ADVERTISEMENT

‘ಹಕ್ಕಿಗಾಗಿ ಮಹಿಳಾ ಹೋರಾಟ ಅಗತ್ಯ’

ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:42 IST
Last Updated 9 ಮಾರ್ಚ್ 2017, 11:42 IST
ಜಮಖಂಡಿ:  ಪುರುಷರು ಮತ್ತು ಮಹಿಳೆಯರು ಒಂದೇ ನಾಣ್ಯದ ಎರಡು ಮುಖಗಳು. ಆದಾಗ್ಯೂ, ಮಹಿಳೆಯರು ನ್ಯಾಯಕ್ಕಾಗಿ ಮತ್ತು ತಮ್ಮ ಹಕ್ಕುಗಳಿಗೆ ಹೋರಾಟ ರೂಪಿಸುವುದು ಅನಿವಾರ್ಯ ಎನಿಸಿದೆ ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶೆ ವೀಣಾ ನಾಯ್ಕರ ಹೇಳಿದರು.
 
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
 
ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಧನೆಯನ್ನು ಗುರುತಿಸಲು ಹಾಗೂ ತಮ್ಮ ಮನಸ್ಸಿಗೆ ಬಂದಿದ್ದನ್ನು ವಿವೇಚನೆಯಿಂದ ನಿರ್ಧಾರ ಕೈಗೊಳ್ಳುವ ಮನೋಭಾವ ಬೆಳೆಸಲು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸೂಕ್ತ ವೇದಿಕೆ ಒದಗಿಸುತ್ತದೆ ಎಂದರು.
 
ವಕೀಲೆ ವಿಜಯಲಕ್ಷ್ಮಿ ಭಟ್ಟ ಮಾತನಾಡಿ, ಬಾಲ್ಯ ವಿವಾಹ ತಡೆ ಕಾಯ್ದೆ–2006, ವರದಕ್ಷಿಣೆ ನಿಷೇಧ ಕಾಯ್ದೆ–1961, ಹೆಣ್ಣು ಭ್ರೂಣಹತ್ಯೆ ನಿಷೇಧ ಕಾಯ್ದೆ 1971, ಉದ್ಯೋಗಸ್ಥ ಮಹಿಳೆಯ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ–2013, ಮಹಿಳಾ ದೌರ್ಜನ್ಯ ತಡೆ ಕಾಯ್ದೆ–1902 ಸೇರಿದಂತೆ ಹಲವಾರು ಕಾಯ್ದೆಗಳನ್ನು ಮಹಿಳೆಯರ ರಕ್ಷಣೆಗೆ ಜಾರಿಗೊಳಿಸಲಾಗಿದೆ ಎಂದರು.
 
ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದು ಸರ್ಕಾರಿ ಉದ್ಯೋಗಕ್ಕೆ ಮಾತ್ರ ಸೀಮಿತವಾಗಿದೆ. ಆದರೆ, ಖಾಸಗಿ ವಲಯದಲ್ಲಿ ಇದು ಇನ್ನೂ ಮರೀಚಿಕೆ ಎನಿಸಿದೆ. ಆದ್ದರಿಂದ ಬದಲಾವಣೆಗಾಗಿ ದಿಟ್ಟತನ ಎಂಬುದು ಪ್ರಸಕ್ತ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಧ್ಯೇಯ ಎಂದರು.
 
ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಧೀಶ ಜಿ.ಎಂ.ಶೀನಪ್ಪ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶ ಜಿತೇಂದ್ರನಾಥ ಸಿ.ಎಸ್‌., ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಹ್ಮದ್‌ ಅನ್ವರ್‌ ಹುಸೇನ್‌ ಮೊಗಲಾನಿ, ಸರ್ಕಾರಿ  ವಕೀಲ ವಿ.ಜಿ. ಹೆಬಸೂರ, ಎಪಿಪಿ ಹುಸೇನಸಾಬ ಮುಲ್ಲಾ, ವಕೀಲರ ಸಂಘದ ಅಧ್ಯಕ್ಷ ಎಸ್‌.ವಿ.ಪಾಟೀಲ, ಉಪಾಧ್ಯಕ್ಷ ಆರ್‌.ಎಂ. ಡಾಂಗೆ, ವಕೀಲೆ ಶೋಭಾ ಜೋಶಿ, ಸಹಾಯಕ ಸಿಡಿಪಿಒ ಎಸ್.ಎಸ್‌. ತೇರದಾಳ ಹಾಜರಿದ್ದರು.
 
ವಕೀಲೆ ಪ್ರಿಯಾಂಕಾ ಪ್ರಾರ್ಥನೆ ಗೀತೆ ಹಾಡಿದರು. ವಕೀಲೆ ರಾಜಶ್ರೀ ಕುಲಕರ್ಣಿ ಸ್ವಾಗತಿಸಿದರು. ವಕೀಲೆ ಯಶೋಧಾ ದಾಸರ ನಿರೂಪಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್‌. ಜಕ್ಕನ್ನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.