ADVERTISEMENT

ಅನಧಿಕೃತ ಅಂಕಪಟ್ಟಿ: ವೆಬ್‌ಸೈಟ್‌ ಕಣ್ಗಾವಲು!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 9:17 IST
Last Updated 21 ಏಪ್ರಿಲ್ 2017, 9:17 IST

ಬಳ್ಳಾರಿ: ಅನಧಿಕೃತ ಅಂಕಪಟ್ಟಿಗಳನ್ನು ಸಲ್ಲಿಸಿದವರ ಅರ್ಜಿಗಳನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಆರಂಭದಲ್ಲೇ ನಿರಾಕರಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ತಿಳಿಸಿದರು.ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ವಿದ್ಯಾ ವಿಷಯಕ ಪರಿಷತ್‌ ಸಭೆಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ವಿಶ್ವವಿದ್ಯಾಲಯದಲ್ಲಿ ಅನರ್ಹರಿಗೆ ಪ್ರವೇಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಅನಧಿಕೃತ ಅಂಕಪಟ್ಟಿಗಳನ್ನು ನೀಡಿ ಪದವಿ ತರಗತಿಗಳಿಗೆ ಪ್ರವೇಶ ಪಡೆಯುವವರನ್ನು ತಡೆಯುವ ಸಲುವಾಗಿ ಮುಂದಿನ ಶೈಕ್ಷಣಿಕ ಸಾಲಿನಿಂದ ಆನ್‌ಲೈನ್‌ ಮೂಲಕವೇ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂದರು.ಅದಕ್ಕೂ ಮುನ್ನ ಮಾತನಾಡಿದ ಶಾಸಕ ಕೆ.ಸಿ.ಕೊಂಡಯ್ಯ, ಅನದಿಕೃತ ಅಂಕಪಟ್ಟಿ ನೀಡಿ ಉತ್ತೀರ್ಣರಾದವರು ಸಮಾಜಕ್ಕೆ ಕಂಟಕವಾಗಿ ಪರಿಣಮಿಸುತ್ತಾರೆ. ಹೀಗಾಗಿ ಇನ್ನು ಮುಂದೆ ಅಂಥವರಿಗೆ ಪ್ರವೇಶ ದೊರಕದೇ ಇರುವಂತೆ ನಿರ್ವಹಣೆ ಮಾಡಲು ಸಮಿತಿಯೊಂದನ್ನು ರಚಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಅವರ ಮಾತನ್ನು ಒಪ್ಪಿದ ಕುಲಪತಿ, ಕುಲಸಚಿವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು. ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ ಕಾಲೇಜುಗಳಲ್ಲಿ ವಹಿಸಬೇಕಾದ ಎಚ್ಚರಿಕೆ, ಅಂಕಪಟ್ಟಿಗಳ ಕ್ಷಿಪ್ರ ಪರಿಶೀಲನೆ ಸೇರಿದಂತೆ ಮಹತ್ವದ ಜವಾಬ್ದಾರಿಗಳ ನಿರ್ವಹಣೆ ಕುರಿತು ಸಮಿತಿಯು ಜಾಗೃತಿ ಮೂಡಿಸಲಿದೆ ಎಂದರು.ಅನಧಿಕೃತ ಅಂಕಪಟ್ಟಿ ಸಲ್ಲಿಸಿ ಪ್ರವೇಶ ಪಡೆಯುವವ ಸಂಖ್ಯೆ ಹೆಚ್ಚಿದೆ. ಇದು, ವಿಶ್ವವಿದ್ಯಾಲಯಕ್ಕೆ ಉತ್ತಮ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ ಎಂಬ ಅಂಶವನ್ನು ಪುಷ್ಠೀಕರಿಸುತ್ತದೆ ಎಂದರು.

ADVERTISEMENT

ಸಿಬಿಸಿಎಸ್‌ ಪಠ್ಯಕ್ರಮ: ವಿಶ್ವವಿದ್ಯಾಲಯದ ಎಲ್ಲ ಪದವಿ ಕೋರ್ಸ್‌ಗಳ ಪಠ್ಯಕ್ರಮ ಇನ್ನು ಮುಂದೆ ಆಯ್ಕೆ ಆಧಾರಿತ ಅಂಕ ಪದ್ಧತಿಯ (ಸಿಬಿಸಿಎಸ್‌–ಚಾಯ್ಸ್‌ ಬೇಸ್ಡ್‌ ಕ್ರೆಡಿಟ್‌ ಸಿಸ್ಟಂ) ಅನುಸಾರವಾಗಿಯೇ ಇರಲಿದೆ. ಇಂಥ ವ್ಯವಸ್ಥೆಯನ್ನು ರೂಪಿಸಿದ ಮೊದಲ ವಿಶ್ವವಿದ್ಯಾಲಯವಾಗಿಯೂ ಗಮನ ಸೆಳೆಯಲಿದೆ ಎಂದು ವಿವರಿಸಿದರು.

ಘನತೆ ಹಾಳು: ಸಭೆಯ ಅಂತ್ಯದಲ್ಲಿ ಮಾತನಾಡಿದ ಕೆ.ಸಿ.ಕೊಂಡಯ್ಯ, ‘ಹಿಂದಿನ ಕುಲಪತಿಯಿಂದ ವಿಶ್ವವಿದ್ಯಾಲಯದ ಘನತೆ ಹಾಳಾಗಿತ್ತು’ ಎಂದು ದೂರಿದರು. ಪ್ರೊ.ಎಂ.ಎಸ್‌.ಸುಭಾಷ್‌ ಅವರನ್ನು ಹೊಗಳಿದ ಅವರು, ಹಿಂದಿನ ಕುಲಪತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ಕುಲಪತಿಯಾಗಿದ್ದ ಪ್ರೊ.ಮಂಜಪ್ಪ ಡಿ.ಹೊಸಮನೆ ಅವರ ಹೆಸರನ್ನು ಹೇಳಲಿಲ್ಲ.

‘ಹಿಂದಿನ ಕುಲಪತಿ ವಿಶ್ವವಿದ್ಯಾಲಯದ ಘನತೆಯನ್ನು ಹಾಳು ಮಾಡಿ ಹೋದರು. ನಿಮ್ಮ ಅವಧಿಯಲ್ಲಿ ವಿಶ್ವವಿದ್ಯಾಲಯದ ಆಡಳಿತ ಉತ್ತಮವಾಗಿ ನಡೆಯುತ್ತಿದೆ’ ಎಂದರು.ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್‌.ಎ.ಪಾಟೀಲ, ಕಲಾ ನಿಕಾಯದ ಡೀನ್‌ ಪ್ರೊ.ರಾಬರ್ಟ್‌ ಜೋಸೆಫ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.