ADVERTISEMENT

ಭೂ ಸ್ವಾಧೀನ ಸಮಸ್ಯೆ ಬಗೆಹರಿಸಿಲ್ಲ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 6:30 IST
Last Updated 1 ಡಿಸೆಂಬರ್ 2017, 6:30 IST

ಆಲಮಟ್ಟಿ(ನಿಡಗುಂದಿ): ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಲುವೆಯ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿದ್ದು, ರಾಜ್ಯ ಸರ್ಕಾರ ಕೇವಲ ಕಾಲುವೆಯ ನಿರ್ಮಾಣದತ್ತ ಮಾತ್ರ ಒತ್ತು ನೀಡಿದ್ದು, ರೈತರ ಭೂಸ್ವಾಧೀನ ಸಮಸ್ಯೆ ಬಗೆಹರಿಸಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು. ಆಲಮಟ್ಟಿಯಲ್ಲಿ ಗುರುವಾರ ಬೆಳಿಗ್ಗೆ ಆಲಮಟ್ಟಿ ಜಲಾಶಯ ವೀಕ್ಷಣೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಈ ಭಾಗದ ರೈತರ ಬಹು ದೊಡ್ಡ ಸಮಸ್ಯೆ ಭೂಸ್ವಾಧೀನ ಸಮಸ್ಯೆಯಾಗಿದ್ದು, ಕಾಲುವೆ ಸೇರಿದಂತೆ ಇನ್ನೀತರ ಪ್ರಕ್ರಿಯೆಗಳಿಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಕಳೆದ ನಾಲ್ಕು ವರ್ಷದಿಂದಲೂ ಪರಿಹಾರ ನೀಡಿಲ್ಲ ಎಂದು ಅವರು ಆರೋಪಿಸಿದರು. ವಶಪಡಿಸಿಕೊಂಡ ಜಮೀನಿನ ರೈತನಿಗೆ ಇನ್ನೂವರೆಗೂ ಪರಿಹಾರ ನೀಡಿಲ್ಲ ಎಂದರು.

ಆಲಮಟ್ಟಿ ಜಲಾಶಯವನ್ನು 519.60 ಮೀ ದಿಂದ 524.256 ಮೀ ಎತ್ತರಕ್ಕೆ ನ್ಯಾಯಾಧೀಕರಣ ತೀರ್ಪು ನೀಡಿದೆ, ಆದರೆ ವಿವಿಧ ರಾಜ್ಯಗಳು ಇನ್ನಷ್ಟು ಸ್ಪಷ್ಟೀಕರಣ ಕೋರಿದ್ದು, ನಂತರವಷ್ಟೇ ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಲಿದೆ ಎಂದರು.

ADVERTISEMENT

‘ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ’ ಎಂಬ ಪಾದಯಾತ್ರೆ ನಡೆಸಿದ ಕಾಂಗ್ರೆಸ್, ಕೃಷ್ಣಾ ತೀರದ ಜನತೆಗೆ ನ್ಯಾಯಯುತವಾಗಿ ಯಾವುದೇ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ಜಮೀನಿಗೆ ನೀರು ಹರಿಸಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಗೆ ಕೇಂದ್ರದ ಮೇಲೆ ಹೊಣೆ ಮಾಡುತ್ತಿರುವ ರಾಜ್ಯ ಸರ್ಕಾರ, ಹೆಚ್ಚಿನ ವಿದ್ಯುತ್‌ನ ಅಗತ್ಯತೆಯ ಬಗ್ಗೆ ಕೇಂದ್ರಕ್ಕೆ ಮನವರಿಕೆಯನ್ನೇ ಮಾಡಿಲ್ಲ, ಪ್ರಧಾನಿ ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ರಾಜ್ಯಗಳ ಮಧ್ಯೆ ತಾರತಮ್ಯ ಮಾಡುವುದಿಲ್ಲ, ಕೇಂದ್ರದ ವಿದ್ಯುತ್ ಗ್ರಿಡ್‌ನಲ್ಲಿ ಸಾಕಷ್ಟು ವಿದ್ಯುತ್ ಲಭ್ಯವಿದೆ ಎಂದರು.

ಶಾಸಕ ರಮೇಶ ಭೂಸನೂರ, ಸಿಂದಗಿಯಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಈ ಬಗ್ಗೆ ವಿಚಾರಿಸಲಾಗುವುದು ಎಂದರು.

ಬಿಜೆಪಿ ಮುಖಂಡರಾದ ಮೋಹನ ಲಿಂಬಿಕಾಯಿ, ಎಸ್.ಕೆ. ಬೆಳ್ಳುಬ್ಬಿ, ಸಂಗರಾಜ ದೇಸಾಯಿ, ಹನುಮಂತ ನಿರಾಣಿ, ಎನ್. ರವಿಕುಮಾರ, ಸಂತೋಷಕುಮಾರ, ಶಿವಾನಂದ ಅವಟಿ, ಅಶ್ವಿನಿ ಪಟ್ಟಣಶೆಟ್ಟಿ, ವಿಶ್ವಕರ್ಮ ಮುಖಂಡ ಕೆ.ಪಿ. ನಂಜುಂಡಿ ಮೊದಲಾದವರು ಇದ್ದರು. ಆಲಮಟ್ಟಿ ಜಲಾಶಯ ವೀಕ್ಷಿಸಿದ ಯಡಿಯೂರಪ್ಪ ನೀರಿನ ಸಂಗ್ರಹ ನೋಡಿ ಹರ್ಷಗೊಂಡರು.

ನಂತರ ಆಲಮಟ್ಟಿಯಲ್ಲಿ ಬೈಕ್ ರಾಲಿಗೆ ಯಡಿಯೂರಪ್ಪ ಚಾಲನೆ ನೀಡಿದರು. ಆಲಮಟ್ಟಿ, ನಿಡಗುಂದಿ, ಗೊಳಸಂಗಿ, ಮುತ್ತಗಿ ಮಾರ್ಗವಾಗಿ ಬಸವನಬಾಗೇವಾಡಿ ವರೆಗೆ ಬೈಕ್ ರಾಲಿಯ ಮೂಲಕ ಯಡಿಯೂರಪ್ಪನವರನ್ನು ಕಾರ್ಯಕರ್ತರು ಕರೆದೊಯ್ದದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.