ADVERTISEMENT

ಒಣಗುತ್ತಿರುವ ಭತ್ತದ ಸಸಿ: ಆತಂಕ

ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ

ಡಾ ಪಂಡಿತಾರಾಧ್ಯ
Published 13 ಜುಲೈ 2017, 11:23 IST
Last Updated 13 ಜುಲೈ 2017, 11:23 IST

ಕಂಪ್ಲಿ:   ಪ್ರಸ್ತುತ ಮುಂಗಾರಿನಲ್ಲಿ ತುಂಗ ಭದ್ರಾ ನದಿ, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಜಲಾಶಯದಿಂದ ಸಕಾಲಕ್ಕೆ ನೀರು ದೊರೆಯಬಹುದು ಎನ್ನುವ ಭರವಸೆಯೊಂದಿಗೆ ರೈತರು ಮಡಿಗಳಲ್ಲಿ ಭತ್ತದ ಸಸಿ ಬೆಳೆಸಿದ್ದರು. ಆದರೆ ಮಳೆ ನಿರೀಕ್ಷೆಗಿಂತಲೂ ಕಡಿಮೆ ಸುರಿದ ಕಾರಣ ಭತ್ತದ ಸಸಿ ಅವಧಿ ಮೀರಿ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಆದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕೆಲ ರೈತರು ಪಂಪ್‌ಸೆಟ್‌, ಕೊಳವೆಬಾವಿ ಆಧಾರಿತ ಗದ್ದೆಗಳಲ್ಲಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ಭತ್ತದ ಸಸಿ ಬೆಳೆಸಿದ್ದರು. ಆದರೆ ಕೆಲ ಕಡೆ ಕೊಳವೆಬಾವಿಗಳಲ್ಲಿ ಏಕಾಏಕಿ ಅಂತರ್ಜಲಮಟ್ಟ ಕುಸಿದು ನೀರಿಲ್ಲದೆ ಸಸಿ ಒಣಗಲು ಆರಂಭಿಸಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. 

‘ಒಂದು ಎಕರೆ ಭತ್ತದ ಸಸಿ ಬೆಳೆಯಲು ₹ 2500 ಖರ್ಚು ಮಾಡಿದ್ದೇನೆ.  ತುಂಗಭದ್ರಾ ಜಲಾಶಯ ದಲ್ಲಿ ನೀರು ಸಂಗ್ರಹ ಕೊರತೆ, ಮಳೆ ಇಲ್ಲದ ಕಾರಣ ಬೆಳೆದ ಸಸಿ ಒಣಗುತ್ತಿದೆ. ಇದರಿಂದ ರೈತರಿಗೆ  ಸಾವಿರಾರು ರೂಪಾಯಿ ನಷ್ಟ ಆಗಿದೆ.

ADVERTISEMENT

ಬೆಳೆದ ಭತ್ತದ ಸಸಿ 40ದಿನಗಳ ಅವಧಿ ಮೀರಿದ್ದು, ಇದು ನಾಟಿ ಮಾಡಲು ಬರುವುದಿಲ್ಲ. ಮುಂದೊಂದು ದಿನ ಸಸಿ ಜಾನಾವಾರು ಪಾಲಾಗುತ್ತದೆ’ ಎಂದು ಸಮೀಪದ ಮಾರೆಮ್ಮ ಕ್ಯಾಂಪ್‌ ಎಂ. ತಿರುಪತಿರೆಡ್ಡಿ ನೊಂದು ತಿಳಿಸಿದರು.

‘ತುಂಗಭದ್ರಾ ನದಿಪಾತ್ರದ ಸಣಾ ಪುರದ 668 ಹೆಕ್ಟೇರ್‌, ಅರಳಿಹಳ್ಳಿಯ 497ಹೆ., ಇಟಗಿಯ 1219 ಹೆ., ಮಣ್ಣೂರು–ಸೂಗೂರು ಪ್ರದೇಶದ ಸಾವಿರಾರು ಎಕರೆ ಭೂಮಿಯಲ್ಲಿ ಪ್ರತಿ ಮುಂಗಾರಿನಲ್ಲಿ ಭತ್ತ ನಾಟಿಯಾಗಿ ಈ ವೇಳೆಗೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ ನೀರಿನ ಕೊರತೆಯಾದ ಕಾರಣ  ಹೊಲದಲ್ಲಿ ನಡೆದಿಲ್ಲ’ ಎಂದು ರೈತರು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.