ADVERTISEMENT

ಹವೇಲಿ: ಗುಂಡಿ–ತೆಗ್ಗುಗಳದ್ದೇ ಕಾರುಬಾರು!

ವೆಂಕಟೇಶ ಜಿ.ಎಚ್.
Published 22 ಮೇ 2017, 8:54 IST
Last Updated 22 ಮೇ 2017, 8:54 IST
ಬಾಗಲಕೋಟೆ ವಿದ್ಯಾಗಿರಿಯ ಕೆ.ಇ.ಬಿ ಕಚೇರಿಯಿಂದ ಹವೇಲಿಗೆ ತೆರಳುವ ರಸ್ತೆ ದುಃಸ್ಥಿತಿ
ಬಾಗಲಕೋಟೆ ವಿದ್ಯಾಗಿರಿಯ ಕೆ.ಇ.ಬಿ ಕಚೇರಿಯಿಂದ ಹವೇಲಿಗೆ ತೆರಳುವ ರಸ್ತೆ ದುಃಸ್ಥಿತಿ   

ಬಾಗಲಕೋಟೆ: ಇಲ್ಲಿನ ವಿದ್ಯಾಗಿರಿಯ ಕೆ.ಇ.ಬಿ ಕಚೇರಿಯಿಂದ ಹವೇಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ ಅಲ್ಲಿ ಓಡಾಟ ನಡೆಸಲು ನಿವಾಸಿಗಳು ಪಡಿಪಾಟಲು ಪಡುವಂತಾಗಿದೆ.

ರಸ್ತೆಯಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ ವಾಗಿದ್ದು, ಟಾರು ಕಿತ್ತು ಹೋಗಿ ಮಣ್ಣಿಗೂ ರಸ್ತೆಯ ಮೇಲ್ಮೈಗೂ ವ್ಯತ್ಯಾಸ ವಿಲ್ಲದಂತಾಗಿದೆ. ವಾಹನ ಸವಾರರು ಸರ್ಕಸ್ ಮಾಡಿಕೊಂಡು ಮೂರು ಕಿ.ಮೀ ದೂರದ ಈ ಮಾರ್ಗವನ್ನು ಕ್ರಮಿಸಬೇಕಾಗಿದೆ.

ಹವೇಲಿಯಲ್ಲಿ ತೋಟಗಾರಿಕೆ ಕಾಲೇಜು ಇರುವುದರಿಂದ ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ನಿತ್ಯ ನೂರಾರು ಮಂದಿ ಭೇಟಿ ನೀಡುತ್ತಾರೆ. ಜೊತೆಗೆ ಅಲ್ಲಿ 2000 ಜನಸಂಖ್ಯೆ ಇದೆ. ಎಲ್ಲರೂ ಕೂಲಿ ಕೆಲಸ ಹಾಗೂ ನೇಕಾರಿಕೆ ಮಾಡುತ್ತಿದ್ದಾರೆ.

ADVERTISEMENT

ಕಳಪೆ ಕಾಮಗಾರಿ: ‘ಮುಖ್ಯಮಂತ್ರಿ ವಿಶೇಷ ಅನುದಾನದಡಿ 2011–12ರಲ್ಲಿ ₹ 55 ಲಕ್ಷ ವೆಚ್ಚದಲ್ಲಿ ಕೆಇಬಿ ಕಚೇರಿ ಯಿಂದ ಹವೇಲಿಗೆ ಸಂಪರ್ಕ ರಸ್ತೆ ನಿರ್ಮಿ ಸಲಾಗಿತ್ತು. ಆದರೆ ಕಳಪೆ ಕಾಮಗಾರಿ ಯಿಂದ ನಿರ್ಮಾಣವಾದ ಆರು ತಿಂಗಳ ಲ್ಲಿಯೇ ರಸ್ತೆ ಹಾಳಾಗಿ ಹೋಯಿತು.

ಆಗಿನಿಂದ ಮತ್ತೆ ದುರಸ್ತಿ ಭಾಗ್ಯ ಕಂಡಿಲ್ಲ. ಈ ಭಾಗದ ನಗರಸಭೆ ಸದಸ್ಯರು ಹವೇಲಯಲ್ಲಿ ವಾಸವಾಗಿಲ್ಲ. ಅವರು ನವನಗರದಲ್ಲಿ ಮನೆಕಟ್ಟಿಕೊಂಡು ನೆಲೆಸಿ ದ್ದಾರೆ. ಅವರು ಇಲ್ಲಿ ಓಡಾಟ ನಡೆಸಿದ್ದರೆ ಸಂಕಷ್ಟ ಅರ್ಥವಾಗುತ್ತಿತ್ತು’ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಬೆಳಗದ ಬೀದಿ ದೀಪ: ‘ಹವೇಲಿಗೆ ತೆರಳುವ ರಸ್ತೆಯ ಆಸುಪಾಸಿನಲ್ಲಿ ₹ 60 ಲಕ್ಷ ವೆಚ್ಚದಲ್ಲಿ ಆಗ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು.  ಮಾಜಿ ಶಾಸಕರೊಬ್ಬರ ಪುತ್ರರೇ ಅದರ ಗುತ್ತಿಗೆ ಹಿಡಿದಿದ್ದರು.

ಆದರೆ ಇಲ್ಲಿಯವರೆಗೂ ಆ ದೀಪಗಳೂ ಬೆಳಗಿಲ್ಲ. ಕಳಪೆ ಕಾಮಗಾರಿ ವಿಚಾರ ನಗರಸಭೆ ಸಾಮಾನ್ಯ ಸಭೆಯ ಬಹುತೇಕ ಅವಧಿಯನ್ನು ತಿಂದು ಹಾಕಿದೆ. ಸಂಬಂಧಿಸಿದ ಭೂಸೇನಾ ನಿಗಮದ ಅಧಿಕಾರಿಯ ವಿರುದ್ಧ ಎಫ್‌ಐಆರ್‌ ದಾಖಲಿಸುವ ಮೌಖಿಕ ಆದೇಶಗಳೂ ಆಗಿವೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಆಗಿಲ್ಲ. ಬೀದಿ ದೀಪಗಳ ಇಂದಿಗೂ ಬೆಳಗಿಲ್ಲ’ ಎಂಬುದು ಸ್ಥಳೀಯರ ಅಳಲು.

ರಾತ್ರಿ ಓಡಾಟ ಸಮಸ್ಯೆ: ರಸ್ತೆ ಹಾಳುಬಿದ್ದಿರುವ ಪರಿಣಾಮ ರಾತ್ರಿ ವೇಳೆ ತಗ್ಗು–ಗುಂಡಿಗಳನ್ನು ದಾಟಿ ಓಡಾಟ ನಡೆಸುವುದು ದುಸ್ತರು. ಹಲವರು ಬಿದ್ದು ಕೈ–ಕಾಲು ಮುರಿದುಕೊಂಡಿದ್ದಾರೆ. ವೃದ್ಧರು, ಗರ್ಭಿಣಿಯರು ಓಡಾಟ ಸಾಧ್ಯವೇ ಇಲ್ಲ ಎಂದು ಹವೇಲಿ ನಿವಾಸಿ ಗಣೇಶ ಜಮ್ಮನಕಟ್ಟಿ ಹೇಳುತ್ತಾರೆ.

ಸರ್ಕಾರ ಸಾವಿರಾರು ಕಿ.ಮೀ ದೂರ ರಸ್ತೆ ನಿರ್ಮಾಣ ಮಾಡಿರುವುದಾಗಿ ಮಾಧ್ಯಮಗಳಲ್ಲಿ ಜಾಹೀರಾತು ನೀಡು ತ್ತಿದೆ. ಈಗ ನಗರಸಭೆಯ ಭಾಗವಾಗಿ ರುವ ಹವೇಲಿಯ ರಸ್ತೆಯೇ ಇಷ್ಟೊಂದು ಹದಗೆಟ್ಟಿದೆ, ಅನುದಾನ ಬಂದಿದೆ. ಶೀಘ್ರ ದುರಸ್ತಿ ಮಾಡುತ್ತೇವೆ ಎಂದು   2.5 ವರ್ಷದಿಂದ ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ ಇಲ್ಲಿಯವರೆಗೂ ಆ ಕೆಲಸ ಆಗಿಲ್ಲ. ಇನ್ನು ಮಳೆಗಾಲ ಬಂದರೆ ಹವೇಲಿ  ಸಂಪೂರ್ಣ ದ್ವೀಪವಾಗಿ ಬದಲಾಗುತ್ತದೆ ಎಂದು ಜುಮ್ಮನಕಟ್ಟಿ ಬೇಸರ ವ್ಯಕ್ತಪಡಿಸುತ್ತಾರೆ.
‘ರಸ್ತೆ ದುರಸ್ತಿ ಮಾಡುವಂತೆ  ಹಾಗೂ ಬೀದಿ ದೀಪ ಬೆಳಗುವಂತೆ ಮಾಡಲು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಇಲ್ಲಿಯವರೆಗೂ ಯಾವುದೇ ಕ್ರಮ ಆಗಿಲ್ಲ’ ಎಂದು ನಗರಸಭೆ ಮಾಜಿ ಸದಸ್ಯ ಮುತ್ತಪ್ಪ ಪೂಜಾರಿ ಹೇಳುತ್ತಾರೆ.

* * 

ನಗರೋತ್ಥಾನ 3ರ ಅಡಿ ಹವೇಲಿ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಹಾಜಿಸಾಬ್ ದಂಡಿನ
ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.