ADVERTISEMENT

ಸಿಗ್ನಲ್‌ದೀಪ ಆರಂಭ ಆಗಸ್ಟ್ 1ರಿಂದ

ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ನಾಲ್ಕು ಕಡೆ ಬಸ್‌ ಬೇ: ಪೊಲೀಸ್‌ ಇಲಾಖೆ ಸೂಚನೆ

ವೆಂಕಟೇಶ್ ಜಿ.ಎಚ್
Published 10 ಜುಲೈ 2017, 11:40 IST
Last Updated 10 ಜುಲೈ 2017, 11:40 IST
ಸಿಗ್ನಲ್‌ದೀಪ ಆರಂಭ ಆಗಸ್ಟ್ 1ರಿಂದ
ಸಿಗ್ನಲ್‌ದೀಪ ಆರಂಭ ಆಗಸ್ಟ್ 1ರಿಂದ   

ಬಾಗಲಕೋಟೆ: ನಗರದ ವ್ಯಾಪ್ತಿಯಲ್ಲಿ ಪದೇ ಪದೇ ರಸ್ತೆ ಅಪಘಾತದಲ್ಲಾಗುವ ಜೀವ ಹಾನಿ ತಪ್ಪಿಸಲು ನಾಲ್ಕು ಪ್ರಮುಖ ವೃತ್ತಗಳಲ್ಲಿನ ಸಿಗ್ನಲ್‌ ವ್ಯವಸ್ಥೆಗೆ ಆಗಸ್ಟ್‌ 1ರಿಂದ ಮರುಜೀವ ನೀಡಲಾಗುತ್ತಿದೆ. ಜೊತೆಗೆ ಅಲ್ಲಲ್ಲಿ ಬಸ್‌ ಬೇ ಆರಂಭಿಸಲು ಸ್ಥಳೀಯ ಆಡಳಿತಕ್ಕೆ ಪೊಲೀಸ್ ಇಲಾಖೆ ಸೂಚಿಸಿದೆ.

ಹೆಚ್ಚುತ್ತಿವೆ ಅಪಘಾತ: ನಗರದ ಮೂಲಕ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿ ಹಾದು ಹೋಗಿದ್ದರೆ ನವನಗರದ ಪಕ್ಕದಲ್ಲಿ ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಇದೆ. ಜೊತೆಗೆ ವಿದ್ಯಾಗಿರಿ,ನವನಗರ ಹಾಗೂ ಹಳೇಬಾಗಲಕೋಟೆ ನಡುವೆ ಸಂಪ ರ್ಕಕ್ಕೆ ಸ್ಥಳೀಯರು ಇವೇ ರಸ್ತೆಗಳನ್ನು ಬಳಕೆ ಮಾಡುತ್ತಾರೆ. ಇದರಿಂದ ಅಪಘಾತ ಪ್ರಮಾಣ ಹೆಚ್ಚಳವಾಗಿದೆ.

ವಿದ್ಯಾಗಿರಿ ಪ್ರದೇಶದಲ್ಲಿ ಕಳೆದ ಮೂರು ತಿಂಗಳಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಅಪಘಾತಕ್ಕೆ ಕಾರಣವಾದ ಅಂಶಗಳ ಬಗ್ಗೆ ಸಂಚಾರ ಠಾಣೆ ಪೊಲೀಸರಿಂದ ವರದಿ ತರಿಸಿಕೊಂಡು ಸಮಸ್ಯೆ ನಿವಾರಣೆಗೆ ಮುಂದಾಗಿದ್ದಾರೆ.

ADVERTISEMENT

ಅಪಘಾತ ವಲಯ: ನಗರದ ಹೊರ ವಲಯದ ಗದ್ದನಕೇರಿ ಕ್ರಾಸ್‌ ಅಪಘಾತ ವಲಯ ಎಂದು ಪೊಲೀಸ್ ಇಲಾಖೆ ಗುರುತಿಸಿದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ ಸಂಗಮ ಸ್ಥಾನವಾದ ಅಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಬಸ್‌ ನಿಲ್ದಾಣ ಇಲ್ಲದಿರುವುದು. ಖಾಸಗಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸು ವುದು. ಅತಿಯಾದ ವೇಗ ಹಾಗೂ ಸಂಚಾರ ನಿಯಮಾವಳಿ ಪಾಲನೆ ಮಾಡ ದಿರುವುದು ಅಲ್ಲಿ ಅಪಘಾತ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಗೊತ್ತಾಗಿದೆ.

ಬಸ್‌ ಬೇ ನಿರ್ಮಾಣ:  ‘ಗದ್ದನಕೇರಿ ಕ್ರಾಸ್‌  ಸೇರಿದಂತೆ ನಗರದ ನಾಲ್ಕು ಕಡೆ ಬಸ್‌ ಬೇ ನಿರ್ಮಿಸಲಾಗುತ್ತಿದೆ. ವಿದ್ಯಾಗಿರಿಯ ಕಾಲೇಜು ಸರ್ಕಲ್‌, ರೈಲು ನಿಲ್ದಾಣದ ಎದುರು ಹಾಗೂ ಹಳೇ ಬಾಗಲ ಕೋಟೆಯ ಕೆರೂಡಿ ಆಸ್ಪತ್ರೆ ಬಳಿ ಬಸ್‌ ಬೇ ನಿರ್ಮಿಸಲಾಗುತ್ತಿದೆ. ಕಾಲೇಜು ಸರ್ಕಲ್‌ನಲ್ಲಿ ಈಗಾಗಲೇ ನಗರಸಭೆ ಕೆಲಸ ಆರಂಭಿಸಿದೆ.

ಗದ್ದನಕೇರಿ ಕ್ರಾಸ್‌ನಲ್ಲಿ ಬಸ್‌ ಬೇ ನಿರ್ಮಾಣಕ್ಕೆ ರಾಜ್ಯ ಹೆದ್ದಾರಿ ಮಂಡಳಿ ಒಪ್ಪಿಕೊಂಡಿದೆ. ಇದರಿಂದ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದಕ್ಕೆ ತಡೆ ಬೀಳಲಿದೆ. ಅಲ್ಲಲ್ಲಿ ಮೀಡಿಯನ್ (ರಸ್ತೆ ವಿಭಜಕ) ಹಾಕಿ ವಾಹನ ಸಂಚಾರದಲ್ಲಿ ಶಿಸ್ತು ತರಲಾಗುವುದು. ಆ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಿಸಲಾಗಿದೆ’ ಎಂದು ಎಸ್‌ಪಿ ಹೇಳುತ್ತಾರೆ.

ಸಿಗ್ನಲ್‌ ಕಾರ್ಯಾರಂಭ: ‘ಪೊಲೀಸ್ ಇಲಾಖೆಯಿಂದ ನವನಗರದ ಕಾಳಿದಾಸ ವೃತ್ತ, ಎಸ್‌ಪಿ ಕಚೇರಿ ಬಳಿಯ ವೃತ್ತ ಹಳೆಬಾಗಲಕೋಟೆಯ ಬಸವೇಶ್ವರ ವೃತ್ತ, ಸಾಸನೂರು ಪೆಟ್ರೋಲ್ ಬಂಕ್ ಬಳಿಯ ವೃತ್ತದಲ್ಲಿ ಸಿಗ್ನಲ್ ದೀಪ ಅಳವಡಿಸಲಾಗಿದೆ. ತಾಂತ್ರಿಕ ಕಾರಣದಿಂದ ಅವು ಕಾರ್ಯನಿರ್ವಹಿಸುತ್ತಿಲ್ಲ. ಈಗ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಆಗಸ್ಟ್‌ ನಿಂದ ಎಲ್ಲಾ ವೃತ್ತಗಳಲ್ಲೂ ಸಿಗ್ನಲ್ ದೀಪ ಬೆಳಗಲಿದೆ’ ಎಂದು ರಿಷ್ಯಂತ್ ಹೇಳಿದರು.

‘ರೈಲು ನಿಲ್ದಾಣದ ಹೊರಗಿನ ರಸ್ತೆಯಲ್ಲಿ ಆಟೊ ನಿಲ್ದಾಣ ಇದೆ. ಬಸ್‌ಗಳು ಹೊರಗೆ ನಿಲ್ಲುತ್ತವೆ. ಹಾಗಾಗಿ ಅಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಿದ್ಯಾಗಿರಿ ಹಾಗೂ ನವನಗರದ ಮುಖ್ಯ ರಸ್ತೆಯಲ್ಲಿ ಎರಡೂ ಕಡೆ ವಾಹನಗಳ ಪಾರ್ಕಿಂಗ್ ಮಾಡಲಾಗುತ್ತಿದೆ. ಇದು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದನ್ನು ಶೀಘ್ರ ಸರಿಪಡಿಸಲಾಗುವುದು’ ಎಂದು ರಿಷ್ಯಂತ್ ತಿಳಿಸಿದರು.

***

ರೈಲು ನಿಲ್ದಾಣದ ಆವರಣದಲ್ಲಿ ಆಟೊ ನಿಲುಗಡೆಗೆ ಅವಕಾಶ ನೀಡುವಂತೆ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ. ಅನುಮತಿ ದೊರೆತಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ
ಸಿ.ಬಿ.ರಿಷ್ಯಂತ್, ಜಿಲ್ಲಾ  ಪೊಲೀಸ್  ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.