ADVERTISEMENT

ಔಷಧ ಮಾರಾಟ: ಸೇವೆಯ ಪಾಲೂ ಇರಲಿ: ಎಸ್ಪಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 6:40 IST
Last Updated 21 ನವೆಂಬರ್ 2017, 6:40 IST

ಬಳ್ಳಾರಿ: ‘ಔಷಧ ಮಾರಾಟವನ್ನು ಕೇವಲ ವ್ಯಾಪಾರ ಉದ್ದೇಶಕ್ಕೆ ಮಾತ್ರ ಸೀಮಿತಗೊಳಿಸದೆ, ಸೇವಾ ಉದ್ದೇಶಗಳಿಗೂ ವಿಸ್ತರಿಸಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಸಲಹೆ ನೀಡಿದರು.

ನಗರದ ಅಲ್ಲಂ ಸುಮಂಗಳಮ್ಮ ಕಾಲೇಜಿನಲ್ಲಿ ಸೋಮವಾರ 56ನೇ ರಾಷ್ಟ್ರೀಯ ಫಾರ್ಮಸಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಔಷಧಿ ಎಲ್ಲರಿಗೂ ಬೇಕು. ಆದರೆ ಅದನ್ನು ಖರೀದಿಸುವ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲ. ಹೀಗಾಗಿ ಔಷಧ ತಜ್ಞರು ಮತ್ತು ವ್ಯಾಪಾರಿಗಳು ಲಾಭ–ನಷ್ಟದ ಲೆಕ್ಕಾಚಾರದ ಆಚೆಗೆ, ಸೇವಾ ಕ್ಷೇತ್ರದಲ್ಲೂ ಕೊಡುಗೆ ನೀಡಬೇಕು. ಬಡವರಿಗೆ ಉಚಿತ ಆರೋಗ್ಯ ತಪಾಸಣೆ, ಔಷಧಿ ವಿತರಣೆಯಂಥ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು’ ಎಂದರು.

‘ಕಾಯಿಲೆ ಬಂದಾಗ ಮತ್ತು ವಾಸಿಯಾದಾಗ ಎಲ್ಲರೂ ವೈದ್ಯರನ್ನು, ಶುಶ್ರೂಷಕರನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಔಷಧ ವಿತರಕರನ್ನು ಸ್ಮರಿಸುವುದು ಕಡಿಮೆ. ಆದರೆ ಇತ್ತೀಚೆಗೆ ಈ ಧೋರಣೆ ಬದಲಾಗಿದೆ. ಔಷಧ ಅಂಗಡಿಯ ಕೌಂಟರ್‌ ಒಳಗಿರುವವರೂ ಮುಖ್ಯ ಎಂಬ ಅರಿವು ಜನರಲ್ಲಿ ಹೆಚ್ಚುತ್ತಿದೆ’ ಎಂದರು.

ADVERTISEMENT

‘ಅಪಾಯಕಾರಿ ಎಂದು ಗುರುತಿಸಲಾಗಿರುವ ಔಷಧಿಗಳನ್ನು ಯಾವುದೇ ಕಾರಣಕ್ಕೂ ವೈದ್ಯರ ಸಲಹಾ ಚೀಟಿಯಿಲ್ಲದೆ ನೀಡಬೇಡಿ’ ಎಂದು ಅವರು ಸೂಚಿಸಿದರು. ಬೆಂಗಳೂರಿನ ಸಾಗರ್‌ ಆಸ್ಪತ್ರೆಯ ಔಷಧ ವಿಭಾಗದ ಹಿರಿಯ ವ್ಯವಸ್ಥಾಪಕ ಜೈಪ್ರಕಾಸ್‌ ಎಸ್.ವಸ್ತ್ರದ್‌ ಅವರ ಸಪ್ತಾಹದ ಕುರಿತು ಉಪನ್ಯಾಸ ನೀಡಿದರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ ಅಧ್ಯಕ್ಷತೆ ವಹಿಸಿದ್ದರು.ವಿಮ್ಸ್‌ ನಿರ್ದೇಶಕ ಡಾ.ಡಿ.ಪ್ರಭಂಜನಕುಮಾರ್‌, ಸಂಘದ ಉಪಾಧ್ಯಕ್ಷ ವೀರಭದ್ರಶರ್ಮ, ಪ್ರಾಂಶುಪಾಲ ಮಂಜುನಾಥ ಜಾಲಿ, ಸಹಾಯಕ ಔಷಧ ನಿಯಂತ್ರಣಾಧಿಕಾರಿಗಳಾದ ಶಂಕರ್‌ ಜ್ಯೋತಿ ಮತ್ತು ಸುಧಾ ಸ್ವಾಮಿ, ಬಿ.ಕೆ.ಪ್ರಸನ್ನಕುಮಾರ್‌, ಕೆ.ಮಲ್ಲಿಕಾರ್ಜುನ್‌ ವೇದಿಕೆಯಲ್ಲಿದ್ದರು.

ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ, ಟಿ.ವಿ.ಎಂ ಫಾರ್ಮಸಿ ಕಾಲೇಜು, ರಾಜ್ಯ ಸರ್ಕಾರಿ ಫಾರ್ಮಸಿಸ್ಟರ ಸಂಘ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳ ಸಂಘ ಜಂಟಿಯಾಗಿ ಸಪ್ತಾಹವನ್ನು ಏರ್ಪಡಿಸಿದೆ.

ಇಂದು ಜಾಗೃತಿ: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸಪ್ತಾಹ ಜಾಗೃತಿ ಜಾಥಾವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ರಮೇಶ್‌ಬಾಬು ಉದ್ಘಾಟಿಸಲಿದ್ದಾರೆ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಉಪಸ್ಥಿತರಿರುತ್ತಾರೆ. 22ರಿಂದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಕಾಲೇಜಿನಲ್ಲಿ ಪ್ರತಿದಿನ ಸಂಜೆ 4ಕ್ಕೆ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ.
‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.