ADVERTISEMENT

ಆಮೆಗತಿ ಕೆಲಸದಿಂದ ವ್ಯಾಪಾರಕ್ಕೆ ಪೆಟ್ಟು..

ಹೊಸಪೇಟೆಯ ಮಹಾತ್ಮಾಗಾಂಧಿ ವೃತ್ತದಲ್ಲಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ: ಸಂಚಾರಕ್ಕೂ ಸಂಚಕಾರ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ಫೆಬ್ರುವರಿ 2017, 7:03 IST
Last Updated 20 ಫೆಬ್ರುವರಿ 2017, 7:03 IST
ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದಲ್ಲಿ ರಸ್ತೆ ನಿರ್ಮಾಣಕ್ಕೆ ಕಾಂಕ್ರೀಟ್‌, ಜಲ್ಲಿ ಗುಡ್ಡೆ ಹಾಕಿರುವುದು
ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದಲ್ಲಿ ರಸ್ತೆ ನಿರ್ಮಾಣಕ್ಕೆ ಕಾಂಕ್ರೀಟ್‌, ಜಲ್ಲಿ ಗುಡ್ಡೆ ಹಾಕಿರುವುದು   

ಹೊಸಪೇಟೆ: ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮ ಗಾರಿ ಆಮೆಗತಿಯಲ್ಲಿ ನಡೆಯುತ್ತಿರುವು ದರಿಂದ ಈ ಭಾಗದ ಜನ ಹೈರಾಣ ಆಗಿದ್ದಾರೆ.

ನಾಲ್ಕು ತಿಂಗಳ ಹಿಂದೆಯೇ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಕುಂಟುತ್ತಾ ಸಾಗಿದೆ. ಗಾಂಧಿ ವೃತ್ತದಿಂದ ಮೇನ್‌ ಬಜಾರ್‌, ಬಸ್‌ ನಿಲ್ದಾಣ ಹಾಗೂ ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ವೃತ್ತದ ಆಸು ಪಾಸಿನ ಎರಡೂ ರಸ್ತೆಗಳಲ್ಲಿ ಕೆಲಸ ಕೈಗೆತ್ತಿಕೊಂಡು, ನೆಲ ಅಗೆದು, ಅಪಾರ ಪ್ರಮಾಣದಲ್ಲಿ ಕಾಂಕ್ರೀಟ್‌ ಸುರಿದು ಸಮತಟ್ಟು ಮಾಡುತ್ತಿರುವುದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿದೆ. ಇದರಿಂದ ಜನ ಸುತ್ತು ಬಳಸಿಕೊಂಡು, ಅನ್ಯ ಮಾರ್ಗಗಳ ಮೂಲಕ ಸಂಚರಿಸುವಂತಾಗಿದೆ.

ಅಷ್ಟೇ ಅಲ್ಲ, ಗಾಂಧಿ ವೃತ್ತದಲ್ಲಿನ ರಸ್ತೆಯ ಎರಡೂ ಭಾಗಗಳಲ್ಲಿ ಎಲೆ ಕ್ಟ್ರಾನಿಕ್ಸ್‌, ಗಾರ್ಮೆಂಟ್ಸ್‌, ದಿನಸಿ, ತರ ಕಾರಿ ಹಾಗೂ ಹಣ್ಣಿನ ಹಲವು ಮಳಿಗೆ ಗಳಿವೆ. ನಗರದ ಮಧ್ಯಭಾಗದಲ್ಲಿ ಇರು ವುದು ಹಾಗೂ ಬಸ್‌ ನಿಲ್ದಾಣ ಸಮೀಪ ಇರುವುದರಿಂದ ನಗರ ಸೇರಿದಂತೆ ಅನ್ಯ ಭಾಗದ ಜನ ಖರೀದಿಗೆ ಇಲ್ಲಿಗೆ ಬರುತ್ತಾರೆ. ಇದರಿಂದ ಈ ಭಾಗದಲ್ಲಿ ಸದಾ ಜನದಟ್ಟಣೆ, ವಾಹನದಟ್ಟಣೆ ಇರುತ್ತದೆ. ವ್ಯಾಪಾರ ಕೂಡ ಉತ್ತಮವಾಗಿ ನಡೆಯುತ್ತದೆ.

ಆದರೆ, ಕಾಮಗಾರಿಯಿಂದ ವಾಹನ ಸಂಚಾರ, ಜನ ಸಂಚಾರ ನಿಂತು ಹೋಗಿರುವ ಕಾರಣ ಸ್ಥಳೀಯ ವ್ಯಾಪಾರಿಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ರಸ್ತೆ, ಚರಂಡಿ ನಿರ್ಮಾಣದಿಂದ ಎಲ್ಲೆಡೆ ಧೂಳು ಆವರಿಸಿಕೊಂಡಿದೆ. ಇದರಿಂದ ಯಾರೂ ಈ ಭಾಗಕ್ಕೆ ಹೋಗಲು ಇಷ್ಟಪಡುತ್ತಿಲ್ಲ. ಮಳಿಗೆಗಳು ಬಾಗಿಲು ತೆರೆದರೂ ವ್ಯಾಪಾರ ನಡೆಯುತ್ತಿಲ್ಲ. ಹೀಗಾಗಿ ಕೆಲವರು ಕಾಮಗಾರಿ ಮುಗಿಯುವವರೆಗೆ ಮಳಿಗೆಗಳನ್ನು ತೆರೆಯದಿರಲು ನಿರ್ಧರಿಸಿದ್ದಾರೆ.

‘ಗಾಂಧಿ ವೃತ್ತದಲ್ಲಿ ರಸ್ತೆ, ಚರಂಡಿ ನಿರ್ಮಿಸುತ್ತಿರುವುದು ಒಳ್ಳೆಯ ವಿಷಯ. ಆದರೆ, ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿರುವ ಕಾರಣ ವ್ಯಾಪಾರ ವಹಿ ವಾಟು ಸಂಪೂರ್ಣ ನಿಂತು ಹೋಗಿದೆ’ ಎಂದು ಗಾರ್ಮೆಂಟ್ಸ್‌ ಮಳಿಗೆಯ ಮಾಲೀಕ ರಾಧೆ ಶಾಮ್‌ ‘ಪ್ರಜಾ ವಾಣಿ’ಗೆ ತಿಳಿಸಿದರು.

‘ಸುಮಾರು ಅರ್ಧ ಕಿ.ಮೀ ಗಿಂತಲೂ ಕಡಿಮೆ ಪ್ರದೇಶದಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಇಷ್ಟೊಂದು ವಿಳಂಬ ಮಾಡಿದರೆ ಹೇಗೆ? ವ್ಯಾಪಾರ ನಡೆಯದಿದ್ದರೆ ಬದುಕು ನಡೆಸುವುದು ಕಷ್ಟ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳೀಯ ವ್ಯಾಪಾರಿಗಳು ಭೇಟಿ ಮಾಡಿ, ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕೋರಲಾಗಿದೆ. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಬೇಸರ ತೋಡಿಕೊಂಡರು.

‘ಆರಂಭದಲ್ಲಿ ಕಾಮಗಾರಿ ಚುರುಕಿನಿಂದ ನಡೆಯಿತು. ಆದರೆ, ದಿನಕಳೆದಂತೆ ನಿಧಾನವಾಯಿತು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಕುಡಿಯುವ ನೀರಿನ ಪೈಪ್‌ಲೈನ್‌ ಕೆಲಸ ನಡೆದಿರುವ ಕಾರಣ ವಿಳಂಬವಾಗಿರುವುದಾಗಿ ತಿಳಿಸಿದರು’ ಎಂದು ಎಲೆಕ್ಟ್ರಾನಿಕ್ಸ್‌ ಮಳಿಗೆ ಮಾಲೀಕ ಪಂಕಜ್‌ ಸಿಂಗ್‌ ತಿಳಿಸಿದರು.

‘ಕಾಮಗಾರಿ ಕಾರಣ ವ್ಯಾಪಾರ ಸಂಪೂರ್ಣ ಬಿದ್ದು ಹೋಗಿದೆ. ಇಲ್ಲಿರುವ ಮಳಿಗೆಗಳ ಕಡೆಗೆ ಒಬ್ಬರೂ ಬರುತ್ತಿಲ್ಲ. ಹೆಸರಿಗೆ ಮಾತ್ರ ಮಳಿಗೆಗಳನ್ನು ತೆರೆ ದಿಡುತ್ತಿದ್ದೇವೆ. ಸಾಲ ಮಾಡಿ ತಂದಿರುವ ವಸ್ತುಗಳು ಬಿಕರಿಯಾಗದಿದ್ದರೆ ಜೀವನ ಹೇಗೆ ನಡೆಸಬೇಕು?’ ಎಂದು ಪ್ರಶ್ನಿಸಿದರು.

ಈ ಕುರಿತು ನಗರಸಭೆ ಎಇಇ ಸೈಯದ್‌ ಮನ್ಸೂರ್‌ ಅವರನ್ನು ಕೇಳಿ ದರೆ, ರಸ್ತೆ, ಒಳಚರಂಡಿ ಕಾಮಗಾರಿ ಒಟ್ಟಿಗೆ ಕೈಗೆತ್ತಿಕೊಂಡಿರುವ ಕಾರಣ  ಸ್ವಲ್ಪ ವಿಳಂಬವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.