ADVERTISEMENT

ಕೆರೆ ಒತ್ತುವರಿ ಮಾಡಿದರೆ ಹುಷಾರ್‌!

ಕೆರೆಗಳ ಸರ್ವೆಗೆ ತಾಲ್ಲೂಕು ಮಟ್ಟದ ವಿಶೇಷ ಕಾರ್ಯಪಡೆ ರಚನೆ; ತಹಶೀಲ್ದಾರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 12 ಮೇ 2017, 11:31 IST
Last Updated 12 ಮೇ 2017, 11:31 IST
ಕೆರೆ ಒತ್ತುವರಿ ಮಾಡಿದರೆ ಹುಷಾರ್‌!
ಕೆರೆ ಒತ್ತುವರಿ ಮಾಡಿದರೆ ಹುಷಾರ್‌!   
ಹೊಸಪೇಟೆ: ತನ್ನ ವ್ಯಾಪ್ತಿಗೆ ಬರುವ ಕೆರೆ ಗಳ ಸಂರಕ್ಷಣೆ ಹಾಗೂ ಜೀರ್ಣೊದ್ಧಾರಕ್ಕೆ ತಾಲ್ಲೂಕು ಆಡಳಿತ ಮುಂದಾಗಿದೆ.
 
ಜಿಲ್ಲಾ ಪಂಚಾಯಿತಿ ಅಧಿಕಾರಿ, ತಹ ಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸಣ್ಣ ನೀರಾವರಿ ಇಲಾಖೆ, ಬೃಹತ್‌ ನೀರಾವರಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಕಾರ್ಯಪಡೆಯನ್ನು ಇದಕ್ಕಾಗಿ ರಚಿಸಿದೆ.
 
ತಾಲ್ಲೂಕು ವ್ಯಾಪ್ತಿಗೆ ಬರುವ ಎಲ್ಲ 25 ಕೆರೆಗಳ ಬಗ್ಗೆ ಈ ಕಾರ್ಯಪಡೆ ಸಮಗ್ರ ಮಾಹಿತಿ ಕಲೆ ಹಾಕಲಿದೆ. ಮೂಲ ಕೆರೆ ಎಷ್ಟು ಎಕರೆಯಲ್ಲಿ ಹರಡಿಕೊಂಡಿತ್ತು. ಎಷ್ಟು ಎಕರೆ ಒತ್ತುವರಿಯಾಗಿದೆ. ಅದರ ಸ್ವರೂಪ ಎಂತಹದ್ದು. ಎಷ್ಟು ಹೂಳು ತುಂಬಿಕೊಂಡಿದೆ ಎನ್ನುವುದರ ಬಗ್ಗೆ ಸರ್ವೇ ನಡೆಯಲಿದೆ.
 
ಸರ್ವೇ ಬಳಿಕ ಕೆರೆ ಒತ್ತುವರಿ ಆಗಿರು ವುದು ಕಂಡು ಬಂದರೆ ತಕ್ಷಣ ಅದನ್ನು ತೆರವುಗೊಳಿಸಲಿದೆ. ಸ್ವಯಂ ಪ್ರೇರಣೆ ಯಿಂದ ಒತ್ತುವರಿದಾರರು ಹೋದರೆ ಕ್ರಮ  ಜರುಗಿಸುವ ಪ್ರಶ್ನೆ ಇರುವುದಿಲ್ಲ. ಒಂದುವೇಳೆ ಜಾಗ ಖಾಲಿ ಮಾಡಲು ನಿರಾಕರಿಸಿದರೆ ಅಂತಹವರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ 492 (ಎ) ಅಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.
 
‘ಕೆರೆ ಜಾಗ ಗುರುತಿಸಿದ ನಂತರ ಅದರ ಗಡಿಯಲ್ಲಿ ಗುರುತಿನ ಕಲ್ಲುಗಳನ್ನು ನೆಡಬೇಕು. ಬಳಿಕ ಅದರ ಸುತ್ತಲೂ ಕಂದಕ (ಟ್ರೆಂಚ್‌) ನಿರ್ಮಿಸಬೇಕು. ಜತೆ ಸುತ್ತಲೂ ಸಸಿಗಳನ್ನು ಬೆಳೆಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.
 
ಹೀಗೆ ಮಾಡು ವುದರಿಂದ ಭವಿಷ್ಯದಲ್ಲಿ ಕೆರೆ ಒತ್ತುವರಿಗೆ ಅವಕಾಶ ಇರುವುದಿಲ್ಲ’ ಎಂದು ಗುರು ವಾರ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರ ರೊಂದಿಗೆ ತಹಶೀಲ್ದಾರ್‌ ಎಚ್‌. ವಿಶ್ವ ನಾಥ್‌ ಮಾತನಾಡಿದರು.
 
‘ಸುಮಾರು ವರ್ಷಗಳಿಂದ ಕೆರೆಗಳ ಅಳತೆ ನಡೆದಿಲ್ಲ. ಜಿಲ್ಲಾಧಿಕಾರಿ ರಾಮ ಪ್ರಸಾದ ಮನೋಹರ್‌ ಅವರು ಇತ್ತೀಚೆಗೆ ಬಳ್ಳಾರಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಕೆರೆಗಳ ಸರ್ವೇ ನಡೆಸಿ, ಒತ್ತುವರಿ ತೆರವುಗೊಳಿಸ ಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಅವರ ಸೂಚನೆ ಮೇರೆಗೆ ಈ ಕೆಲಸ ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಿದರು.
 
‘ಕೆರೆಗೆ ಸೇರಿದ ಜಾಗ, ಸರ್ಕಾರಿ ಆಸ್ತಿ ಯನ್ನು ಎಲ್ಲೆಲ್ಲಿ ಒತ್ತುವರಿ ಮಾಡಿಕೊಳ್ಳ ಲಾಗಿದೆಯೋ ಅದನ್ನು ತೆರವುಗೊಳಿಸ ಲಾಗುವುದು. ಯಾರು ಎಷ್ಟೇ ಪ್ರಭಾವಿ ಗಳಾಗಿರಲಿ ತಪ್ಪು ಮಾಡಿದರೆ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.
 
ಕಮಲಾಪುರ ಕೆರೆ ಒತ್ತುವರಿ ತೆರವು: ‘ತಾಲ್ಲೂಕಿನ ಕಮಲಾಪುರ ಕೆರೆ ಒಟ್ಟು 476 ಎಕರೆ ಪ್ರದೇಶದಲ್ಲಿ ಹರಡಿ ಕೊಂಡಿದೆ. ಸುಮಾರು 65ರಿಂದ 70 ಜನ 130 ಎಕರೆ ಎಕರೆ ಜಾಗ ಒತ್ತುವರಿ ಮಾಡಿಕೊಂಡಿದ್ದರು.
 
ಅದನ್ನು ತೆರವು ಗೊಳಿಸಲಾಗಿದೆ. ಇಡೀ ಕೆರೆಯ ಸರ್ವೇ ಪೂರ್ಣಗೊಂಡಿದ್ದು, ಗಡಿ ಗುರುತು ಕಲ್ಲು ಗಳನ್ನು ನೆಡಲಾಗಿದೆ. ಸುತ್ತಲೂ ಸಸಿ ನೆಡುವಂತೆ ಸಂಬಂಧಿಸಿದವರಿಗೆ ಸೂಚಿಸ ಲಾಗಿದೆ’ ಎಂದು ತಿಳಿಸಿದರು.
 
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ವಿ. ಭಾಸ್ಕರ್‌, ಲೋಕೋಪಯೋಗಿ ಇಲಾಖೆಯ ಎಇಓ ಮುತ್ತಯ್ಯ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.