ADVERTISEMENT

‘ಮಾತೃಪೂರ್ಣ’ ಯೋಜನೆಗೆ ಇಂದು ಚಾಲನೆ

ಗರ್ಭಿಣಿ–ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಯೂಟ, ಅನ್ನ –ಸಾಂಬಾರ್‌ ಜೊತೆ ಮೊಟ್ಟೆ ವಿತರಣೆ

ವೆಂಕಟೇಶ್ ಜಿ.ಎಚ್
Published 2 ಫೆಬ್ರುವರಿ 2017, 6:12 IST
Last Updated 2 ಫೆಬ್ರುವರಿ 2017, 6:12 IST
‘ಮಾತೃಪೂರ್ಣ’ ಯೋಜನೆಗೆ ಇಂದು ಚಾಲನೆ
‘ಮಾತೃಪೂರ್ಣ’ ಯೋಜನೆಗೆ ಇಂದು ಚಾಲನೆ   

ಬಾಗಲಕೋಟೆ:  ಜಿಲ್ಲೆಯ ಜಮಖಂಡಿ ಸೇರಿದಂತೆ ರಾಜ್ಯದ ಐದು ತಾಲ್ಲೂಕುಗಳಲ್ಲಿನ ಗರ್ಭಿಣಿ ಹಾಗೂ ಬಾಣಂತಿಯರಿಗೆ ಗುರುವಾರದಿಂದ ಅಂಗನವಾಡಿಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಲಭ್ಯವಾಗಲಿದೆ.

ಅಪೌಷ್ಟಿಕತೆಯಿಂದ ತಾಯಿ ಮತ್ತು ಮಗುವಿನ ಸಾವು ತಪ್ಪಿಸುವ ನಿಟ್ಟಿನಲ್ಲಿ, ಸರ್ಕಾರ ರಾಜ್ಯದ ಐದು ತಾಲ್ಲೂಕುಗಳಲ್ಲಿ (ರಾಯಚೂರು ಜಿಲ್ಲೆಯ ಮಾನ್ವಿ, ಸಿರಿವಾರ, ತುಮಕೂರು ಜಿಲ್ಲೆಯ ಮಧುಗಿರಿ, ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ, ಬಾಗಲಕೋಟೆಯ ಜಮಖಂಡಿಯ ಆಲಗೂರು) ‘ಮಾತೃಪೂರ್ಣ’ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.

ಗುರುವಾರ ಜಮಖಂಡಿ ತಾಲ್ಲೂಕಿನ ಆಲಗೂರಿನ ಅಂಗನವಾಡಿ ಕೇಂದ್ರದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ‘ಪೌಷ್ಟಿಕ ಆಹಾರ ಕಾರ್ಯಕ್ರಮ ಜಾರಿ ಹಾಗೂ ತಾಯಿ ಮತ್ತು ಮಕ್ಕಳ ಆರೋಗ್ಯ ಸುಧಾರಣೆಗೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಹಿಂದೆ ಬಿದ್ದಿದೆ. ಹಾಗಾಗಿ ಕಳೆದ ಆಗಸ್ಟ್ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಯ ಘೋಷಣೆ ಮಾಡಿದ್ದರು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಅಶೋಕ ಕೆಲೂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊಟ್ಟೆ, ಹಾಲು: ಆಯಾ ಅಂಗನವಾಡಿಗಳ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಗರ್ಭಿಣಿ ಮತ್ತು ಬಾಣಂತಿಯರಿಗೆ ಈ ಸೌಲಭ್ಯವಿದೆ. 18ರಿಂದ 20 ಗ್ರಾಂ ಪ್ರೊಟೀನ್‌ ಒಳಗೊಂಡಂತೆ ಪ್ರತಿ ದಿನ 600 ಕ್ಯಾಲೊರಿಯಂತೆ ವಾರದಲ್ಲಿ ಆರು ದಿನ ಆಹಾರ ವಿತರಿಸಲಾಗುತ್ತದೆ. ಅನ್ನ–ಸಾಂಬಾರ್, ಪಲ್ಯ, ಬೇಯಿಸಿದ ಮೊಟ್ಟೆ, (ಮೊಟ್ಟೆ ತಿನ್ನದವರಿಗೆ ಮೊಳಕೆ ಕಾಳು) 200 ಮಿ.ಲೀ ಹಾಲು ಹಾಗೂ ಶೇಂಗಾ–ಬೆಲ್ಲ ಮಿಶ್ರಣದ ಚಿಕ್ಕಿ ಇರಲಿದ್ದು, ಇದರೊಂದಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ಕಡ್ಡಾಯವಾಗಿ ನೀಡುವ ಯೋಜನೆ ಹೊಂದಲಾಗಿದೆ. ಗರ್ಭಿಣಿ ಎಂದು ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡ ದಿನದಿಂದ ಹೆರಿಗೆಯಾಗಿ ಆರು ತಿಂಗಳವರೆಗೆ ಯೋಜನೆಯಡಿ ಬಿಸಿಯೂಟ ನೀಡಲಾಗುತ್ತದೆ.

ಊಟದ ಖರ್ಚು ಎಂದು ಪ್ರತಿ ಫಲಾನುಭವಿಗೆ ದಿನಕ್ಕೆ ₹ 21 ಖರ್ಚು ಮಾಡಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ ₹ 7 ಹಾಗೂ ಉಳಿದ ₹ 14 ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.

***

ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿದೆ. ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಏಪ್ರಿಲ್‌ನಿಂದ ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ.
- ಉಮಾಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.