ADVERTISEMENT

ಎರಡನೇ ದಿನವೂ ಮುಂದುವರಿದ ‘ಹೂಳಿನ ಜಾತ್ರೆ’

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:38 IST
Last Updated 20 ಮೇ 2017, 5:38 IST
ಶುಕ್ರವಾರ ಸತತ ಎರಡನೇ ದಿನವೂ ರೈತರು ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಿಂದ ಟ್ರ್ಯಾಕ್ಟರ್‌ಗಳಲ್ಲಿ ಹೂಳು ಕೊಂಡೊಯ್ದರು
ಶುಕ್ರವಾರ ಸತತ ಎರಡನೇ ದಿನವೂ ರೈತರು ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಿಂದ ಟ್ರ್ಯಾಕ್ಟರ್‌ಗಳಲ್ಲಿ ಹೂಳು ಕೊಂಡೊಯ್ದರು   

ಹೊಸಪೇಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಘಟಕವು ಇಲ್ಲಿನ ತುಂಗಭದ್ರಾ ಜಲಾಶಯದ ಅಂಗಳದಲ್ಲಿ ಹಮ್ಮಿಕೊಂಡಿರುವ ‘ಹೂಳಿನ ಜಾತ್ರೆ’ ಶುಕ್ರವಾರ ಎರಡನೇ ದಿನಕ್ಕೆ ಕಾಲಿರಿಸಿದೆ.

ತಾಲ್ಲೂಕಿನ ವ್ಯಾಸನಕೆರೆ, ಹಂಪನಕಟ್ಟೆ, ಡಣಾಪುರ ಹಾಗೂ ವೆಂಕಟಾಪುರದ ರೈತರು ಶುಕ್ರವಾರ ಬೆಳಿಗ್ಗೆಯಿಂದಲೇ ಟ್ರ್ಯಾಕ್ಟರ್‌ಗಳಲ್ಲಿ ಹೂಳು ತುಂಬಿಸಿಕೊಂಡು ಕೊಂಡೊಯ್ಯುತ್ತಿರುವುದು ಕಂಡು ಬಂತು. ಮೂರು ಜೆ.ಸಿ.ಬಿ ಹಾಗೂ ಸುಮಾರು 60ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಕೊಂಡೊಯ್ಯಲಾಗುತ್ತಿದೆ. ಮಧ್ಯಾಹ್ನ 3ರ ವರೆಗೆ ಟ್ರ್ಯಾಕ್ಟರ್‌ಗಳು ಸುಮಾರು 400ಕ್ಕೂ ಹೆಚ್ಚು ಟ್ರಿಪ್‌ಗಳಲ್ಲಿ ಮಣ್ಣು ಸಾಗಿಸಿದವು. ಬೆಳಿಗ್ಗೆ ಹಾಗೂ ಸಂಜೆ ಬಿಸಿಲು ಕಡಿಮೆ ಇರುವುದರಿಂದ ಈ ವೇಳೆ ಹೆಚ್ಚಿನ ಪ್ರಮಾಣದಲ್ಲಿ ರೈತರು ಹೂಳು ಕೊಂಡೊಯ್ಯುತ್ತಿದ್ದಾರೆ.  ಮೊದಲ ದಿನ 600 ಟ್ರಿಪ್‌ ಮಣ್ಣು ಸಾಗಿಸಲಾಗಿದೆ.

‘ನನಗೆ ಸೇರಿದ ಎರಡು ಎಕರೆ ಜಮೀನಿದೆ. ಭೂಮಿ ಸಮತಟ್ಟಾಗಿಲ್ಲ. ಈಗಿರುವ ಮಣ್ಣು ಕೂಡ ಅಷ್ಟಕಷ್ಟೇ. ಜಲಾಶಯದ ಫಲವತ್ತಾದ ಮಣ್ಣು ಕೊಂಡೊಯ್ದು ಭೂಮಿಗೆ ಸುರಿಯುತ್ತಿದ್ದೇನೆ. ಮಧ್ಯಾಹ್ನ 2ರ ವರೆಗೆ ನಾಲ್ಕು ಟ್ರಿಪ್‌ ಮಣ್ಣು ಕೊಂಡೊಯ್ದಿದ್ದೇನೆ’ ಎಂದು ತಾಲ್ಲೂಕಿನ ಹಂಪನಕಟ್ಟೆ ರೈತ ಕೊಟ್ರಪ್ಪ ತಿಳಿಸಿದರು.

ADVERTISEMENT

‘ಹೂಳು ಕೊಂಡೊಯ್ಯಲು ಅವಕಾಶ ಕಲ್ಪಿಸಿರುವ ವಿಷಯ ತಿಳಿದು ತಾಲ್ಲೂಕಿನ ಸುತ್ತಮುತ್ತಲಿನ ರೈತರು ಬರುತ್ತಿದ್ದಾರೆ. ಆದರೆ, ಈಗಿರುವ ಟ್ರ್ಯಾಕ್ಟರ್‌ಗಳು ಸಾಲುತ್ತಿಲ್ಲ. ಹಣವಂತರು ಟ್ರ್ಯಾಕ್ಟರ್‌ ಒದಗಿಸಿದರೆ ಸಣ್ಣ ರೈತರು ಮಣ್ಣು ಕೊಂಡೊಯ್ಯಲು ಅನುಕೂಲವಾಗುತ್ತದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಕಾರ್ಯಕ್ರಮಕ್ಕೆ ಪ್ರಚಾರ ಸಿಕ್ಕಿರುವುದರಿಂದ ಅನೇಕ ಜನ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ರಾಯಚೂರು ಶಾಸಕ ಶಿವರಾಜ ಪಾಟೀಲ, ರಾಯದುರ್ಗದ ಮಾಜಿ ಶಾಸಕ ಕಾಪು ರಾಮಚಂದ್ರರೆಡ್ಡಿ ಕರೆ ಮಾಡಿ ನಮ್ಮ ಕೆಲಸಕ್ಕೆ ಬೆಂಬಲ ಸೂಚಿಸಿದ್ದಾರೆ. ಗ್ರಾಮ ಲೆಕ್ಕಿಗರ ಸಂಘವು ಬೆಂಬಲ ವ್ಯಕ್ತಪಡಿಸಿದೆ’ ಎಂದು ಹೇಳಿದರು.

‘ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನಲ್ಲಿ ದೇಶದಲ್ಲೇ ಅತಿ ಹೆಚ್ಚು ಟ್ರ್ಯಾಕ್ಟರ್‌ಗಳಿವೆ. ಅಷ್ಟೊಂದು ದೂರ ನಮಗೆ ಹೂಳು ಕೊಂಡೊಯ್ಯಲು ಆಗುವುದಿಲ್ಲ. ಆದರೆ, ನಮಗೂ ಕೂಡ ತುಂಗಭದ್ರಾ ಜಲಾಶಯದ ನೀರೇ ಗತಿ. ಹೂಳು ಸಾಗಿಸುತ್ತಿರುವ ಬಗ್ಗೆ ಸ್ಥಳೀಯವಾಗಿ ಪ್ರಚಾರ ನಡೆಸಿ, ಟ್ರ್ಯಾಕ್ಟರ್‌ ಸೇರಿದಂತೆ ಅಗತ್ಯ ನೆರವು ಕಲ್ಪಿಸಲು ಶ್ರಮಿಸಲಾಗುವುದು’ ಎಂದು ಸಿಂಧನೂರು ತಾಲ್ಲೂಕಿನ ಗೊರಬಾಳ ಗ್ರಾಮದ ಸಿದ್ಧಲಿಂಗೇಶ್ವರ ತಿಳಿಸಿದರು. ಅವರೊಂದಿಗೆ ಅವರ ಗೆಳೆಯರಾದ ಮಲ್ಲಿಕಾರ್ಜುನ, ಸಿದ್ಧಲಿಂಗ ಅವರು ಸ್ವಂತ ವಾಹನದಲ್ಲಿ ಜಲಾಶಯಕ್ಕೆ ಶುಕ್ರವಾರ ಭೇಟಿ ನೀಡಿ ರೈತ ಸಂಘ ಮಾಡುತ್ತಿರುವ ಕೆಲಸ ನೋಡಿದರು.

ಬಿಜೆಪಿ ಬೆಂಬಲ: ‘ಹೂಳಿನ ಜಾತ್ರೆ’ ಬಿಜೆಪಿ ರೈತ ಮೋರ್ಚಾ, ರೈತ ಸಂಘ ಹುಚ್ಚವ್ವನಹಳ್ಳಿ ಬಣ ಬೆಂಬಲ ಸೂಚಿಸಿದೆ. ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್‌. ಗುರುಲಿಂಗನಗೌಡ, ಕಾರ್ಯಕಾರಿಣಿ ಸದಸ್ಯರಾದ ಮುದ್ದನಗೌಡ್ರು, ಮಂಡಲ ಅಧ್ಯಕ್ಷ ಶಿವರುದ್ರ ಗೌಡ, ಮುಖಂಡ ಎಸ್‌. ಕೇಶವ ರೆಡ್ಡಿ ಅವರು ಶುಕ್ರವಾರ ಹೂಳು ತೆಗೆಯುತ್ತಿರುವ ಜಾಗಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು.

**

ಭಜನೆ, ಬಯಲಾಟ

ದಿನವಿಡೀ ಹೂಳು ಕೊಂಡೊಯ್ದ ರೈತರು ಸಂಜೆ ಆರರ ನಂತರ ಕೆಲಹೊತ್ತು ವಾಲಿಬಾಲ್‌ ಆಡಿದರು. ಕತ್ತಲಾಗುತ್ತಿದ್ದಂತೆ ಅಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿದರು. ಬಳಿಕ ಭಜನೆ, ಭಾವಗೀತೆ, ಜನಪದ ಗೀತೆ ಹಾಡಿ ಕಾಲ ಕಳೆದರು. ಅಷ್ಟೇ ಅಲ್ಲ, ಕೆಲವರು ಬಯಲಾಟ ಆಡಿ ರೈತರನ್ನು ರಂಜಿಸಿದರು.

**

ನನಗೆ ಸೇರಿದ ಎರಡು ಎಕರೆ ಜಮೀನಿದೆ. ಮಣ್ಣು ಕೊಂಡೊಯ್ಯಲು ಬೆಳಿಗ್ಗೆಯೇ ಬಂದಿದ್ದೇನೆ. ಆದರೆ, ಟ್ರ್ಯಾಕ್ಟರ್‌ಗಳು ಖಾಲಿ ಇಲ್ಲ.
-ಶ್ರೀನಿವಾಸ್‌, ವ್ಯಾಸನಕೆರೆ ರೈತ

**

ಆರು ಎಕರೆ ಭೂಮಿ ಇದೆ. ಫಲವತ್ತಾದ ಮಣ್ಣು ಸಿಗುತ್ತದೆ ಎಂದು ಬೆಳಿಗ್ಗೆಯೇ ಬಂದಿದ್ದೆ. ಟ್ರ್ಯಾಕ್ಟರ್‌ ಇಲ್ಲ. ಹಣವಂತರು ಮುಂದೆ ಬಂದು ಟ್ರ್ಯಾಕ್ಟರ್‌ ನೀಡಬೇಕು.
-ಮಲ್ಲಿಕಾರ್ಜುನ, ಹಂಪನಕಟ್ಟೆ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.