ADVERTISEMENT

ಮುಧೋಳ: ಸಾಂಸ್ಕೃತಿಕ ಭವನಕ್ಕೆ ನಿವೇಶನ, ಆರ್ಥಿಕ ನೆರವು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 9:21 IST
Last Updated 21 ಫೆಬ್ರುವರಿ 2018, 9:21 IST

ಮುಧೋಳ: ‘ನೂಲಿ ಚಂದಯ್ಯನವರ ಸಾಂಸ್ಕೃತಿಕ ಭವನಕ್ಕೆ ಅಗತ್ಯ ನಿವೇಶನವನ್ನು ಶೀಘ್ರ ಮಂಜೂರು ಮಾಡುವುದರೊಂದಿಗೆ ಆರ್ಥಿಕ ನೆರವು ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ. ನಗರದ ದಾನಮ್ಮದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲ್ಲೂಕು ಕೊರಮ ಸಮಾಜದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಭಜಂತ್ರಿ ಸಮಾಜದ ಮೊದಲು ಶೈಕ್ಷಣಿಕವಾಗಿ ಮುಂದೆ ಬಂದು, ಸಂಘಟಿತ ಹೋರಾಟ ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕು. ಮಕ್ಕಳ ಶೈಕ್ಷಣಿಕ ಕಾರ್ಯಕ್ಕೆ ಒತ್ತು ನೀಡುವ ಕೆಲಸ ನಡೆಯಬೇಕು. ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಅಭಿವೃದ್ಧಿ ಮಾಡುತ್ತಿದೆ ಅದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ಶಾಸಕ ಗೋವಿಂದ ಕಾರಜೋಳ ಮಾತನಾಡಿ ‘ಪರಿಶಿಷ್ಟ ಜಾತಿಯಲ್ಲಿ ಭಜಂತ್ರಿ ಸಮಾಜ ಅತ್ಯಂತ ಶೋಷಿತ ಸಮುದಾಯ. ಎಲ್ಲ ಸಮಸ್ಯೆಗಳಿಗೆ ಶಿಕ್ಷಣ ಒಂದೇ ಪರಿಹಾರ. ಉನ್ನತ ಶಿಕ್ಷಣವನ್ನು ಪಡೆಯಬೇಕು. ಸರ್ಕಾರದ ಸೌಲಭ್ಯಗಳನ್ನು ಸಮರ್ಥವಾಗಿ ಬಳಿಸಿಕೊಂಡು ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಬೇಕು. ಸಾಂಸ್ಕೃತಿಕ ಭವನಕ್ಕೆ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ₹10 ಲಕ್ಷ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಅವರ ಅನುದಾನದಿಂದ ₹10 ಲಕ್ಷ ಅನುದಾನ ನೀಡಲಾಗುತ್ತದೆ’ ಎಂದು ಭರವಸೆ ನೀಡಿದರು.

ADVERTISEMENT

ಲೋಕಾಪುರದ ಚಂದ್ರಶೇಖರ ಶ್ರೀಗಳು ಹಾಗೂ ನೂಲಿ ಚಂದಯ್ಯ ಪೀಠಾಧಿಪತಿ ವೃಷ್ಭೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದರು. ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ್, ಸುರೇಶ ನಾಗರೇಶಿ, ನಿವೃತ್ ಪಿಎಸ್‌ಐ ಎಚ್.ಸಿ.ಭಜಂತ್ರಿ, ಎಚ್.ಎಸ್.ಭಜಂತ್ರಿ, ಎಂ.ವೆಂಕಟೇಶ, ಬಾಬುರಾಜೇಂದ್ರ ಭಜಂತ್ರಿ, ಅಶೋಕ ಭಜಂತ್ರಿ, ಶಿವಾನಂದ ಭಜಂತ್ರಿ, ತಾಲ್ಲೂಕು ಕೊರಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಂಕರ ಭಜಂತ್ರಿ, ಬ್ರಹ್ಮಾನಂದ ಭಜಂತ್ರಿ, ರಾಘವೇಂದ್ರ ಭಜಂತ್ರಿ, ಹಣಮಂತ ಭಜಂತ್ರಿ, ಪುಂಡಲಿಕ ಭಜಂತ್ರಿ, ಗೋವಿಂದ ಭಜಂತ್ರಿ, ಭೀಮಸಿ ಕಪ್ಪಲಗುದ್ದಿ, ಯಮನಪ್ಪ ಭಜಂತ್ರಿ, ಎಂ.ಎಂ.ಮುರನಾಳ, ಎಚ್.ಸಿ.ಭಜಂತ್ರಿ ಇದ್ದರು.
ಧಾರವಾಡದ ಡಾ.ಬಿ.ಎಸ್.ಭಜಂತ್ರಿ ಹಾಗೂ ಡಾ.ವೈ.ಎಂ.ಭಜಂತ್ರಿ ಉಪನ್ಯಾಸ ನೀಡಿದರು.

ಶಿಕ್ಷಕ ವಿಠ್ಠಲ ಭಜಂತ್ರಿ ನಿರೂಪಿಸಿದರು. ರಮೇಶ ಭಜಂತ್ರಿ ವಂದಿಸಿದರು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕುಂಭಮೇಳ ಹಾಗೂ ಕಲಾ ವಾಧ್ಯಮೇಳದೊಂದಿಗೆ ದಾನಮ್ಮದೇವಿ ದೇವಸ್ಥಾನದವರೆಗೆ ಕಾಯಕಯೋಗಿ ನೂಲಿಚಂದಯ್ಯನವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.