ADVERTISEMENT

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕನ ಬಂಧನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 6:34 IST
Last Updated 24 ನವೆಂಬರ್ 2017, 6:34 IST
ಬಳ್ಳಾರಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ
ಬಳ್ಳಾರಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ   

ಬಳ್ಳಾರಿ: 2016–17ನೇ ಸಾಲಿನ ಲಿಂಕ್‌ ಡಾಕ್ಯುಮೆಂಟ್‌ನ ₨ 66 ಲಕ್ಷವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಮೇಲು ಸಹಿ ಪಡೆಯದೇ ಡ್ರಾ ಮಾಡಿದ ಆರೋಪದ ಮೇರೆಗೆ ಸೇವೆಯಿಂದ ಅಮಾನತ್ತಾಗಿದ್ದ ಇಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಭಾವಿಹಳ್ಳಿ ಅವರನ್ನು ಕೌಲ್‌ಬಜಾರ್‌ ಠಾಣೆಯ ಪೊಲೀಸರು ಬುಧವಾರ ಚಿಕ್ಕಬಳ್ಳಾಪುರದಲ್ಲಿ ಬಂಧಿಸಿದ್ದು, ಗುರುವಾರ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಅಧಿಕಾರಿ ವಿರುದ್ಧ ದೂರು ದಾಖಲಾಗಿ ಸರಿಯಾಗಿ ಒಂದು ತಿಂಗಳಿಗೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅನುದಾನವನ್ನು ಜಿಲ್ಲಾ ಪಂಚಾಯಿತಿ ಗಮನಕ್ಕೆ ತಾರದೇ ಡ್ರಾ ಮಾಡಿದ್ದು ಬೆಳಕಿಗೆ ಬಂದಿದ್ದರಿಂದ, ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಇಲಾಖೆಗೆ ಪತ್ರ ಬರೆದ ಬಳಿಕ ಸೆಪ್ಟೆಂಬರಿನಲ್ಲಿ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿತ್ತು.

ನಂತರ ಜಿಲ್ಲಾ ಪಂಚಾಯಿತಿಯ ಲೆಕ್ಕ ಪರಿಶೋಧನಾ ಸಿಬ್ಬಂದಿ ತನಿಖೆಯನ್ನು ಆರಂಭಿಸಿದ್ದರು. ಕ್ರೀಡಾ ಸಂಕೀರ್ಣ, ಬಿಡಿಎಎ ಸಭಾಂಗಣ, ಕ್ರೀಡಾ ವಸತಿಶಾಲೆ ಸೇರಿದಂತೆ ಇಲಾಖೆ ವ್ಯಾಪ್ತಿಯ ಎಲ್ಲ ಕಚೇರಿಗಳಿಗೂ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದ್ದರು.

ADVERTISEMENT

ರಸೀದಿ ಸಲ್ಲಿಸಲಿಲ್ಲ: ‘ಡ್ರಾ ಮಾಡಿದ ಹಣ ಬಳಕೆಯಾದ ಕುರಿತು ಸಮರ್ಪಕ ರಸೀದಿಗಳನ್ನು ಸಲ್ಲಿಸುವಂತೆ ಅಧಿಕಾರಿಗೆ ಅವಕಾಶವನ್ನು ನೀಡಲಾಗಿತ್ತು.ಆದರೆ ಅವರು ಸಲ್ಲಿಸದ ಕಾರಣ ಕ್ರಿಮಿನಲ್‌ ದೂರನ್ನು ದಾಖಲಿಸುವುದು ಅನಿವಾರ್ಯವಾಯಿತು’ ಎಂದು ಡಾ.ರಾಜೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಅಧಿಕಾರಿಯು ಕೆಲವು ಕ್ರಿಯಾಯೋಜನೆಗಳಿಗೆ ಅನುಮೋದನೆ ಪಡೆಯದೆ ಹಣ ಬಳಕೆ ಮಾಡಿದ್ದಾರೆ. ಕೆಲವೆಡೆ ಬರೆದಿರುವುದನ್ನು ತಿದ್ದಿದ್ದಾರೆ’ ಎಂದರು.

ಖಜಾನೆ ಇಲಾಖೆಯಿಂದಲೂ ತನಿಖೆ: ಎರಡು ದಿನದ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಖಜಾನೆ ಇಲಾಖೆಯ ಉನ್ನತ ಅಧಿಕಾರಿಗಳು ಕ್ರೀಡಾ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಹಮತ್‌ ಉಲ್ಲಾ ಅವರಿಂದಲೂ ಮಾಹಿತಿಯನ್ನು ಪಡೆಯಲು ಮುಂದಾಗಿದ್ದರು.

ಆದರೆ ‘ಪ್ರಕರಣ ಸಂಬಂಧ ಯಾವ ಕಡತವೂ ಕಚೇರಿಯಲ್ಲಿ ಲಭ್ಯವಿಲ್ಲ ಎಂದು ಅವರಿಗೆ ಮಾಹಿತಿ ನೀಡಿದ್ದೆ’ ಎಂದು ರಹಮತ್‌ ತಿಳಿಸಿದರು. ನಂತರ ಅಧಿಕಾರಿಗಳ ತಂಡ ಜಿಲ್ಲಾ ಪಂಚಾಯಿತಿಗೂ ಭೇಟಿ ನೀಡಿತ್ತು ಎಂದು ತಿಳಿದುಬಂದಿದೆ.

23ರಂದು ದೂರು: ‘ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಭಜಂತ್ರಿ ಅವರು ಅ.23ರಂದು ನಗರದ ಕೌಲ್‌ಬಜಾರ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿ ಅಧಿಕಾರಿಯ ಪತ್ತೆ ಕಾರ್ಯಾಚರಣೆ ನಡೆದಿತ್ತು. ಪಿಎಸ್‌ಐ ವಸಂತಕುಮಾರ್‌ ನೇತೃತ್ವದಲ್ಲಿ ಸಿಬ್ಬಂದಿ ಆರೋಪಿಯನ್ನು ಬಂಧಿಸಿದರು’ ಎಂದು ತನಿಖಾಧಿಕಾರಿಯಾಗಿರುವ ಸಿಪಿಐ ಕೆ.ಪ್ರಸಾದ ಗೋಖಲೆ ತಿಳಿಸಿದರು.

ಜಿಲ್ಲಾ ಖಜಾನಾಧಿಕಾರಿ ವಿರುದ್ಧವೂ ದೂರು
‘ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಮೇಲು ಸಹಿ ಇಲ್ಲದಿದ್ದರೂ ಹಣ ಡ್ರಾ ಮಾಡಲು ಅವಕಾಶ ನೀಡಿದ ಕಾರಣಕ್ಕೆ ಜಿಲ್ಲಾ ಖಜಾನಾಧಿಕಾರಿ ಮಹ್ಮದ್‌ ಹುಬೇರ್‌ ವಿರುದ್ಧವೂ ದೂರು ದಾಖಲಿಸಲಾಗಿದೆ’ ಎಂದು ಡಾ.ರಾಜೇಂದ್ರ ತಿಳಿಸಿದರು.

* * 

ಮೇಲು ಸಹಿ ಪಡೆಯದೆ ಡ್ರಾ ಮಾಡಿದ ಹಣದ ಬಳಕೆ ಕುರಿತು ರಸೀದಿ, ಪ್ರಮಾಣಪತ್ರಗಳನ್ನು ಸಲ್ಲಿಸದೇ ಇದ್ದುದರಿಂದ ಅಧಿಕಾರಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿತ್ತು
ಡಾ.ಕೆ.ವಿ.ರಾಜೇಂದ್ರ
ಜಿಪಂ ಸಿಇಓ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.