ADVERTISEMENT

ಸಭೆಗೆ ಗೈರು, ಸಿಎಂಒಗೆ ನೋಟಿಸ್‌: ಇಒ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 7:11 IST
Last Updated 18 ಜುಲೈ 2017, 7:11 IST

ಜಮಖಂಡಿ: ‘ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಗೆ ಗೈರು ಹಾಜರ ಆಗಿರುವ ನಗರದ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಿದ್ದಪ್ಪ ನಾಯಕ ಅವರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗುವುದು’ ಎಂದು ತಾಲ್ಲೂಕು ಪಂಚಾಯ್ತಿ ಇಒ ಎನ್‌.ವೈ. ಬಸರಿಗಿಡದ ಹೇಳಿದರು.

ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಹಳಷ್ಟು ಇಲಾಖೆಗಳ ಮುಖ್ಯಸ್ಥರು ಸಭೆಗೆ ಗೈರು ಹಾಜರಾಗಿದ್ದಾರೆ. ಅಂತಹವರ ವಿರುದ್ಧ ಏನು ಕ್ರಮ ಕೈಗೊಳ್ಳುವಿರಿ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಮಂತ ಚೌರಿ ಅವರು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

‘ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯ ನೋಟಿಸ್‌ ಅನ್ನು  ಸುಮಾರು 10 ದಿನಗಳ ಮುಂಚೆ ತಲುಪಿಸಲಾಗಿರುತ್ತದೆ. ಒಂದು ದಿನ ಹೊಂದಾಣಿಕೆ ಮಾಡಿಕೊಂಡು ಸಭೆ ಬರದಿದ್ದರೆ ಯಾರನ್ನು ಕೇಳುವುದು’ ಎಂದು ಖಾರವಾಗಿ ಚೌರಿ ಅವರು ಪ್ರಶ್ನಿಸಿದಾಗ ‘ಈಗಾಗಲೇ ಎರಡು ಸಭೆಗಳಿಗೆ ಗೈರು ಹಾಜರ ಆಗಿರುವ ಸಿಎಂಒ ಸಿದ್ದಪ್ಪ ನಾಯಕ ಸತತ ಮೂರನೇ ಸಭೆಗೆ ಗೈರು ಹಾಜರ ಆಗಿರುವುದರಿಂದ ಅವರಿಗೆ ನೋಟಿಸ್‌ ನೀಡಲಾಗುವುದು’ ಎಂದು ಇಒ ಸಭೆಗೆ ತಿಳಿಸಿದರು.

ADVERTISEMENT

‘ಆಸ್ಪತ್ರೆಯ ಅವಧಿಯಲ್ಲಿ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಮಾಡುವ ವೈದ್ಯಾಧಿಕಾರಿ ಡಾ.ವಿ.ಎಸ್‌ ಕಂದಗಲ್‌ ಅವರ ವಿರುದ್ಧ ಏನು ಶಿಸ್ತುಕ್ರಮ ಜರುಗಿಸಲಾಗಿದೆ. ದೂರವಾಣಿ ಕರೆ ಮಾಡಿದರೂ 108 ಅಂಬ್ಯುಲನ್ಸ್‌ ಬರುವುದಿಲ್ಲ. ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲನ್ಸ್‌ಗಾಗಿ ಡೀಸೆಲ್‌ಗೆ ಹಣ ಕೇಳುತ್ತಾರೆ’ ಎಂದು ಸದಸ್ಯ ಗುರುಪಾದಯ್ಯ ಮರಡಿಮಠ ಆರೋಪಿಸಿದರು.

‘ನಾವಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬೆಂಚ್‌ ಖರೀದಿಸಲು ₹1 ಲಕ್ಷ ಅನುದಾನ ಬಿಡುಗಡೆ ಆಗಿತ್ತು. ಆದರೆ, ಮುಖ್ಯ ಶಿಕ್ಷಕರು ಬೆಂಚ್‌ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ. ಒಂದು ಬೆಂಚ್‌ನ ಬೆಲೆ ₹2200 ರಿಂದ ₹2500 ವರೆಗೆ ಮಾತ್ರ ಇದೆ. ಆದರೆ, ಅವರು ₹4057 ಬೆಲೆ ಖರೀದಿಸಿದ್ದಾರೆ. 44 ಬೆಂಚ್‌ಗಳನ್ನು ಖರೀದಿಸುವ ಹಣದಲ್ಲಿ ಕೇವಲ 22 ಬೆಂಚ್‌ಗಳನ್ನು ಮಾತ್ರ ಖರೀದಿಸಲಾಗಿದೆ. ಉಳಿದ 20 ಬೆಂಚ್‌ಗಳು ಒಂದೆರಡು ದಿನಗಳಲ್ಲಿ ಶಾಲೆಗೆ ಬರಬೇಕು’ ಎಂದು ಗುರುಪಾದಯ್ಯ ಮರಡಿಮಠ ಗುಡುಗಿದರು.

ಅವ್ಯವಹಾರ ಕುರಿತು ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಕ ಮಾಡುವುದಾಗಿ ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ ಸಭೆಗೆ ಸಮಜಾಯಿಷಿ ನೀಡಿದರು. ಅಷ್ಟಕ್ಕೆ ತೃಪ್ತರಾಗದ ಮರಡಿಮಠ ಬಿಇಒ ಕಚೇರಿ ಮುಂದೆ ಧರಣಿ ನಡೆಸುವ ಎಚ್ಚರಿಕೆ ನೀಡಿದರು. ‘ಕೋಚಿಂಗ್‌ ಕ್ಲಾಸ್‌ಗಳನ್ನು ಮುಚ್ಚಿಸಬೇಕು‘ ಎಂದು ಸದಸ್ಯ ಭೀಮಪ್ಪ ಹಾದಿಮನಿ ಒತ್ತಾಯಿಸಿದರು. ‘ಪಠ್ಯ ಪುಸ್ತಕ ಸರಿಯಾಗಿ ಪೂರೈಕೆಯಾಗಿಲ್ಲ’ ಎಂದು ಪುಂಡಲೀಕ ಪಾಲಬಾವಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಶಾಲಾ ಮಕ್ಕಳ ಸಮವಸ್ತ್ರಕ್ಕಾಗಿ ಪೂರೈಸುವ ಬಟ್ಟೆ ಸಾಕಾಗುವುದಿಲ್ಲ ಎಂದು ಸದಸ್ಯೆ ನಾಗವ್ವ ಕುರಣಿ ದೂರಿದರು.

ಕುಂಚನೂರ ಸರ್ಕಾರಿ ಶಾಲೆಯಲ್ಲಿ ಇರುವ 12 ಕಂಪ್ಯೂಟರ್‌ಗಳ ಪೈಕಿ 2 ಕಂಪ್ಯೂಟರ್‌ಗಳು ಮಾತ್ರ ಕಳವು ಆಗಿವೆ. ಆದರೆ, ಕಳ್ಳತನ ಕುರಿತು ಪೊಲೀಸರಿಗೆ ದೂರು ನೀಡದಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಸದಸ್ಯ ರಾಜು ಬಾಗೇವಾಡಿ ಕಳವಳ ವ್ಯಕ್ತಪಡಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುನಂದಾ ಮುಗಳಖೋಡ,
ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ಸ್ಥಾಯಿ ಸಮಿತಿ ಚೇರಮನ್ ಧರೆಪ್ಪ ಗುಗ್ಗರಿ ಇದ್ದರು.

‘ಆಯಾ ಇಲಾಖೆಗಳ ಪ್ರಗತಿ ವರದಿಯನ್ನು ಸಭೆಯ ದಿನಾಂಕಕ್ಕಿಂತ 2–3 ದಿನ ಮುಂಚೆ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಸಲ್ಲಿಸಬೇಕು. ಎಲ್ಲ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರ ಆಗಬೇಕು’ ಎಂದು ಟಿಪಿಇಒ ಎನ್‌.ವೈ. ಬಸರಿಗಿಡದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.