ADVERTISEMENT

ಫುಟ್‌ಫಾತ್ ಮೇಲೆ ಮಲಗಿದ ನೂರಾರು ಅಭ್ಯರ್ಥಿಗಳು!

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 8:58 IST
Last Updated 19 ಜನವರಿ 2018, 8:58 IST

ಬಾಗಲಕೋಟೆ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಸೇನಾ ನೇಮಕಾತಿ ರ್‍ಯಾಲಿಗೆ ಬಂದಿದ್ದ ನೂರಾರು ಅಭ್ಯರ್ಥಿಗಳು ರಾತ್ರಿಪೂರ್ತಿ ಫುಟ್‌ಫಾತ್, ರಸ್ತೆ ವಿಭಜಕ, ಗುರುವಾ ರದ ಸಂತೆ ಮಾರುಕಟ್ಟೆ, ಅಂಗಡಿ–ಮುಂಗಟ್ಟು ಸೇರಿದಂತೆ ಬಯಲಿನಲ್ಲಿ ಮಲಗಿದ ಘಟನೆ ನಗರದಲ್ಲಿ ನಡೆದಿದೆ.

ಜ.16 ರಿಂದ 21 ರವರೆಗೆ ನಡೆಯಲಿರುವ ಸೇನಾ ನೇಮಕಾತಿ ರ್‍ಯಾಲಿಗೆ ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಅಭ್ಯರ್ಥಿಗಳು ಬಂದಿದ್ದರು. ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ರ್‍ಯಾಲಿ ಹಮ್ಮಿಕೊಂಡಿರುವುದರಿಂದ ನಿತ್ಯ ಸಾವಿರಾರು ಅಭ್ಯರ್ಥಿಗಳು ನಗರಕ್ಕೆ ಬಂದಿದ್ದರು.

ಜಿಲ್ಲಾಡಳಿತ ಅಭ್ಯರ್ಥಿಗಳಿಗಾಗಿ ನಗರದ ಬಾಬು ಜಗಜೀವನರಾಂ ಭವನ, ನಗರಸಭೆ ಸಮುದಾಯ ಭವನ, ಶಾದಿಮಹಲ್, ಡಾ. ಬಿ.ಆರ್.ಅಂಬೇಡ್ಕರ್ ಭವನ ಸೇರದಂತೆ ಹಲವೆಡೆ ವ್ಯವಸ್ಥೆ ಕಲ್ಪಿಸಿದೆ. ಅಭ್ಯರ್ಥಿಗಳಿಗೆ ಸರಿಯಾದ ಮಾಹಿತಿ ಕೊರತೆಯಿಂದಾಗಿ ಬೀದಿಬದಿ ಮಲಗುತ್ತಿದ್ದಾರೆ. ಕೆಲವೆಡೆ ಸ್ಥಳ ಕೂಡಾ ಸಂಪೂರ್ಣ ಭರ್ತಿಯಾಗಿದೆ ಎಂದು ಹೇಳಲಾಗುತ್ತಿದೆ.

ADVERTISEMENT

ಅಭ್ಯರ್ಥಿಗಳ ಪರೀಕ್ಷೆ ನಡೆಯುತ್ತಿರುವ ಜಿಲ್ಲಾ ಕ್ರೀಡಾಂಗಣದ ಮುಖ್ಯ ದ್ವಾರಕ್ಕೆ ಸೇನಾ ಅಧಿಕಾರಿಗಳು ಬೀಗ ಹಾಕಿ ಬಂದ್ ಮಾಡಿದ್ದರು. ಪರೀಕ್ಷಾ ಅವಧಿಯಲ್ಲಿ ಮಾತ್ರ ಒಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ ಸೂಕ್ತ ಸ್ಥಳಾವಕಾಶ ಲಭ್ಯ ವಾಗದ ಕಾರಣ ಫುಟ್‌ಫಾತ್, ಅಂಗಡಿ ಗಳ ಮುಂದೆ, ಕ್ರೀಡಾಂಗಣದ ಹೊರ ಭಾಗದ ರಸ್ತೆ ಮೇಲೆ ಮಲಗಿರುವುದು ಕಂಡು ಬಂದಿತು.

ಎಸ್‌ಎಸ್ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಸೋಲ್ಜರ್ ಜನರಲ್, ಸೋಲ್ಜರ್ ಟೆಕ್ನೋಲಜಿ, ಸೋಲ್ಜರ್ ಕುಕ್ ಮತ್ತು ಎಸ್‌ಕೆಟಿ, ಸೋಲ್ಜರ್ ಟ್ರೇಡ್ಸ್‌ಮನ್ ಹುದ್ದೆಗಳಿಗೆ ನೇಮಕಾತಿಗಾಗಿ ಬಂದಿದ್ದಾರೆ. ಮೊದಲ ದಿನ ಬಾಗಲಕೋಟೆ ಜಿಲ್ಲೆಯ 4,000 ಅಭ್ಯರ್ಥಿಗಳು, ಎರಡನೇ ದಿನ ಗದಗ ಹಾಗೂ ಬಾಗಲಕೋಟೆ ಸೇರಿ 3300 ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.