ADVERTISEMENT

ಕೆರೆ ಮಣ್ಣು ದುರ್ಬಳಕೆ; ಪರಿಸರವಾದಿಗಳ ಆತಂಕ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 10:05 IST
Last Updated 20 ಏಪ್ರಿಲ್ 2017, 10:05 IST
ಕೊಟ್ಟೂರು ಕೆರೆಯ ಅಂಗಳದಲ್ಲಿ ಅನಧಿಕೃತವಾಗಿ ಮಣ್ಣು ಮತ್ತು ಗರಸನ್ನು ಸಾಗಿಸಲು ಗುಂಡಿ ತೋಡಿರುವ ದೃಶ್ಯ
ಕೊಟ್ಟೂರು ಕೆರೆಯ ಅಂಗಳದಲ್ಲಿ ಅನಧಿಕೃತವಾಗಿ ಮಣ್ಣು ಮತ್ತು ಗರಸನ್ನು ಸಾಗಿಸಲು ಗುಂಡಿ ತೋಡಿರುವ ದೃಶ್ಯ   

ಕೊಟ್ಟೂರು:  ಪಟ್ಟಣದ ಐತಿಹಾಸಿಕ ಕೆರೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಇಲ್ಲಿನ ಯುವ ಪಡೆ ಹಾಗೂ ವಿವಿಧ ಸಂಘ ಸಂಸ್ಥೆಗಳು ವ್ಯಾಪಾರಿಗಳು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿ ಜನರ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೆ  ಕೆಲವರು ಕೆರೆ ಯಲ್ಲಿ 15 ಅಡಿಗಿಂತಲೂ ಹೆಚ್ಚಿನ ಆಳದ ಗುಂಡಿ ತೋಡಿ  ವಿರೂಪಗೊಳಿಸಿದ್ದಾರೆ. ಜಿಲ್ಲೆಯಲ್ಲಿಯೇ ಅತಿದೊಡ್ಡ ಮೂರನೇ ಕೆರೆ ಇದಾಗಿದೆ.

ಹಲವು ವರ್ಷಗಳಿಂದ ಮಳೆ ಕೊರತೆಯಿಂದ ನೀರನ್ನು ಕಾಣದಂತಾಗಿದೆ. ಆದರೆ ಇದೇ ವೇಳೆ ಕೆರೆ ಪುನಃಶ್ಚೇತನ ಗೊಳಿಸುವ ಬದಲು ಅದನ್ನು ವಿರೂಪಗೊಳಿಸುತ್ತಿರುವುದು ಜನರನ್ನು ಆತಂಕಕ್ಕೆ ದೂಕಿದೆ.ಕೆರೆ ಮಧ್ಯ ಭಾಗ ಹಾಗೂ ದಂಡೆಯಲ್ಲಿ ಕಾರ್ಯ ಹಗಲಿರುಳು ಎನ್ನದೆ ಯಂತ್ರಗಳ ಮುಖಾಂತರ ಗುತ್ತಿಗೆದಾರರು   ರಸ್ತೆ ಕಾಮಗಾರಿ ಹಾಗೂ ನಿವೇಶನ ರಚನೆಗೆ ಬಳಕೆ ಮಾಡುತ್ತಿದ್ದಾರೆ.

ಜನ ಜಾನುವಾರಗಳು ನೀರಿನ ಆಸರೆಗಾಗಿ ಹೋದಾಗ ಆಳವಾದ ಗುಂಡಿಗಳಲ್ಲಿ ಸಿಕ್ಕಿಕೊಂಡು ಪ್ರಾಣಾಪಾಯವಾಗುವ ಸಂಭವ ಇರುತ್ತದೆ.ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಎಂದು ಪರಿಸರವಾದಿ ಎಂ.ರವಿ ಆಗ್ರಹಿಸಿದ್ದಾರೆ.ಕೆರೆ ಅಂಚಿನ ಭಾಗವು ಅತಿಕ್ರಮಣಕ್ಕೆ ಒಳಗಾಗಿರುವುದರಿಂದ ಸಂಪೂರ್ಣವಾಗಿ ಕೆರೆ ಸರ್ವೇ ಮಾಡಿಸಿ ನಿರ್ದಿಷ್ಟ ಗಡಿಯನ್ನು ಗುರುತಿಸಬೇಕಾಗಿದೆ. ಇಲ್ಲದಿದ್ದರೆ ಕೆರೆಯು ಇನ್ನು ಅತಿಕ್ರಮಣಕ್ಕೆ ಒಳಗಾಗಿ ಮುಂದೆ ಸಂಪೂರ್ಣ ಮಾಯವಾಗುವ ಪರಿಸ್ಥಿತಿ ಉಂಟಾದರೆ ಆಶ್ಚರ್ಯವಿಲ್ಲ.

ADVERTISEMENT

ಮಳೆ ಬಂದು ಕೆರೆ ತುಂಬಿದಾಗ ಆಳವಾದ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ಮಕ್ಕಳು ಹಾಗೂ ಯುವಕರು ನೀರಿನಲ್ಲಿ ಈಜಾಡಲು ಹೋದಾಗ ಅಪಾಯವು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಸ್ಥಳೀಯರು.ಕೆರೆ ಅಂಗಳವನ್ನು ಅತಿ ಕ್ರಮಿಸಿ ಆಳವಾಗಿ ತೋಡಿದ ಗುಂಡಿಯನ್ನು ಪರಿಶೀಲಿಸಲು ಈಚೆಗೆ ಬಂದಿದ್ದ ಜಿಲ್ಲಾಧಿಕಾರಿ ತಪ್ಪಿಸ್ಥರ ಮೇಲೆ ದೂರನ್ನು ದಾಖಲಿಸಿ ಶೀಘ್ರವೇ ತುರ್ತು ಕ್ರಮ ಜರುಗಿಸಿ ಎಂದು ತಹಶೀಲ್ದಾರ್ ಕೃಷ್ಣ ಮೂರ್ತಿ ಅವರಿಗೆ ನಿರ್ದೇಶಿಸಿದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಜಿಲ್ಲಾಢಳಿತ ಹಾಗೂ ಸಂಭಂದಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಿ ಕೆರೆಯ ಅಭಿವೃದ್ಧಿಗೆ ಮುಂದಾಗಬೇಕೆಂದು ಸಾರ್ವಜನಿಕರು, ಪರಿಸರವಾದಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.