ADVERTISEMENT

ವಿವಿಧ ಬೇಡಿಕೆಗೆ ಆಗ್ರಹ: ಪ್ರತ್ಯೇಕ ಪ್ರತಿಭಟನೆ

ಎಐಯುಟಿಯುಸಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ನೇತೃತ್ವದಲ್ಲಿ ಮೆರವಣಿಗೆ, ಸರ್ಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:40 IST
Last Updated 31 ಜನವರಿ 2017, 6:40 IST
ವಿವಿಧ ಬೇಡಿಕೆಗೆ ಆಗ್ರಹ: ಪ್ರತ್ಯೇಕ ಪ್ರತಿಭಟನೆ
ವಿವಿಧ ಬೇಡಿಕೆಗೆ ಆಗ್ರಹ: ಪ್ರತ್ಯೇಕ ಪ್ರತಿಭಟನೆ   

ಬಾಗಲಕೋಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನೋಟು ರದ್ದತಿ:   ನೋಟುರದ್ದತಿ ಕ್ರಮದಿಂದ ಬಡವರು, ರೈತರು, ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಸ್ಥರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದ ಆರೋಪಿಸಿ ಆಲ್‌ ಇಂಡಿಯಾ ಯೂನೈಟೆಡ್‌ ಯೂನಿಯನ್‌ ಸೆಂಟರ್‌(ಎಐಯುಟಿಯುಸಿ) ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾ ಆಡಳಿತ ಭವನದ ಮುಂದೆ ಭಾನುವಾರ ಪ್ರತಿಭಟನೆ ಮಾಡಿದರು ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಕ್ರಮದಿಂದ ಕಪ್ಪು ಹಣ ಪತ್ತೆಯಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿಲ್ಲ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 3ರಿಂದ 4 ತಿಂಗಳ ವೇತನ ದೊರೆತಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ಎಐಯುಟಿಯುಸಿ ಸಂಚಾಲಕ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಶೇ 60ರಷ್ಟು ವ್ಯಾಪಾರ ಕುಸಿದಿದೆ. ಆದರೆ ಕೇಂದ್ರ ಸರ್ಕಾರ  ಡಿಜಿಟಲ್ ವ್ಯವಹಾರ ಎಂದು ಹೇಳುತ್ತ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ದೂರಿದರು.

ಅಂಜನಾ ಕುಂಬಾರ, ರಾಜು ಲಮಾಣಿ, ಪರಶುರಾಮ ಆಲೂರ, ಅನುಷಾ ದಳವಾಯಿ, ಅಂಬಿಕಾ ಡೊಳ್ಳಿ,  ಸುನಂದ ಹಡಪದ, ಸುಮಲತಾ ಮೆಳ್ಳಿಗೇರಿ, ಕಲಾವತಿ ಕೊಣ್ಣೂರ, ಗಂಗವದವ ಕುಂಟೋಜ, ವಿದ್ಯಾ, ಅಂಬವ್ವ, ಸಯ್ಯದ್‌ ನದಾಪ ಪ್ರತಿಭಟನೆಯಲ್ಲಿ ಇದ್ದರು.

ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ: ರಾಜ್ಯದಲ್ಲಿ 900 ಹೊಸ ಎಂಎಸ್‌ಐಎಲ್‌ ಮದ್ಯದ ಅಂಗಡಿಗಳನ್ನು ತೆರೆಯಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸೋಮವಾರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ ಮದ್ಯದಂಗಡಿ ಪ್ರಾರಂಭ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಅದರ ಬದಲಿ ಬಡವರಿಗೆ, ಕೃಷಿಕರಿಗೆ ಅವಶ್ಯ ಯೋಜನೆಗಳನ್ನು ಜಾರಿಗೆ ತರಬೇಕು. ಪ್ರತಿ ವಿಧಾನ ಸಭೆ ಕ್ಷೇತ್ರದಲ್ಲಿ ಮದ್ಯ ಅಂಗಡಿ ತೆರೆಯಲು ಮುಂದಾಗಿರುವ ಕ್ರಮ ಸರಿಯಾದ ನಿರ್ಧಾರವಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹಣಮಂತ ಸುಕಾಲಿ, ಕಾರ್ಯದರ್ಶಿ, ಶಂಕರ ಶೆಟ್ಟಿ ಎಂ, ಶ್ರೀಕಾಂತ ಸಂದಿಮನಿ, ಡಿ.ಎಂ.ಸಾಹುಕಾರ, ಜಯಾ ಮರಾಠೆ, ವೆಂಕಪ್ಪ ಮುಳ್ಳೂರು, ಚಂದ್ರಶೇಖರ ಕಾಖಂಡಕಿ, ರವೀಂದ್ರ ಒಂದುಕುದುರಿ, ಮಾಂತೇಶ ಹನುಮನಾಳ, ಡಾ.ಎಂ.ಜಿ.ಕಿತ್ತಲಿ, ಶೈಲಜಾಗೌಡ ಪಾಟೀಲ, ರಂಗನಗೌಡ ದಂಡಣ್ಣವರ, ಉಮೇಶ ಜಾಧವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.