ADVERTISEMENT

ಬಂದ್‌ಗೆ ತಾಲ್ಲೂಕು ಹೋರಾಟ ಸಮಿತಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:02 IST
Last Updated 9 ಫೆಬ್ರುವರಿ 2018, 9:02 IST

ರಬಕವಿ ಬನಹಟ್ಟಿ: ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದವರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಲವು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದೆ. ನೇಕಾರರು ಬುಧವಾರ ನೀಡಿದ ಬಂದ್‌ಗೆ ತೇರದಾಳ ತಾಲ್ಲೂಕು ಹೋರಾಟ ಸಮಿತಿಯವರು ಬೆಂಬಲ ನೀಡಿದರು. ನಂತರ ಜಮಖಂಡಿ –ಕಾಗವಾಡ ರಸ್ತೆಯನ್ನು ಕೆಲಕಾಲ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ, ನಂದು ಗಾಯಕವಾಡ ಹಾಗೂ ಪಿ.ಎಸ್. ಮಾಸ್ತಿ ಮಾತನಾಡಿ, ‘ತೇರದಾಳ ಮತಕ್ಷೇತ್ರ ಅತೀ ಹೆಚ್ಚು ನೇಕಾರರನ್ನು ಹೊಂದಿರುವ ಕ್ಷೇತ್ರವಾಗಿದೆ.

ಆದರೆ ತಮ್ಮ ಬೇಡಿಕೆಗಾಗಿ ನೇಕಾರರು ಹೋರಾಟ ನಡೆಸುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಆಗಿದೆ. ಹೋರಾಟ ಕೈಗೊಂಡು 22 ದಿನಗಳು ಗತಿಸಿದರೂ ಮುಖ್ಯಮಂತ್ರಿ, ಜವಳಿ ಸಚಿವರಾಗಲಿ ಇತ್ತ ಕಡೆಗೆ ಗಮನ ಹರಿಸದಿರುವುದು ಖಂಡನೀಯ.

ADVERTISEMENT

ಸರ್ಕಾರ ಕೂಡಲೇ ನೇಕಾರರ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು. ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಭುಜಬಲಿ ಕೆಂಗಾಲಿ, ನೇಕಾರರ ಸಂಘದ ಅಧ್ಯಕ್ಷ ಶಿವಲಿಂಗ ಟರಕಿ, ಭೂಪಾಲ ವಾಜಂತ್ರಿ ಸೇರಿದಂತೆ ಇನ್ನಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.