ADVERTISEMENT

ಅಂಚೆ ಕಚೇರಿಯಲ್ಲೂ ’ಆಧಾರ್’ ನೋಂದಣಿ

ಕೇಂದ್ರ ಕಚೇರಿ ಸೇರಿದಂತೆ ಜಿಲ್ಲೆಯ 23 ಕಡೆ ಅವಕಾಶ: ಸಾರ್ವಜನಿಕರ ಹರ್ಷ

ವೆಂಕಟೇಶ್ ಜಿ.ಎಚ್
Published 4 ಜುಲೈ 2018, 15:05 IST
Last Updated 4 ಜುಲೈ 2018, 15:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬಾಗಲಕೋಟೆ: ಆಧಾರ್ ಕಾರ್ಡ್ ಮಾಡಿಸಲು ಬ್ಯಾಂಕ್‌ಗಳು, ತಾಲ್ಲೂಕು ಕಚೇರಿಗೆ ಪದೇ ಪದೇ ಅಲೆದು ಅಲ್ಲಿನ ಪಾಳಿ ಕಂಡು ನೀವು ಬೇಸರಗೊಂಡಿದ್ದೀರಾ, ಚಿಂತಿಸುವ ಅಗತ್ಯವಿಲ್ಲ. ಇನ್ನು ಮುಂದೆ ಅಂಚೆ ಕಚೇರಿಯಲ್ಲೂ ಆಧಾರ್ ನೋಂದಣಿ ಮಾಡಿಸಬಹುದು.

ಈಗಿರುವ ಆಧಾರ್ ನೋಂದಣಿ ಕೇಂದ್ರಗಳಲ್ಲಿನ ಜನಸಂದಣಿ ತಪ್ಪಿಸಲು ಕೇಂದ್ರ ಸರ್ಕಾರ, ಜೂನ್‌ 1ರಿಂದ ದೇಶಾದ್ಯಂತ ಪ್ರಮುಖ ಅಂಚೆ ಕಚೇರಿಗಳಲ್ಲೂ ನೋಂದಣಿಗೆ ಅವಕಾಶ ಮಾಡಿಕೊಟ್ಟಿದೆ. ಆ ನಿಟ್ಟಿನಲ್ಲಿ ಬಾಗಲಕೋಟೆಯ ಕೇಂದ್ರ ಅಂಚೆ ಕಚೇರಿ ಸೇರಿದಂತೆ ಜಿಲ್ಲೆಯ 23 ಕಡೆ ಆಧಾರ್ ನೋಂದಣಿ ಮತ್ತು ನವೀಕರಣ ಸೇವಾ ಕೇಂದ್ರಗಳು ಕಾರ್ಯಾರಂಭ ಮಾಡಿವೆ.

ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಅಂಚೆ ಕಚೇರಿಯ ಆಧಾರ್ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಹೊಸ ನೋಂದಣಿ ಉಚಿತವಾಗಿ ಮಾಡಿದರೆ, ತಿದ್ದುಪಡಿಗೆ ₨30 ಶುಲ್ಕ ತೆರಬೇಕಿದೆ. ಅಂಚೆ ಸಿಬ್ಬಂದಿಗೆ ತರಬೇತಿ ನೀಡಿ ಅವರಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ‘ಪ್ರಜಾವಾಣಿ’ ಬುಧವಾರ ಬಾಗಲಕೋಟೆಯ ಕೇಂದ್ರ ಅಂಚೆ ಕಚೇರಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಅಲ್ಲಿ ಆಧಾರ್ ನೋಂದಣಿಗೆ ಪಾಳಿಯಲ್ಲಿ ನಿಂತದ್ದು ಕಂಡುಬಂದಿತು.15 ನಿಮಿಷಕ್ಕೆ ಒಬ್ಬರಂತೆ ದಿನಕ್ಕೆ 30ರಿಂದ 40 ಮಂದಿಗೆ ಆಧಾರ್ ನೋಂದಣಿ ಮಾಡಿಕೊಡಲಾಗುವುದು ಎಂದು ಸಿಬ್ಬಂದಿ ತಿಳಿಸಿದರು.

ADVERTISEMENT

‘ಆಧಾರ್ ಕಾರ್ಡ್‌ನಲ್ಲಿ ಭೀಮಣ್ಣ ಹೊಸಗೌಡ ಆಗಬೇಕಿದ್ದ ಹೆಸರು ಭೀಮಪ್ಪ ಎಂದಾಗಿದೆ. ಅದನ್ನು ತಿದ್ದುಪಡಿ ಮಾಡಿಸಲು ತಹಶೀಲ್ದಾರ್ ಕಚೇರಿಯ ಕೇಂದ್ರಕ್ಕೆ ಅಲೆದಾಡಿ ಸಾಕಾಗಿತ್ತು. ಅಲ್ಲಿ ಕೊಟ್ಟ ಚೀಟಿಯಲ್ಲಿ ಪಾಳಿ ವಾರದ ನಂತರ ಬರುತ್ತಿತ್ತು. ಸ್ನೇಹಿತರು ಹೇಳಿದ ಕಾರಣ ಅಂಚೆ ಕಚೇರಿಗೆ ಬಂದೆ. ಇಲ್ಲಿ 15 ನಿಮಿಷದಲ್ಲಿ ಕೆಲಸ ಆಗಿದೆ’ ಎಂದು ತಾಲ್ಲೂಕಿನ ಜಮ್ಮನಕಟ್ಟಿಯ ಭೀಮಣ್ಣ ಸಂತಸ ಹಂಚಿಕೊಂಡರು.

ಸಾರ್ವಜನಿಕರು ಅಂಚೆ ಇಲಾಖೆಯ ಆಧಾರ್ ಸೇವೆ ಮಾಹಿತಿಗೆ ಟೋಲ್‌ಫ್ರೀ ಸಂಖ್ಯೆ: 1947 ಸಂಪರ್ಕಿಸಬಹುದು.

ಆಧಾರ್ ನೋಂದಣಿಗೆ ಎರಡು ತಿಂಗಳಿನಿಂದ ಅಲೆದಾಡಿ ಸಾಕಾಗಿತ್ತು. ಇಲ್ಲಿ ಒಂದೇ ದಿನದಲ್ಲಿ ಕೆಲಸ ಆಗಿದೆ. ಸರ್ಕಾರ ಅಂಚೆ ಕಚೇರಿಯಲ್ಲೂ ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ.
ಪ್ರಶಾಂತ ಮುತ್ತಕ್ಕನವರ, ಡಿಪ್ಲೊಮಾ ವಿದ್ಯಾರ್ಥಿ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.