ADVERTISEMENT

ಸಮುದಾಯ ಆರೋಗ್ಯ ಕೇಂದ್ರದತ್ತ ರೋಗಿಗಳು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 4:45 IST
Last Updated 14 ನವೆಂಬರ್ 2017, 4:45 IST

ರಬಕವಿ ಬನಹಟ್ಟಿ: ರಾಜ್ಯ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಕೆಪಿಎಂಇ ವಿಧೇಯಕ ವಿರೋಧಿಸಿ, ಅವಳಿ ನಗರದ ಬಹುತೇಕ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ ಪರಿಣಾಮ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂತು.

‘ಇಂದು ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ ಸುಮಾರು 200 ಜನರು ಬರುತ್ತಿದ್ದರು. ಆದರೆ ಮಧ್ಯಾಹ್ನದವೆರೆಗೆ ಅಂದಾಜು 300ರ ಗಡಿಯನ್ನೂ ದಾಟಿದೆ. ಸಂಜೆಯವರೆಗೆ ಇನ್ನಷ್ಟು ರೋಗಿಗಳು ಬರುವ ಸಾಧ್ಯತೆ ಇದೆ’ ಎಂದು ವೈದ್ಯಾಧಿಕಾರಿ ಡಾ.ಎನ್‌.ಎಂ.ನದಾಫ್‌ ಪತ್ರಿಕೆಗೆ ತಿಳಿಸಿದರು.

‘ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾರಿಗೂ ರಜೆ ನೀಡಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಔಷಧಿಯ ಸಂಗ್ರಹವನ್ನು ಮಾಡಿಕೊಳ್ಳಲಾಗಿದೆ. ಈವರೆಗೂ ಯಾವುದೇ ತೊಂದರೆಯಾಗಿಲ್ಲ. ಗ್ರಾಮೀಣ ಪ್ರದೇಶದ ಜನರು ಹೆಚ್ಚಾಗಿ ಬರುತ್ತಿದ್ದಾರೆ’ ಎಂದರು.

ADVERTISEMENT

ಈ ಸಂದರ್ಭದಲ್ಲಿ ಆಸ್ಪತ್ರೆಯ ಡಾ.ವೀರೇಶ ಹುಡೇದಮನಿ, ಡಾ.ಸುನೀಲ ಹನಗಂಡಿ ಇದ್ದರು. ಖಾಸಗಿ ವೈದ್ಯರು ಬೆಳಗಾವಿ ವಿಧಾನ ಸೌಧ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದರಿಂದ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ಸಂಪೂರ್ಣವಾಗಿ ಮುಚ್ಚಿದ್ದವು. ಆದರೆ, ಔಷಧಿ ಅಂಗಡಿಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.