ADVERTISEMENT

ಕನಕದುರ್ಗಮ್ಮ ಸಿಡಿಬಂಡಿ ಉತ್ಸವ ನಾಳೆ

ಗಾಣಿಗ ಸಮುದಾಯದಲ್ಲಿ ಸಂಭ್ರಮ, ದೇವಾಲಯದಲ್ಲಿ ಸಿದ್ಧತೆ: ಎಳೆಯುವ ಜೋಡಿ ಎತ್ತುಗಳು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 11:37 IST
Last Updated 6 ಮಾರ್ಚ್ 2017, 11:37 IST
ಬಳ್ಳಾರಿ: ಹಲವು ರಾಜ್ಯಗಳಲ್ಲಿ ಪ್ರಸಿದ್ಧ ವಾದ, ಐತಿಹಾಸಿಕ ಕನಕದುರ್ಗಮ್ಮ ಸಿಡಿಬಂಡಿ ಉತ್ಸವ ಮಂಗಳವಾರ  (ಮಾರ್ಚ್‌ 7) ನಡೆಯಲಿದ್ದು, ಗಾಣಿಗ ಸಮುದಾಯ ಮತ್ತು ದುರ್ಗಮ್ಮ ಗುಡಿ ಅರ್ಚಕ ವೃಂದ ಸಕಲ ಸಿದ್ಧತೆಗಳನ್ನು ನಡೆಸಿದೆ.
 
ತಮ್ಮ ಕುಲದೇವತೆಯೂ ಆಗಿರುವ ದುರ್ಗಮ್ಮನ ಸಿಡಿಬಂಡಿ ಉತ್ಸವವನ್ನು ಎಂದಿನಂತೆ ಹಮ್ಮಿಕೊಳ್ಳಲು ಗಾಣಿಗ ಸಮುದಾಯವು ಜಿಲ್ಲಾ ಗಾಣಿಗರ ಸಂಘದ ನೇತೃತ್ವದಲ್ಲಿ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಂಡಿದೆ. 
 
ಸಿಡಿಬಂಡಿ ಸಿದ್ಧತೆ: ಸಿಡಿ ಬಂಡಿಯನ್ನು ಎಳೆಯಲು ಎರಡು ಜೊತೆ ಹೊಸ ಎತ್ತುಗಳನ್ನು ಲಿಂಗಸುಗೂರು ಜಾತ್ರೆಯಲ್ಲಿ ಎರಡು ತಿಂಗಳ ಹಿಂದೆ ₹ 6 ಲಕ್ಷ ನೀಡಿ ಖರೀದಿಸಿ ತರಲಾಗಿದೆ. ಬಂಡಿಯನ್ನು ಸಿದ್ಧಪಡಿಸುವ ಕಾರ್ಯ ಸೋಮವಾರ ಸಂಜೆ ಆರಂಭವಾಗಲಿದೆ. ಬಂಡಿಗೆ ಕಟ್ಟ ಲಾಗುವ ಬೊಂಬೆಯನ್ನು ಸಿದ್ಧಪಡಿಸ ಲಾಗಿದೆ. ಸಮುದಾಯದ ಬಟ್ಟುಕೃಷ್ಣ, ವೈ. ಸತೀಶ್‌ ಮತ್ತು ಎನ್‌.ಸಿರೀಶ್‌ ಉತ್ಸವದ ರಥ ಸಾರಥಿಗಳಾಗಿರುತ್ತಾರೆ ಎಂದು ಸಂಘದ ಜಂಟಿ ಕಾರ್ಯದರ್ಶಿ ವೈ. ಸುಧಾಕರ್‌ ನಗರದ ಕೌಲ್‌ಬಜಾರ್‌ ನಲ್ಲಿರುವ ಸಂಘದ ಕಚೇರಿಯಲ್ಲಿ ಭಾನು ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 
 
‘ಹಲವು ತಲೆಮಾರುಗಳಿಂದ ಸಮು ದಾಯವೇ ಸಿಡಿಬಂಡಿಯನ್ನು ಹಮ್ಮಿ ಕೊಳ್ಳುತ್ತಿತ್ತು. 1975ರಲ್ಲಿ ಸರ್ಕಾರದ ಮನವಿ ಮೇರೆಗೆ ಉಸ್ತುವಾರಿಯನ್ನು ಧಾರ್ಮಿಕ ದತ್ತಿ ಇಲಾಖೆಗೆ ಬಿಟ್ಟುಕೊಡಲಾಯಿತು. ಆದರೆ ಉತ್ಸವದ ಎಲ್ಲ ಖರ್ಚನ್ನೂ ಸಮುದಾಯವೇ ಭರಿಸುತ್ತದೆ’ ಎಂದರು.
 
‘ಕುಲದೇವತೆಯ ಉತ್ಸವದಲ್ಲಿ ಬಳ್ಳಾರಿ ಸುತ್ತಮುತ್ತಲಿನ ಪ್ರದೇಶಗಳಿಂದ ಮಾತ್ರವಲ್ಲದೆ ಕಡಪ, ಅನಂತಪುರ, ಹೈದರಾಬಾದ್‌, ಮಹಾರಾಷ್ಟ್ರದಿಂದಲೂ ಗಾಣಿಗ ಸಮುದಾಯದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ’ ಎಂದರು,
 
ಕಾರ್ಯಕ್ರಮ: ಉತ್ಸವದ ಅಂಗವಾಗಿ ಮಾರ್ಚ್‌ 3ರಂದು ಸಿಡಿಬಂಡಿಯ ಮೊದ ಲ ಮೆರವಣಿಗೆ ನಡೆದಿದೆ. 6ರಂದು ಸಂಜೆ 5 ಗಂಟೆಗೆ ಸಿಡಿಬಂಡಿ ಹಾಗೂ ಎತ್ತುಗಳ ಮೆರವಣಿಗೆ ನಡೆಯಲಿದೆ. ಕೌಲ್‌ ಬಜಾರ್‌ನ ದುಗ್ಗಿ ಮಾಧವಯ್ಯ ಬೀದಿ ಯಿಂದ ಕೌಲ್‌ಬಜಾರ್‌, 1ನೇ ಗೇಟ್‌, ಬಸವನಕುಂಟೆ, ಎಸ್ಪಿ ಸರ್ಕಲ್‌ ಮಾರ್ಗ ದಲ್ಲಿ ದುರ್ಗಮ್ಮ ಗುಡಿಯನ್ನು ತಲುಪುತ್ತದೆ.
 
7ರಂದು ಸಂಜೆ 5.30ಕ್ಕೆ ಗುಡಿಯ ಸುತ್ತ ಬಂಡಿಯು ಮೂರು ಪ್ರದಕ್ಷಿಣೆ ಹಾಕಲಿದೆ. 8ರಂದು ಸಂಜೆ 4 ಕ್ಕೆ ಎರಡು ಜೊತೆ ಎತ್ತುಗಳ ಮೂಲಕ ಬಂಡಿಯನ್ನು ಗುಡಿಯಿಂದ ಸೋಮಸುಂದರೇಶ್ವರ ದೇವಸ್ಥಾನಕ್ಕೆ ಕರೆದೊಯ್ಯಲಾಗುವುದು ಎಂದು ಮಾಹಿತಿ ನೀಡಿದರು.
 
ಗುಡಿಗೆ ಸಿಸಿ ಕ್ಯಾಮೆರಾ ಅಳವಡಿಕೆ: ಉತ್ಸವಕ್ಕೆ ಗುಡಿಯಲ್ಲಿ ಎಲ್ಲ ರೀತಿಯಲ್ಲೂ ಸಜ್ಜುಗೊಳಿಸಲಾಗಿದೆ. ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗುವುದು ಎಂದು ದೇವಾಲಯದ ಪ್ರಧಾನ ಧರ್ಮಕರ್ತ ಪಿ.ಗಾದೆಪ್ಪ ತಿಳಿಸಿದರು.
 
ದೇವಾಲಯದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವಕ್ಕೆ ಬರುವ ಭಕ್ತರಿಗೆ ನೂತನ ಯಾತ್ರಿ ನಿವಾಸದಲ್ಲಿ ತಾತ್ಕಾಲಿಕ ವಸತಿ ಸೌಕರ್ಯವನ್ನು ಕಲ್ಪಿಸಲಾ ಗುವುದು ಎಂದು ಮಾಹಿತಿ ನೀಡಿದರು. ದೇವಾ ಲಯದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಉಪಸ್ಥಿತರಿದ್ದರು.
 
ಸಿಡಿಬಂಡಿ ಐತಿಹ್ಯ..
‘ನಗರದ ವಿಸ್ತರಣೆಯಾಗುವುದಕ್ಕೂ ಮುನ್ನ, ಕೌಲ್‌ಬಜಾರ್‌ ಮತ್ತು ಬ್ರೂಸ್‌ಪೇಟೆ ಪ್ರಮುಖ ಪ್ರದೇಶಗಳಾಗಿದ್ದವು. ಈಗಿನ ದುರ್ಗಮ್ಮ ಗುಡಿ ಇರುವ ಪ್ರದೇಶ ಊರಿನ ಹೊರವಲಯವಾಗಿತ್ತು. ಪ್ಲೇಗ್‌, ಮಲೇರಿಯಾದಿಂದ ಜನ ಸಾವಿಗೀಡಾದ ವೇಳೆ ಗಾಣಿಗ ಸಮುದಾಯದ ಮಹಿಳೆಯೊಬ್ಬರ ಕನಸಿನಲ್ಲಿ ಕಾಣಿಸಿಕೊಂಡ ದುರ್ಗಮ್ಮ, ಪೂಜೆ ಮಾಡಿದ ನಿಂಬೆಹಣ್ಣನ್ನು ಗುಡ್ಡದ ಮೇಲಿಂದ ತಂದು ಊರಿನಬ ಪೂರ್ವದಿಕ್ಕಿನಲ್ಲಿರುವ ಹುತ್ತಕ್ಕೆ ಹಾಕಲು ಹೇಳುತ್ತಾಳೆ. ಅಲ್ಲಿಯೇ ದುರ್ಗಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ’ ಎಂಬ ಐತಿಹ್ಯವೂ ಉಂಟು ಎಂದು ಸಂಘದ ಅಧ್ಯಕ್ಷ ಟಿ.ಸುಬ್ಬರಾವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.