ADVERTISEMENT

ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ

ಕೂಡಲಸಂಗಮದಲ್ಲಿ ಶರಣಮೇಳ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 19:30 IST
Last Updated 14 ಜನವರಿ 2017, 19:30 IST
ಕೂಡಲಸಂಗಮದ ಬಸವ ಧರ್ಮ ಪೀಠದ ಮಹಾಮನೆಯ ಆವರಣದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಶನಿವಾರ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶರಣ ಗಣ
ಕೂಡಲಸಂಗಮದ ಬಸವ ಧರ್ಮ ಪೀಠದ ಮಹಾಮನೆಯ ಆವರಣದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಶನಿವಾರ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶರಣ ಗಣ   

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ಇಲ್ಲಿ ನಡೆಯುತ್ತಿರುವ 30ನೇ ಶರಣ ಮೇಳದ ಅಂಗವಾಗಿ, ಶನಿವಾರ ಬಸವ ಧರ್ಮ ಪೀಠದ ಮಹಾಮನೆಯ ಆವರಣದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನ ಆಚರಿಸಲಾಯಿತು. 

ನಾಡಿನ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಶರಣ– ಶರಣೆಯರು ಸ್ನಾನ, ಇಷ್ಟಲಿಂಗಾರ್ಚನೆ, ಬಸವಾರ್ಚನೆ ಪೂರೈಸಿ ಗಣಲಿಂಗ ದರ್ಶನ ಮತ್ತು ಸ್ಪರ್ಶ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಧ್ವಜಾರೋಹಣ ಮತ್ತು ಗುರುವಂದನೆ, ಸಮುದಾಯ ಪ್ರಾರ್ಥನೆಯ ಬಳಿಕ ಕುಸುರೆಳ್ಳು ವಿನಿಮಯ ನಡೆಯಿತು.

ಮಹಾಮನೆಯ ಮುಂಭಾಗದಲ್ಲಿ ಲಿಂಗಾಯತ ಧರ್ಮದ ಧ್ವಜಾರೋಹಣವನ್ನು ಕೂಡಲಸಂಗಮದ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ನೆರವೇರಿಸಿದರು. ಪೀಠಾಧ್ಯಕ್ಷೆ ಮಾತೆ ಮಹಾದೇವಿ, ಮಾತೆ ಗಂಗಾದೇವಿ, ಚನ್ನಬಸವಾನಂದ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ, ಬಸವ ಕುಮಾರ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಮಾತೆ ಬಸವರತ್ನಾ, ಮಾತೆ ಸತ್ಯಾದೇವಿ, ಮಾತೆ ಶಾಂತಾದೇವಿ ಪಾಲ್ಗೊಂಡಿದ್ದರು. ಆ ಬಳಿಕ ಗುರುವಂದನೆ ಕಾರ್ಯಕ್ರಮ ನಡೆಯಿತು.

ADVERTISEMENT

ಧ್ವಜಾರೋಹಣದ ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ, ‘ಬಸವಣ್ಣನವರು ತಮ್ಮ 21ನೇ ವಯಸ್ಸಿನಲ್ಲಿ ಜನವರಿ 14, 1155ರಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಆದರಿಂದ ಜನವರಿ 14 ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ. ಇದನ್ನು ಬಸವ ಕ್ರಾಂತಿ ದಿನ ಎಂದು ಕೂಡ ಕರೆಯಲಾಗುತ್ತದೆ. ಪುರೋಹಿತಶಾಹಿಯನ್ನು ಪ್ರತಿಭಟಿಸಿ ಜನ ಸಾಮಾನ್ಯರನ್ನು ದೇವಾಲಯದೊಳಗೆ ಕರೆದೊಯ್ದು ಪೂಜೆ ಮಾಡಿಸಿದ ದಿನವಿದು. ದೈವಸಾಕ್ಷಾತ್ಕಾರ ಹೊಂದಿ ಇಷ್ಟಲಿಂಗದ ಪರಿಕಲ್ಪನೆ ನೀಡಿದ ದಿನವೂ ಕೂಡ ಇದೇ ಆಗಿದೆ’ ಎಂದರು.

ಈ ಎಲ್ಲ ಕಾರಣದಿಂದ ಲಿಂಗಾಯತರು ಪ್ರತಿ ವರ್ಷ ಜ. 14ರಂದು ಕೂಡಲಸಂಗಮಕ್ಕೆ ಬಂದು 9 ವಿಧಿಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.