ADVERTISEMENT

ವರ್ಷಧಾರೆಗಾಗಿ ಜೋಕುಮಾರನ ಆರಾಧನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 6:36 IST
Last Updated 3 ಸೆಪ್ಟೆಂಬರ್ 2017, 6:36 IST

ಬಾದಾಮಿ:  ವರ್ಷಧಾರೆಗಾಗಿ ನಗರದಲ್ಲಿ ಜೋಕುಮಾರಸ್ವಾಮಿ ಆರಾಧನೆ ನಡೆಯಿತು. ಗಣೇಶನ ವಿಸರ್ಜನೆ ಮರುದಿನ ಎಳೆಗೌರಿ ಮಗ ಜೋಕುಮಾರಸ್ವಾಮಿ ಜನಿಸುತ್ತಾನೆ. ಬೇವಿನ ಸೊಪ್ಪಿನಲ್ಲಿ ಸಿಂಗರಿಸಿದ ಜೋಕುಮಾರಸ್ವಾಮಿ ಮೂರ್ತಿಯನ್ನು ಬಾರಕೇರ ಜನಾಂಗದ ಮಹಿಳೆಯರು ಬುಟ್ಟಿಯಲ್ಲಿ ಹೊತ್ತುಕೊಂಡು ಮನೆ ಮನೆಗೆ ಬರುವುದು ಇಲ್ಲಿನ ಸಂಪ್ರದಾಯ.

‘ಗಣೇಶ ಐದು ದಿನ ಸಿಹಿ ಉಂಡಿ, ಕಡಬು ತಿಂದು ತಂದೆ ಶಿವನ ಹತ್ತಿರ ಹೋಗಿ ಭೂಲೋಕದಲ್ಲಿ ಜನರು ಸಂತಸವಾಗಿದ್ದಾರೆ. ನನಗೆ ಸಿಹಿ ಸಿಹಿಯಾದ ಊಟವನ್ನು ಬಡಿಸಿದರು ಎಂದು ಹೇಳುವನಂತೆ ಹೀಗಾಗಿ ಮಳೆ ಆಗುವುದಿಲ್ಲ’ ಎನ್ನುವುದು ಕೃಷಿಕರ ನಂಬಿಕೆ. ಜೋಕುಮಾರ ಮಳೆ ದೇವರು ಎಂದು ನಂಬಿಕೆ. ಜೋಕುಮಾರಸ್ವಾಮಿ ಮರಣ ಹೊಂದಿದ ಮೇಲೆ ಮಳೆ ಆಗುತ್ತದೆ ಎಂದು ಕೃಷಿಕರು ನಂಬಿದ್ದಾರೆ. ಜೋಕುಮಾರ ಮನೆಗೆ ಬಂದಾಗ  ಮಹಿಳೆಯರು  ಉಪ್ಪು, ಮೆಣಸಿನಕಾಯಿ, ಎಣ್ಣೆಯನ್ನು ಕೊಡುವರು.

ಮೈಮೇಲೆ ಚಿಕ್ಕಾಡು, ತಿಗಣಿಯನ್ನು ಬಿಡುವರು. ಹೊತ್ತು ತಂದ ಮಹಿಳೆಯರಿಗೆ ಜೋಳ, ಅಕ್ಕಿ, ರೊಟ್ಟಿ ಮತ್ತು ಹಣ ನೀಡುತ್ತಾರೆ. ಭೂಲೋಕದ ಜನರ ದುಃಸ್ಥಿತಿ ಕಂಡು ಚಿಕ್ಕಾಡು, ತಿಗಣಿ ಕಡಿಸಿಕೊಂಡು ಜೋಕುಮಾರ ಭೂಲೋಕದ ಜನರ ಕಷ್ಟವನ್ನು ಶಿವನಿಗೆ ಹೇಳಿದಾಗ ನಂತರ ಮಳೆ ಬರಿಸುತ್ತಾನೆ ಎಂದು ನಂಬಿಕೆ ಇದೆ.

ADVERTISEMENT

ಜೋಕುಮಾರನ ಕುರಿತು ಯಮನಮ್ಮ, ಸರಸ್ವತಿ, ದೇವಕ್ಕೆವ್ವ ಮತ್ತು ಅನಸಮ್ಮ ಹಾಡು ಹೇಳಿದರು.   ಮಹಿ ಳೆಯರು ಜೋಕುಮಾರನ ನೈವೇದ್ಯದ  ಅಂಬಲಿ (ಜೋಳದ ನುಚ್ಚು) ನೀಡುವರು.  ಹೊಲದಲ್ಲಿ ಹೂತರೆ ಬೆಳೆ ಇಳುವರಿ ಹೆಚ್ಚುವ ನಂಬಿಕೆ ರೈತರಲ್ಲಿದೆ. 

‘ಆರಂಭದಿಂದಲೇ ರೈತರಿಗೆ ಮುಂಗಾರು ಮಳೆ ಕೈಕೊಟ್ಟಿದೆ. ಇದುವರೆಗೂ ಬಾದಾಮಿ ಪಟ್ಟಣ ಮತ್ತು  ಸುತ್ತ ಮಳೆಯಾಗಿಲ್ಲ. ಜೋಕುಮಾರನಾದರೂ ಮಳೆ ಬರಿಸಲಿ ಎಂದು ಕೃಷಿಕರು ಬೇಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.