೋಳ ಏತ ನೀರಾವರಿ ಯೋಜನೆಯಡಿ 4.5 ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಂಡು 14 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಕಾಲುವೆ ಮೂಲಕ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿಯ ರೈತರೂ ನೀರಿನ ನಿರೀಕ್ಷೆಯಲ್ಲಿದ್ದಾರೆ.

ಮುಳವಾಡ ಏತ ನೀರಾವರಿ ಯೋಜನೆಯಡಿ ವಿಜಯಪುರ, ಬಸವನಬಾಗೇವಾಡಿ ಹಾಗೂ ಜಿಲ್ಲೆಯ ಜಮಖಂಡಿ ತಾಲ್ಲೂಕಿನ 30,850 ಹೆಕ್ಟೇರ್ ಭೂಮಿಗೆ ನೀರು ಹರಿಸಬೇಕಿದೆ.

**

ಆಲಮಟ್ಟಿ, ನಾರಾಯಣಪುರ ಜಲಾಶಯಗಳ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳಿಗೆ ಮುಂಗಾರು ಹಂಗಾಮಿನಲ್ಲಿ ನೀರು ಕೊಡಲು ಸಮಸ್ಯೆ ಆಗಲಾರದು. ಐಸಿಸಿ ಸಭೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ
ಎಂ.ಬಿ.ಪಾಟೀಲ, ಜಲಸಂಪನ್ಮೂಲ ಸಚಿವ

**ನೀರಾವರಿ ಸಲಹಾ ಸಮಿತಿ ಸಭೆ ನಾಳೆ

ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಂದ ಕಾಲುವೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಇದೇ 21ರಂದು ಬೆಂಗಳೂರಿನ ಕೆ.ಬಿ.ಜೆ.ಎನ್‌.ಎಲ್‌ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆಯಲಾಗಿದೆ. ಅದೇ ದಿನ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಂಸದರು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.