ADVERTISEMENT

ಮಿಂಚಿನ ನೋಂದಣಿ ಅಭಿಯಾನ ಯಶಸ್ವಿ

ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್‌, ಸಿಇಒ ವಿಕಾಸ್ ಸುರಳಕರ್ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 5:49 IST
Last Updated 9 ಏಪ್ರಿಲ್ 2018, 5:49 IST

ಬಾಗಲಕೋಟೆ: ಚುನಾವಣಾ ಆಯೋಗ ಹಮ್ಮಿಕೊಂಡ ವಿಶೇಷ ಮತದಾರರ ಮಿಂಚಿನ ನೋಂದಣಿ ಅಭಿಯಾನ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಯಶಸ್ವಿಯಾಗಿ ನಡೆಯಿತು.

ಮತಗಟ್ಟೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ಮತ್ತು ಹೊಸದಾಗಿ ಪಟ್ಟಿಗೆ ಹೆಸರು ಸೇರಿಸಲು ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸಿದರು.ಈ ಬಾರಿ ಶೇ.80ರಷ್ಟು ಮತದಾನವಾಗಬೇಕು. ಈ ನಿಟ್ಟಿನಲ್ಲಿ ಮತದಾನದಿಂದ ವಂಚಿತರಾಗದಂತೆ ಚುನಾವಣಾ ಆಯೋಗವು ವಿಶೇಷ ಅಭಿಯಾನ ಕೈಗೊಂಡಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಏ.14 ರವರೆಗೆ ಅವಕಾಶವಿದೆ. ತಪ್ಪದೇ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಮ್‌ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್ ಅವರು ಮಿಂಚಿನ ನೋಂದಣಿ ಅಭಿಯಾನದ ಕುರಿತು ಬಾಗಲಕೋಟೆ ಹಾಗೂ ಇತರೆ ಮತಕ್ಷೇತ್ರಗಳ ಮತಗಟ್ಟೆಗಳಿಗೆ ಭೇಟಿ ನೀಡಿ ನೋಂದಣಿ ಅನುಷ್ಠಾನ ಪ್ರಕ್ರಿಯೆಯನ್ನು ವೀಕ್ಷಿಸಿದರು.ಕೆಲವೊಂದು ಮತಗಟ್ಟೆಗಳಲ್ಲಿನ ಬೋರ್ಡ್‌ಗಳಲ್ಲಿ ಮಿಂಚಿನ ನೋಂದಣಿ ಅಭಿಯಾನದ ಮಾಹಿತಿ ಬರೆಯಿಸಿದರು. ಉಪವಿಭಾಗಾಧಿಕಾರಿ ಎಚ್.ಜಯಾ ಹಾಗೂ ತಹಶೀಲ್ದಾರ್‌ ವಿನಯ ಕುಲಕರ್ಣಿ ಇದ್ದರು.

ADVERTISEMENT

ಕಲಾದಗಿಯಲ್ಲಿ ಪ್ರಾರಂಭ

ಕಲಾದಗಿ: ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಚುನಾವಣಾ ಆಯೋಗ ಭಾನುವಾರ ಗ್ರಾಮದ ವಿಧಾನ ಸಭಾ ಮತಗಟ್ಟೆಗಳಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನ ಪ್ರಾರಂಭಿಸಿದೆ.ವಿಧಾನಸಭಾ ಮತಕ್ಷೇತ್ರಗಳ ಮತಗಟ್ಟೆ ಸಂಖ್ಯೆ 187ರಿಂದ 198ರ ಬೂತ್‌ಗಳಲ್ಲಿ ಬೆಳಿಗ್ಗೆಯಿಂದಲೇ ಮತದಾರರು ಮತದಾರರ ಪಟ್ಟಿಯನ್ನು ಪರಿಶೀಲಿಸಿದರು.

ಚುನಾವಣಾ ಸೆಕ್ಟರ್ ಅಧಿಕಾರಿ ಬಿ ಬಿ ನಡುವಿನಮನಿ ಗ್ರಾಮದ 12 ಮತಗಟ್ಟೆಗಳಿಗೆ ಭೇಟಿ ನೀಡಿದ್ದರು. ಈ ಸಂಧರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಅಪ್ಪಾಜಿ ಸೂರ್ಯವಂಶಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಇದ್ದರು.

ಮತದಾನದ ಪ್ರಾತ್ಯಕ್ಷಿಕೆ

ಗುಳೇದಗುಡ್ಡ: ಹೊಸ ಮತದಾರರಿಗೆ ಮತದಾನ ಮಾಡುವ ವಿಧಾನ, ಮಾಡಿದ ಮತದಾನವನ್ನು ಅಲ್ಲಿಯೇ ಖಾತರಿ ಮಾಡಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಸೇರಿದಂತೆ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದ ಅನುಮಾನಗಳಿಗೆ ಉತ್ತರ ಕಂಡುಕೊಳ್ಳುವ ಮತದಾನದ ಪ್ರಾತ್ಯಕ್ಷಿಕೆ ಶನಿವಾರ ನಡೆಯಿತು.

ಚುನಾವಣೆ ಆಯೋಗದ ನಿರ್ದೇಶನದಂತೆ ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ಪಟ್ಟಣದಲ್ಲಿ ಮತಯಂತ್ರ, ಮತದಾನ ಖಾತರಿ ಯಂತ್ರಗಳೊಂದಿಗೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಸೆಕ್ಟರ್ ಚುನಾವಣೆ ಅಧಿಕಾರಿಗಳು ಪಟ್ಟಣದ ಪುರಸಭೆ ಎದುರಿನ ಸಾರ್ವಜನಿಕ ಕಟ್ಟೆ ಮೇಲೆ, ಅರಳಿಕಟ್ಟಿ, ಗಚ್ಚಿನಕಟ್ಟಿ, ಭಂಡಾರಿ ಕಾಲೇಜು ಕ್ರಾಸ್, ಹರದೊಳ್ಳಿ, ಬಸ್ ನಿಲ್ದಾಣದಂತಹ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಪ್ರಾತ್ಯಕ್ಷಿಕೆ ನೀಡಿದರು.

ಸೆಕ್ಟರ್ ಚುನಾವಣೆ ನೋಡಲ್ ಅಧಿಕಾರಿ, ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರು ಹಾಗೂ ಐ.ಎಸ್. ಚಿತ್ತರಗಿ ಅವರು ಪ್ರಾತ್ಯಕ್ಷಿಕೆ ಮಾಡಿ ತೋರಿಸುವ ಮೂಲಕ ಜನರಲ್ಲಿರುವ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಅನುಮಾನವನ್ನು ನಿವಾರಣೆಗೊಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಕಚೇರಿ ವ್ಯವಸ್ಥಾಪಕ ಯು.ಜಿ. ವರದಪ್ಪನವರ, ಪ್ರಭಾರಿ ಉಪ ತಹಶೀಲ್ದಾರ್‌ ಮಹಾಂತೇಶ ಅಂಗಡಿ,
ಕಂದಾಯ ಅಧಿಕಾರಿ ಎಂ.ಆರ್. ಸುಗಂದಿ, ಪಿ.ವೈ. ದುರಗದ, ರಮೇಶ ಪದಕಿ, ಎಸ್.ಜಿ. ವಾಸ್ನದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.