ADVERTISEMENT

‘ಸಂಪೂರ್ಣ ಮಾಹಿತಿ ಒದಗಿಸಲು ಸೂಚನೆ’

ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ: ಅಧಿಕಾರಿಗಳ ವಿರುದ್ಧ ಮುಗಿಬಿದ್ದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 8:14 IST
Last Updated 18 ಜನವರಿ 2018, 8:14 IST
ಬಾಗಲಕೋಟೆಯ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವನರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿಯ 6ನೇ ಸಾಮಾನ್ಯ ಸಭೆ ಜರುಗಿತು.
ಬಾಗಲಕೋಟೆಯ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವನರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿಯ 6ನೇ ಸಾಮಾನ್ಯ ಸಭೆ ಜರುಗಿತು.   

ಬಾಗಲಕೋಟೆ: ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವನರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿಯ 6ನೇ ಸಾಮಾನ್ಯ ಸಭೆ ಜರುಗಿತು. ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ ಆದ ಘಟನೆ ಕೂಡಾ ನಡೆಯಿತು.

ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಇಲಾಖೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಪ್ರತಿಯೊಂದು ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಸದಸ್ಯರಿಗೆ ನೀಡುವಂತೆ ಅಧ್ಯಕ್ಷೆ ವೀಣಾ ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖೆಗೆ ಸಂಬಂಧಿಸಿದಂತೆ ಸದಸ್ಯರು ಮಾಹಿತಿ ಕೇಳಿದರೆ ಅದನ್ನು ಅಧಿಕಾರಿಗಳು ನೀಡಬೇಕು. ಕೇಳಿದ ಪ್ರಶ್ನೆಗಳಿಗೆ ಸೂಕ್ತ ವಿವರಣೆ ನೀಡುವ ಮೂಲಕ ಸಂಬಂಧಿಸಿದ ತಾಲ್ಲೂಕು ಅಧಿಕಾರಿಗಳ ಮೇಲೆ ಸೂಕ್ತ ಪರಿಶೀಲನೆ ನಡೆಸಲು ಮುಂದಾಗಬೇಕು. ಇಲ್ಲದಿದ್ದರೆ ಇಲಾಖೆಯನ್ನೇ ಸಂಪೂರ್ಣ ತನಿಖೆಗೆ ಒಳಪಡಿಸಬೇಕಾಗುತ್ತದೆ ಎಂದು ವೀಣಾ ಎಚ್ಚರಿಸಿದರು.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ನಿರ್ಗತಿಕ ಮಕ್ಕಳ ಹಾಗೂ ವೃದ್ಧಾಶ್ರಮಗಳಲ್ಲಿ ಹಾಜರಾತಿ ಇಲ್ಲದೇ ಇದ್ದರೂ ಅನುದಾನ ಬಿಡುಗಡೆಗೊಳ್ಳುತ್ತಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿ ಕೇಂದ್ರಗಳ ಸುರಕ್ಷತೆ ಬಗ್ಗೆ ಹಾಗೂ ಶಿಥಲಗೊಂಡಿರುವ ಅಂಗನವಾಡಿ ದುರಸ್ತಿಗೆ, ಮಕ್ಕಳ ಹಾಗೂ ಗರ್ಭಿಣಿ, ಬಾಣಂತಿಯರ ರಕ್ಷಣೆ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಮನೆಗಳಲ್ಲಿ ಆಹಾರ ಧಾನ್ಯಗಳನ್ನಿಟ್ಟುಕೊಳ್ಳುತ್ತಾರೆ ಎಂಬ ಸದಸ್ಯರ ಆರೋಪಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜ ವರವಟ್ಟಿ ವಿವರಣೆ ನೀಡಿದರು. ‘ಜಿಲ್ಲೆಯಲ್ಲಿ ಕೆಲವೇ ಕೆಲವು ಸ್ವಂತ ಕಟ್ಟಡಗಳಿವೆ. ಉಳಿದವು ಬಾಡಿಗೆ ಹಾಗೂ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಹಾರ ಧಾನ್ಯ ರಕ್ಷಣೆಗಾಗಿ ಕಾರ್ಯಕರ್ತೆಯರಿಗೆ ಜವಾಬ್ದಾರಿ ವಹಿಸಿದ್ದರಿಂದ ಶೇಖರಿಸಿಕೊಂಡಿರುತ್ತಾರೆ ಎಂದು ತಿಳಿಸಿದರು.

ಜಮಖಂಡಿ ತಾಲ್ಲೂಕು ಕ್ರೀಡಾಂಗಣ ಆವರಣದಲ್ಲಿ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳಿಂದ ಪ್ರತಿ ತಿಂಗಳು ₹ 1 ಲಕ್ಷ ಗಳಿಗಿಂತ ಅಧಿಕ ಬಾಡಿಗೆ ಬರುತ್ತಿದೆ. ಇದನ್ನು ಅಧಿಕೃತವಾಗಿ ಪಡೆದುಕೊಂಡ ಬಾಡಿಗೆದಾರರು ಹೆಚ್ಚಿನ ಹಣಕ್ಕಾಗಿ ಬೇರೆಯವರಿಗೆ ಬಾಡಿಗೆಗೆ ನೀಡುತ್ತಿರುವ ಕುರಿತು ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.

ಇದಕ್ಕೆ ಉತ್ತರ ನೀಡುವಲ್ಲಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಲಾಸ ಗಾಡಿ ವಿಫಲರಾದರು. ಈ ವೇಳೆ ಮದ್ಯ ಪ್ರವೇಶಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್, ‘ಈಗಾಗಲೇ ಇವರ ವಿರುದ್ಧ ಕ್ರಮಕ್ಕಾಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಕುರಿತು ಜಮಖಂಡಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ ವಿವರಣೆ ನೀಡಲಾಗುವುದು’ ಎಂದರು.

ವಿವಿಧ ಇಲಾಖೆಯಿಂದ ಬರುವ ಯೋಜನೆಗಳ ಬಗ್ಗೆ ಅಧಿಕಾರಿಗಳು ಸದಸ್ಯರ ಗಮನಕ್ಕೆ ತರುತ್ತಿಲ್ಲ ಎಂದು ಹಲವು ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೀಣಾ, ‘ಸರ್ಕಾರಿ ಕಾರ್ಯಕ್ರಮ, ಯೋಜನೆ ಹಾಗೂ ಸಲಕರಣೆಗಳನ್ನೊಳಗೊಂಡ ಮಾಹಿತಿಯನ್ನು ಎಲ್ಲ ಸದಸ್ಯರ ಗಮನಕ್ಕೆ ತರಬೇಕು’ ಎಂದು ಸೂಚಿಸಿದರು.

ರೇಷ್ಮೇ ಇಲಾಖೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಜಿಲ್ಲೆಯಲ್ಲಿ ಒಟ್ಟು 634.13 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆ ಬೆಳೆಯಲಾಗುತ್ತಿದೆ ಎಂದು ಸಭೆಗೆ ತಿಳಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರಿಯರ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಅನುಸರಿಸಿದ ಮಾನದಂಡಗಳ ಬಗ್ಗೆ ಸದಸ್ಯರ ಪ್ರಶ್ನೆಗಳಿಗೆ ಉತ್ತಿರಿಸಿದ ಅಧಿಕಾರಿ ಬಸವರಾಜ ವಡವಟ್ಟಿ ಅವರು, ‘ಈಗಾಗಲೇ ಜಿಲ್ಲೆಯಲ್ಲಿ ಸರ್ಕಾರದ ಮಾನದಂಡಗಳ ಮೂಲಕ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ 82 ಅಂಗನವಾಡಿ ಕಾರ್ಯಕರ್ತೆ ಹಾಗೂ 226 ಸಹಾಯಕಿರಯರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಈ ಪೈಕಿ 45 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 119 ಸಹಾಯಕಿಯರ ಹುದ್ದೆಗಳಿಗೆ ಮಾತ್ರ ಆದೇಶ ನೀಡಲಾಗಿದೆ. ಉಳಿದ 31 ಕಾರ್ಯಕರ್ತೆಹಾಗೂ 62 ಸಹಾಯಕಿಯರ ಹುದ್ದೆಗಳಿಗೆ ತಕರಾರು ಬಂದಿದೆ. ಪರಿಶೀಲನೆ ನಂತರ ಆಯ್ಕೆ ಸಮಿತಿಯಲ್ಲಿ ಪ್ರಕ್ರಿಯೆ ಅಂತಿಮಗೊಳಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.