ADVERTISEMENT

ಕೆರೆಯ ಹೂಳು ದಂಡೆಗೆ: ಅರೆಬೆತ್ತಲೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 8:34 IST
Last Updated 22 ಮೇ 2017, 8:34 IST

ಬಳ್ಳಾರಿ : ಕೆರೆ ಹೂಳನ್ನು ದಂಡೆಯಲ್ಲಿ ಗುಡ್ಡೆ ಹಾಕಿದರೆ ಮಳೆ ಬಂದಾಗ ಅದೇ ಮಣ್ಣು ಕೆರೆಗೆ ಸೇರಿದರೆ ಹೂಳೆತ್ತುವ ಕಾರ್ಯ ಸಫಲವಾಗುವುದಿಲ್ಲ. ಕೂಡಲೇ ಹೂಳನ್ನು  ಬೇರೆಡೆ ಸಾಗಿಸಬೇಕು ಎಂದು ಒತ್ತಾಯಿಸಿ ಯುವ ಪಡೆಯ ಅಂಚೆ ಕೊಟ್ರೇಶ್‌ ಹಾಗೂ ಕಾರ್ಯಕರ್ತರು ಭಾನುವಾರ ಕೊಟ್ಟೂರು ಕೆರೆ ಅಂಗಳ ದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ಅಂಚೆ ಕೊಟ್ರೇಶ್‌ ಮಾತನಾಡಿ, ಮಣ್ಣನ್ನು ಕೆರೆಯಿಂದ ದೂರ ಸಾಗಿಸಬೇಕು. ಅಧಿಕಾರಿಗಳು ಗಮನ ಹರಿಸದ ಕಾರಣ ಕಾಟಾಚಾರಕ್ಕೆ ಹೂಳೆತ್ತಿ, ಮಣ್ಣನ್ನು ದಂಡೆಯ ಮೇಲೆ ಹಾಕಲಾಗುತ್ತಿದೆ. ದೂಪದಹಳ್ಳಿ ಗ್ರಾಮ ಪಂಚಾಯಿತಿಯ ಕಾರ್ಮಿಕರು ನಿಗದಿ ಯಂತೆ ಎರಡು ಅಡಿ ಆಳದ ಗುಂಡಿ ತೆಗೆಯದೇ ಬೇಕಾಬಿಟ್ಟಿಯಾಗಿ ಹೂಳು ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು.

ಸತತ ಮೂರು ತಿಂಗಳಿಂದ ಯುವ ಪಡೆಯ ಕಾರ್ಯಕರ್ತರು, ಮಠಾಧೀಶ ರು ಹಾಗೂ ಸಂಘ ಸಂಸ್ಧೆಗಳ ನೆರವಿನಿಂದ ಕೆರೆಯನ್ನು ಸಂಪೂರ್ಣ ಜಾಲಿ ಗಿಡಗಳಿಂದ ಮುಕ್ತಗೊಳಿಸಲಾಗಿದೆ. ನಮ್ಮ ಪ್ರಯತ್ನದ ನಂತರ ಎಚ್ಚೆತ್ತು ಕೊಂಡ ಜಿಲ್ಲಾಧಿಕಾರಿಗಳು ಗಡಿ ಸರ್ವೇ ಮಾಡಿ ಹೂಳು ತೆಗೆಯಲು ಆದೇಶಿ ಸಿದ್ದರು.

ADVERTISEMENT

ಆದರೆ, ತಾಲ್ಲೂಕು ಆಡಳಿತ ಕೈಗೊಂಡಿರುವ ಕಾಮಗಾರಿ ತೃಪ್ತಿದಾ ಯಕ ಎನಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಪ್ರತಿಭಟನಾ ಸ್ಥಳದಲ್ಲಿದ್ದ ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಜಾಲಿ ಗಿಡ ಹಾಗೂ ಹೂಳಿನಿಂದ ತುಂಬಿದ್ದ ಕೆರೆಯನ್ನು ಯುವ ಪಡೆಯ ಕಾರ್ಯ ಕರ್ತರು ‘ ನಮ್ಮ ಕೆರೆ ನಮ್ಮ ಹಕ್ಕು’ ಆಭಿಯಾನದಡಿ ಶ್ರಮದಾನ ಮಾಡಿ ಸ್ವಚ್ಛಗೊಳಿಸಿದ್ದಾರೆ. ಆದರೆ, ತಾಲ್ಲೂಕು ಆಡಳಿತ ಕೆರೆಯಿಂದ ತೆಗೆದ ಹೂಳನ್ನು ದಂಡೆಯ ಮೇಲೆ ಸುರಿಯುತ್ತಿರುವುದು ಸರಿಯಲ್ಲ. ಕೂಡಲೇ ಹೂಳನ್ನು ಬೇರೆಡೆ ಸಾಗಿಸಬೇಕು ಎಂದು ಒತ್ತಾಯಿಸಿದರು.

* * 

ಹೂಳು ಕೆರೆಯ ದಂಡೆ ಮೇಲೆ ಹಾಕಿರುವ ವಿಷಯ ಈಗಷ್ಟೇ ತಿಳಿಯಿತು. ಮಣ್ಣನ್ನು ಬೇರೆಡೆ ಸಾಗಿಸಲು ಸೂಚಿಸುತ್ತೇನೆ. ನಿಗದಿಯಷ್ಟು ಆಳ ಹೂಳು ತೆಗೆಯದಿದ್ದರೆ ಬಿಲ್‌ ಮಾಡೆನು
ಕೃಷ್ಣನಾಯ್ಕ,  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.