ADVERTISEMENT

ಗೂಳ್ಯಂ: ‘ಪುಸ್ತಕ ದಾಸೋಹ’ಕ್ಕೆ ಚಾಲನೆ

ಗಡಿ ಬಾಗದ 41 ಕನ್ನಡ ಶಾಲೆಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪುಸ್ತಕ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 10:47 IST
Last Updated 28 ಜನವರಿ 2017, 10:47 IST
ಗೂಳ್ಯಂ: ‘ಪುಸ್ತಕ ದಾಸೋಹ’ಕ್ಕೆ ಚಾಲನೆ
ಗೂಳ್ಯಂ: ‘ಪುಸ್ತಕ ದಾಸೋಹ’ಕ್ಕೆ ಚಾಲನೆ   

ಬಳ್ಳಾರಿ: ರಾಜ್ಯದ ಹೊರನಾಡಿನಲ್ಲಿ ಕನ್ನಡವನ್ನು ಬಲಗೊಳಿಸುವ ಉದ್ದೇಶ ದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರೂಪಿಸಿರುವ ‘ಪುಸ್ತಕ ದಾಸೋಹ’ ಯೋಜನೆಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹಾಲಹರವಿ ಮಂಡಲದ ಗೂಳ್ಯಂ ಗ್ರಾಮದಲ್ಲಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು.

ಗ್ರಾಮದ ಶಿವಶರಣ ಗಾದಿಲಿಂಗಪ್ಪ ತಾತನವರ ಮಠದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಂಡಳ ವ್ಯಾಪ್ತಿಯ 41 ಕನ್ನಡ ಶಾಲೆ ಗಳಿಗೆ ತಲಾ 223 ಪುಸ್ತಕಗಳನ್ನು ಉಚಿತವಾಗಿ ವಿತರಿಸುವ ಮೂಲಕ ಅವರು ಯೋಜನೆಗೆ ಚಾಲನೆ ನೀಡಿದರು.

ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂ ಡಿರುವ ಮಹಾರಾಷ್ಟ್ರ ಜಿಲ್ಲೆಯ ಸೊಲ್ಲಾ ಪುರ, ಅಕ್ಕಲಕೋಟೆ, ಜತ್ತ, ಕೇರಳ ರಾಜ್ಯದ ಕಾಸರಗೋಡು, ಹೊಸದುರ್ಗ, ತಮಿಳುನಾಡಿನ ಹೊಸೂರು, ಸತ್ಯ ಮಂಗಲ, ತಾಳವಾಡಿ, ಗೋವಾ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಿಗೂ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಲಲಿತ ಕಲಾ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ರಾಜ್ಯ ಕೇಂದ್ರ ಗ್ರಂಥಾಲಯ, ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಭಾಷಾ ಭಾರತಿ, ಗಾಂಧೀಭವನ, ನವ ಕರ್ನಾಟಕ ಪ್ರಕಾಶನ, ಅಭಿನವ ಪ್ರಕಾಶನ, ಅಂಕಿತ ಪ್ರಕಾಶನ, ಕರ್ನಾಟಕ ಲೇಖಕಿಯರ ಸಂಘ ಹಾಗೂ ಸಪ್ನ ಬುಕ್‌ ಹೌಸ್‌ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಕನ್ನಡಾಭಿಮಾನ ಮರೆದಿದೆ ಎಂದರು.

1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದುವ ಹೊರನಾಡಿನ ವಿದ್ಯಾರ್ಥಿಗಳೆಲ್ಲರಿಗೂ ಒಳನಾಡಿನ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳನ್ನೇ ನೀಡಬೇಕು ಎಂದು ಸರೋಜಿನಿ ಮಹಿಷಿ ಪರಿಷ್ಕೃತ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದ್ದು, ಅದು ಕಾಯ್ದೆಯಾಗಿ ಹೊರಬಂದರೆ ಗಡಿಭಾಗದ ಜನರ ಬೇಡಿಕೆಗಳು ಈಡೇರಲಿವೆ ಎಂದರು.

ಲೋಹಿಯಾ ಪ್ರಕಾಶನದ ಚನ್ನಬಸವಣ್ಣ, ಲೇಖಕ ಕೆ.ಪಿ.ಪುಟ್ಟ ಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ರೀಧರನ್, ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರ ಣಾಧಿಕಾರಿ ಚಂದ್ರಶೇಖರ್, ಗಡಿನಾಡು ಕನ್ನಡ ಯುವಜನ ಸಂಘದ ಅಧ್ಯಕ್ಷ ಕೆ.ಪಿ. ಬಜಾರಪ್ಪ, ಗ್ರಂಥಾಲಯಾಧಿಕಾರಿ ಲಕ್ಷ್ಮಿ, ಮುಖಂಡರಾದ ರಂಗಸ್ವಾಮಿ, ಶರಣ ಬಸಪ್ಪ, ದೊಡ್ಡಬಸಪ್ಪ, ಸಾಂಬಶಿವಪ್ಪ, ಮರಿಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.