ADVERTISEMENT

100 ಕ್ಷೇತ್ರದಲ್ಲಿ ಆರ್‌.ಎಸ್‌.ಪಿ ಸ್ಫರ್ಧೆ

ಮಹಾರಾಷ್ಟ್ರದ ಪಶುಸಂಗೋಪನಾ ಸಚಿವ ಮಹಾದೇವ ಜಾನಕರ ಘೋಷಣೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 9:12 IST
Last Updated 19 ಮಾರ್ಚ್ 2018, 9:12 IST
ಬಾದಾಮಿಯಲ್ಲಿ ಮಹಾರಾಷ್ಟ್ರ ರಾಜ್ಯದ ಪಶುಸಂಗೋಪನಾ ಸಚಿವ ಮಹದೇವ ಜಾನಕರ ರಾಷ್ಟ್ರೀಯ ಸಮಾಜ ಪಕ್ಷದ ಸಮಾರಂಭಕ್ಕೆ ಶನಿವಾರ ಚಾಲನೆ ನೀಡಿದರು
ಬಾದಾಮಿಯಲ್ಲಿ ಮಹಾರಾಷ್ಟ್ರ ರಾಜ್ಯದ ಪಶುಸಂಗೋಪನಾ ಸಚಿವ ಮಹದೇವ ಜಾನಕರ ರಾಷ್ಟ್ರೀಯ ಸಮಾಜ ಪಕ್ಷದ ಸಮಾರಂಭಕ್ಕೆ ಶನಿವಾರ ಚಾಲನೆ ನೀಡಿದರು   

ಬಾದಾಮಿ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 100 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು’ ಎಂದು ಮಹಾರಾಷ್ಟ್ರದ ಪಶುಸಂಗೋಪನಾ ಸಚಿವ ಮಹಾದೇವ ಜಾನಕರ ಹೇಳಿದರು.

ಇಲ್ಲಿನ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಸಮಾಜ ಪಕ್ಷದ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೀನದಲಿತರು, ಮಹಿಳೆಯರು, ಯುವಕರು ಹಾಗೂ ರೈತರ ನೆರವಿ ಗಾಗಿ 2003ರಲ್ಲಿ ಆರ್‌ಎಸ್‌ಪಿ ಸ್ಥಾಪಿಸಲಾಗಿದೆ. ಉತ್ತರಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಪಕ್ಷ ಸಂಘಟಿಸಲಾಗಿದೆ. ಕಡಿಮೆ ಅವಧಿಯಲ್ಲಿಯೇ ಮಹಾರಾಷ್ಟ್ರದಲ್ಲಿ ಬಿಜೆಪಿ ಯೊಂದಿಗೆ ಮೈತ್ರಿ ಸಾಧಿಸಿ ಅಧಿಕಾರ ಪಡೆದಿದ್ದೇವೆ ಎಂದರು.

ADVERTISEMENT

‘ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಇನ್ನೂ ಗ್ರಾಮೀಣ ಭಾಗದಲ್ಲಿ ಬಡತನ ನಿರ್ಮೂಲನೆಯಾಗಿಲ್ಲ. ಜನರಿಗೆ ಉದ್ಯೋಗವಿಲ್ಲ. ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ’ ಎಂದು ಆರೋಪಿಸಿದರು.

‘ಬಾದಾಮಿ ಕ್ಷೇತ್ರದಿಂದ ಮೋಹನಕುಮಾರ್ ಸ್ಪರ್ಧಿಸಲಿದ್ದಾರೆ. ಜನತೆ ಅವರಿಗೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.
‘ಜನಸಾಮಾನ್ಯರ ದನಿಯಾಗಿ ರಾಷ್ಟ್ರೀಯ ಸಮಾಜ ಪಕ್ಷವನ್ನು ದೇಶಾದ್ಯಂತ ಸಂಘಟಿಸಲಾಗುತ್ತಿದೆ. ಕಾಂಗ್ರೆಸ್‌, ಬಿಜೆಪಿಗಿಂತ ಇದು ಭಿನ್ನ ಧ್ಯೇಯ–ಧೋರಣೆ ಹೊಂದಿದೆ ಎಂದರು.

‘9 ವರ್ಷಗಳ ಹಿಂದೆ ಬಾದಾಮಿಗೆ ಬಂದಿದ್ದೆ. ಆಗ ಹೇಗಿತ್ತೊ ಈಗಲೂ ಹಾಗೇ ಇದೆ. ಯಾವುದೇ ಬದಲಾವಣೆ ಕಂಡುಬಂದಿಲ್ಲ. ಅಭಿವೃದ್ಧಿಯೂ ಕಾಣುತ್ತಿಲ್ಲ. ಹಿಂದಿನ ಶಾಸಕರು ಏನು ಮಾಡಿದ್ದಾರೊ ಗೊತ್ತಿಲ್ಲ’ ಎಂದರು.

ಬಾದಾಮಿಯನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ನಿರುದ್ಯೋಗಿಗಳಿಗೆ ಉದ್ಯೋಗ, ಗ್ರಾಮೀಣರಿಗೆ ಮೂಲಸೌಕರ್ಯ ಕಲ್ಪಿಸಬೇಕು ಎನ್ನುವ ಮಹದಾಸೆ ಹೊಂದಿರುವೆ ಎಂದು ಪಕ್ಷದ ಅಭ್ಯರ್ಥಿ ಮೋಹನಕುಮಾರ್ ಹೇಳಿದರು.

ಆರ್‌ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಎಸ್‌.ಎಲ್‌. ಅಕ್ಕಿಸಾಗರ, ಪ್ರಸನ್ನಕುಮಾರ ಮತ್ತು ಪವಿತ್ರಾ ನಾಗನೂರ ಪಕ್ಷದ ಧೇಯೋದ್ದೇಶಗಳ ಕುರಿತು ಮಾತನಾಡಿದರು. ಪಕ್ಷದ ಮುಖಂಡರಾದ ಸಿ.ಎಲ್‌. ಮಾದೇಶ, ಪಿ.ಎನ್‌. ಜಾಧವ, ಮಹಾದೇಶ, ಗಣೇಶ ದೇವಾಸಿ, ಚಂದ್ರಶೇಖರ್‌, ಈಶ್ವರಪ್ರಸಾದ ಇದ್ದರು. ನಾರಾಯಣ ಪಾಟೀಲ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.