ADVERTISEMENT

ಅಲೆಮಾರಿಗಳ ಅಭಿವೃದ್ಧಿ ನಿಗಮಕ್ಕೆ ಆಗ್ರಹ

ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಗೊಂದಲ ಸೃಷ್ಟಿ: ಆರೋಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 7:20 IST
Last Updated 4 ಮಾರ್ಚ್ 2017, 7:20 IST

ಹೂವಿನಹಡಗಲಿ: ‘ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಬೇಕು’ ಎಂದು ಅಲೆಮಾರಿ ಬುಡಕಟ್ಟು ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾ ಟ್ರಸ್ಟ್‌ನ ಅಧ್ಯಕ್ಷ ವೈ. ಶಿವಕುಮಾರ್ ಆಗ್ರಹಿಸಿದರು.

ಶುಕ್ರವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಊರೂರು ತಿರುಗುತ್ತಿರುವ ಅಲೆಮಾರಿಗಳು ಸರ್ಕಾರದ ಎಲ್ಲ ಸೌಲಭ್ಯದಿಂದ ವಂಚಿತರಾಗಿ ತೀರಾ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಡಿಯಲ್ಲಿ ಸೂಕ್ಷ್ಮ, ಅತೀ ಸೂಕ್ಷ್ಮ ಅಭಿವೃದ್ಧಿ ಕೋಶ ರಚಿಸಿದ್ದರೂ ಅಲೆಮಾರಿಗಳಿಗೆ ಯಾವುದೇ ಅನುಕೂಲ ಆಗಿಲ್ಲ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಅಲೆಮಾರಿಗಳಿಗಾಗಿ ₹ 150 ಕೋಟಿ ಮೀಸಲಿಟ್ಟಿದ್ದರೂ ಈವರೆಗೂ ಬಿಡುಗಡೆಯಾಗಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಅನುಷ್ಠಾನ ಸಮಿತಿ ನಾಮಕಾವಸ್ತೆಯಾಗಿದೆ. ಸಮಿತಿ ಅಸ್ತಿತ್ವಕ್ಕೆ ಬಂದು ನಾಲ್ಕು ತಿಂಗಳಾದರೂ ಒಂದೂ ಸಭೆ ಕರೆದಿಲ್ಲ. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರನ್ನು ಭೇಟಿಯಾಗಿ ಅಲೆಮಾರಿಗಳಿಗೆ ಮೀಸಲಿಟ್ಟ ಹಣ ಬಿಡುಗಡೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.

ರಾಜ್ಯದಲ್ಲಿರುವ 22 ಲಕ್ಷ ಅಲೆಮಾರಿಗಳ ಬದುಕನ್ನು ಉತ್ತಮಪಡಿಸಲು ಪ್ರತ್ಯೇಕ ನಿಗಮ ತೆರೆಯಬೇಕು. ಅಲೆಮಾರಿ ಕಲಾವಿದರಿಗೆ ಮಾಸಾಶನ, ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಬೇಕು. ಅಲೆಮಾರಿಗಳ ಮಕ್ಕಳಿಗೆ ಮೊರಾರ್ಜಿ, ಏಕಲವ್ಯ ಮುಂತಾದ ವಸತಿ ಶಾಲೆಗಳಲ್ಲಿ ಆದ್ಯತೆ ನೀಡಬೇಕು.

ಶಿಕ್ಷಣ ವಂಚಿತ ಅಲೆಮಾರಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ನೀಡಬೇಕು. ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರ ಅಲೆಮಾರಿಗಳ ಕಲ್ಯಾಣ ಯೋಜನೆಗಳನ್ನು ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು.

ಎಸ್ಸಿ ಪ್ರಮಾಣ ಪತ್ರ ನೀಡಲು ಆಗ್ರಹ: ಹೂವಿನಹಡಗಲಿ ತಾಲ್ಲೂಕಿನ ದೇವಗೊಂಡನಹಳ್ಳಿಯಲ್ಲಿ ವಾಸಿಸುವ ಹಂಡಿಜೋಗಿ ಜನಾಂಗಕ್ಕೆ ಈ ಹಿಂದಿನಂತೆ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ವೈ.ಶಿವಕುಮಾರ್ ಆಗ್ರಹಿಸಿದರು.

2008ರಿಂದ ಈಚೆಗೆ ಹಂಡಿಜೋಗಿಗಳಿಗೆ ಎಸ್ಸಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಿರುವ ಕ್ರಮ ಸರಿಯಲ್ಲ. ಅಧಿಕಾರಿಗಳಿಗೆ ಅವರ ಜಾತಿ ಮೂಲದ ಬಗ್ಗೆ ಗೊಂದಲ ಇದ್ದಲ್ಲಿ ಆಯೋಗವನ್ನೇ ಕರೆಯಿಸಿ, ಸತ್ಯಾಸತ್ಯತೆ ಅರಿಯಬೇಕು. ಕೂಡಲೇ ಹಂಡಿಜೋಗಿಗಳಿಗೆ ಎಸ್ಸಿ ಪ್ರಮಾಣ ಪತ್ರ ನೀಡದಿದ್ದರೆ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು. ನಂದಿಹಳ್ಳಿ ಮಹೇಂದ್ರ, ಶಿವಕುಮಾರ್,  ಚಂದ್ರ, ಮಂಜುನಾಥ ಮುಖ್ಯೆ, ಹನುಮಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.