ADVERTISEMENT

ಹೋಳಿ ಹಬ್ಬದ ಮೆರುಗಿಗೆ ಜಿಲ್ಲೆಯಲ್ಲಿ ಕ್ಷಣಗಣನೆ

‘ನಮ್ಮೂರು ನಮ್ಮ ರಂಗು’ ಘೋಷ ವಾಕ್ಯದಡಿ ಬಣ್ಣದಾಟಕ್ಕೆ ನಗರ ಸಜ್ಜು; ದಾನಿಗಳಿಂದ ಊಟದ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 12:07 IST
Last Updated 11 ಮಾರ್ಚ್ 2017, 12:07 IST
ಬಾಗಲಕೋಟೆ:  ನಗರದಲ್ಲಿ ಹೋಳಿ ಸಂಭ್ರಮಕ್ಕೆ ಕ್ಷಣಗಣನೆ ಅರಂಭವಾಗಿದೆ. ‘ನಮ್ಮೂರು ನಮ್ಮ ರಂಗು’ ಎಂಬ ಘೋಷ ವಾಕ್ಯದಡಿ ಹಬ್ಬಕ್ಕೆ ಆಧುನಿಕತೆಯ ಸ್ಪರ್ಶ ನೀಡಲು ಇದೇ 14 ರಂದು ಬಸವೇಶ್ವರ ವೃತ್ತದಲ್ಲಿ ಹಲಗೆ ಮೇಳದೊಂದಿಗೆ ಡಿ.ಜೆ ಸಂಗೀತದ ವ್ಯವಸ್ಥೆ ಮಾಡಲು ಹೋಳಿ ಆಚರಣೆ ಸಮಿತಿ ಮುಂದಾಗಿದೆ. ಸಮಿತಿಯೊಂದಿಗೆ ‘ಬಾಗಲಕೋಟ ಹಬ್ಬ’ ತಂಡದ ಸದಸ್ಯರೂ ಕೈ ಜೋಡಿಸಲಿದ್ದಾರೆ.
 
ಹೋಳಿ ಹಬ್ಬದ ವೇಳೆ ಬಾಗಲಕೋಟಯ ಜನ ಪ್ರವಾಸಗಳ ನೆಪದಲ್ಲಿ ಊರು ಬಿಡುವ ಸಂಪ್ರದಾಯ ಬೆಳೆಸಿಕೊಳ್ಳುತ್ತಿದ್ದಾರೆ. ಅದನ್ನು ತಪ್ಪಿಸಲು ಬಸವೇಶ್ವರ ವೃತ್ತದಲ್ಲಿ ಡಿ.ಜೆ ಸಂಗೀತ ವ್ಯವಸ್ಥೆಯೊಂದಿಗೆ ಕೃತಕ ಮಳೆ ಕುಣಿತಕ್ಕೂ (ರೇನ್ ಡ್ಯಾನ್ಸ್) ಅವಕಾಶ ಕಲ್ಪಿಸಿ ಬಣ್ಣದಾಟದಲ್ಲಿ ಮಿಂದೆಳಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ.
 
ಐದು ದಿನಗಳ ಕಾಲ ಹಬ್ಬ: ನಗರದಲ್ಲಿ ಹುಬ್ಬಾ ನಕ್ಷತ್ರ ಕಾಣುವ ದಿನವಾದ ಮಾರ್ಚ್ 12 ರ ನಸುಕಿನ ಜಾವ ಕಿಲ್ಲಾ ಭಾಗದಲ್ಲಿ ಕಾಮದಹನದ ಮೂಲಕ ಹೋಳಿ ಹಬ್ಬಕ್ಕ ವಿದ್ಯುಕ್ತ ಚಾಲನೆ ದೊರೆಯಲಿದೆ. 
 
12 ರಿಂದ 16 ರವರೆಗೆ  ಹೋಳಿ ಹಬ್ಬ ನಡೆಯಲಿದೆ. ಅದೇ ದಿನ ನಗರದ ವಿವಿಧ ಗಲ್ಲಿಗಳಲ್ಲಿ ಸ್ಥಾಪನೆಯಾದ ಕಾಮನ ಮೂರ್ತಿಗಳನ್ನು ದಹನ ಮಾಡುವ ಕಾರ್ಯ ನಡೆಯಲಿದೆ. 13 ರಂದು ಇಲ್ಲಿಯ ಕಿಲ್ಲಾ ಭಾಗದ ನಿವಾಸಿಗಳು ಬಣ್ಣದಲ್ಲಿ ಮಿಂದೇಳಲಿದ್ದಾರೆ. 14 ರಂದು ವೆಂಕಟಪೇಟೆ, ಜೈನಪೇಟೆಯಲ್ಲಿ ಬಣ್ಣ ಇರಲಿದೆ. 
 
ಅಂದು  ಬಸವೇಶ್ವರ ವೃತ್ತದಲ್ಲಿ  ಜ್ಯೋತಿ ಪ್ರಕಾಶ ಸಾಳುಂಕೆ ಹಾಗೂ ಮೋನಪ್ಪಣ್ಣ ತಪಶೆಟ್ಟಿ ಹೆಸರಿನಲ್ಲಿ ವೇದಿಕೆ ನಿರ್ಮಿಸಿ ಹೋಳಿ ಸಂಭ್ರಮಕ್ಕೆ ಸಜ್ಜುಗೊಳಿಸಲಾಗುತ್ತದೆ. ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಸ್ಥಳೀಯರಾದ ದುಂಡಪ್ಪ ಏಳೆಮ್ಮಿ ಅಂದು ಊಟದ ವ್ಯವಸ್ಥೆ ಮಾಡಿದ್ದಾರೆ.
 
 
 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.