ADVERTISEMENT

ಒಣಗುತ್ತಿದೆ ಹಸಿರು ಬಳ್ಳಾರಿ ಯೋಜನೆ!

ನೀರಿಲ್ಲದೆ ಸೊರಗುತ್ತಿರುವ ಸಸಿಗಳು; ನಿರ್ವಹಣೆಯ ಕೊರತೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:38 IST
Last Updated 28 ಡಿಸೆಂಬರ್ 2016, 5:38 IST

ಬಳ್ಳಾರಿ: ನಗರದಲ್ಲಿ ಕೆಲವು ತಿಂಗಳ ಹಿಂದೆ ‘ಹಸಿರು ಬಳ್ಳಾರಿ’ ಯೋಜನೆ ಅಡಿ ಅರಣ್ಯ ಇಲಾಖೆಯು ನೆಟ್ಟಿದ್ದ ಸಸಿಗಳು ನಿರ್ವಹಣೆಯ ಕೊರತೆಯಿಂದ ಸೊರಗಿ, ಒಣಗುತ್ತಿವೆ. ಸಸಿಗಳ ಪಾತಿ ನಿರ್ವಹಣೆ ಮತ್ತು ನೀರೂಡಿಸುವ ಕಾರ್ಯ ನಡೆ ಯದೇ ಇರುವುದರಿಂದ ಸಸಿಗಳು ಅಸ್ತಿತ್ವ ವನ್ನು ಕಳೆದುಕೊಳ್ಳುವ ಸನ್ನಿವೇಶ ನಿರ್ಮಾಣವಾಗಿದೆ.

ನಗರ ಹಸಿರೀಕರಣ ಯೋಜನೆ, ಎನ್‌ಎಂಡಿಸಿ ಯೋಜನೆ, ಪಾಲಿಕೆ ಮತ್ತು ಜಿಲ್ಲಾಡಳಿತದ ಅನುದಾನದ ಅಡಿಯಲ್ಲಿ ಅರಣ್ಯ ಇಲಾಖೆಯು ಹೊಂಗೆ, ಬೇವು, ಮಳೆ ಮರ, ಸೀ ಹುಣಿಸಿ ಸಸಿಗಳನ್ನು ನೆಡುವ ಕಾರ್ಯ ನಡೆಸಿತ್ತು. ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದ ವತಿ ಯಿಂದ ನಗರದ ಎಲ್ಲೆಡೆ ಸಸಿಗಳನ್ನು ನೆಡುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಚಾಲನೆ ನೀಡಿದ್ದರು.

ಹಸಿರೀಕರಣದ ಸಲುವಾಗಿ ಸಸಿ ಗಳನ್ನು ಪೂರೈಸಿದ್ದ ಇಲಾಖೆಗೆ ಸಸಿಗಳ ಕೊರತೆಯ ಸಮಸ್ಯೆಯೂ ಜುಲೈನಲ್ಲಿ ಎದುರಾಗಿತ್ತು. ಕಳೆದ ಮಳೆಗಾಲದಲ್ಲೇ ಬೀಜಗಳನ್ನು ಪೊಟ್ಟಣದಲ್ಲಿ ಬಿತ್ತನೆ ಮಾಡಿ ಪೋಷಿಸಿ, ಏಳೆಂಟು ಅಡಿಗಳಷ್ಟು ಎತ್ತರಕ್ಕೆ ಬೆಳೆಸಿದ ಬಳಿಕ ಇಲಾಖೆಯು ನಗರದಲ್ಲಿ ಅವುಗಳನ್ನು ನೆಟ್ಟಿತ್ತು.

ಅದೇ ವೇಳೆ, ಸಾರ್ವಜನಿಕರಿಂದಲೂ ಬೇಡಿಕೆ ಹೆಚ್ಚಾದ ಪರಿಣಾಮ, ಮೈಸೂರು ಮತ್ತು ಬೆಂಗಳೂರಿನಿಂದಲೂ ಸಸಿಗಳನ್ನು ಪಡೆಯಲಾಗಿತ್ತು.
ಹೀಗೆ ಪ್ರಯತ್ನಪಟ್ಟು ನೆಟ್ಟ ಸಸಿಗಳ ನಿರ್ವಹಣೆ ನಡೆಯದೇ ಇರುವುದರಿಂದ ‘ಹಸಿರು ಬಳ್ಳಾರಿ’ ಈಗ ‘ಒಣಗಿದ ಬಳ್ಳಾರಿ’ಯಾಗಿ ಮಾರ್ಪಟ್ಟಿದೆ.

ಇಲಾಖೆಯ ನಗರ ಅರಣ್ಯ ವಿಭಾಗ 2016–17ನೇ ಸಾಲಿನಲ್ಲಿ, ಎರಡೂವರೆ ತಿಂಗಳ ಅವಧಿಯಲ್ಲಿ ಎನ್‌ಎಂಡಿಸಿ ಯೋಜನೆ ಅಡಿಯಲ್ಲಿ 4 ಸಾವಿರ ಗಿಡ ಗಳನ್ನು ವಿವಿಧೆಡೆ ನೆಟ್ಟಿತ್ತು. ನಂತರ, ಇತರೆ ಯೋಜನೆ ಅನುದಾನಗಳ ಅಡಿ ಸುಮಾರು 12 ಸಾವಿರ ಗಿಡಗಳನ್ನು ನೆಡಲಾಗಿತ್ತು ಎನ್ನುತ್ತವೆ ಇಲಾಖೆಯ ಮೂಲಗಳು.

ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ಸಾಲು ಸಸಿಗಳನ್ನು ನೆಡುವು ದರ ಜೊತೆಗೆ ಸಂಸ್ಥೆಗಳ ಆವರಣದಲ್ಲಿ ನೂರಾರು ಸಸಿಗಳನ್ನು ನೆಡಲಾಗಿದೆ. ವಿಮ್ಸ್‌ ಮತ್ತು ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಆವ ರಣದಲ್ಲಿ ಇದುರೆಗೆ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಆದರೆ, ಈಗ ಅವುಗಳ ಪೈಕಿ ಬಹಳಷ್ಟು ಸಸಿಗಳಿಗೆ ನೀರಿನ ಕೊರತೆ ಎದುರಾಗಿದೆ.

ಕಾಳಜಿ ಅಗತ್ಯ: ಸಸಿಗಳನ್ನು ನೆಡುವಾಗ ದೊಡ್ಡಮಟ್ಟದಲ್ಲಿ ಪ್ರಚಾರ ಪಡೆಯುವ ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆ ಗಳ ಪ್ರತಿನಿಧಿಗಳು ನಂತರ ನಿರ್ವಹಣೆ ಕುರಿತು ಕಾಳಜಿಯನ್ನೇ ವಹಿಸುವುದಿಲ್ಲ ಎಂಬುದಕ್ಕೆ ಸದ್ಯದ ಸನ್ನಿವೇಶ ಸಾಕ್ಷಿಯಾ ಗಿದೆ ಎನ್ನುತ್ತಾರೆ ನಗರದ ಪಾರ್ವತಿ ನಗರದ ಹಿರಿಯ -ನಾಗರಿಕ ವೆಂಕಟೇಶ್‌.

*
ಸಸಿಗಳ ನಿರ್ವಹಣೆಗೆಂದೇ ಅರಣ್ಯ ಇಲಾಖೆಗೆ ಅನುದಾನ ಬಿಡುಗಡೆ ಮಾಡಲಾಗಿದೆ.  ನಿರ್ವಹಣೆ ಕಾರ್ಯವನ್ನು ಸಮರ್ಪಕವಾಗಿ ನಡೆಸುವಂತೆ ಸೂಚಿಸಲಾಗುವುದು.
-ಎಂ.ಕೆ. ನಲ್ವಡಿ,
ಪಾಲಿಕೆ  ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT