ADVERTISEMENT

ಜುಲೈನಿಂದಲೂ ಅತಿಥಿ ಶಿಕ್ಷಕರಿಗೆ ಸಂಬಳವಿಲ್ಲ!

ಸ್ಪಂದಿಸದ ಸಾರ್ವಜನಿಕ ಶಿಕ್ಷಣ ಇಲಾಖೆ– ಆರೋಪ; ಪದ್ಧತಿ ಬದಲಿಸಲು ಶಿಕ್ಷಕರ ಆಗ್ರಹ

ಕೆ.ನರಸಿಂಹ ಮೂರ್ತಿ
Published 16 ನವೆಂಬರ್ 2017, 7:08 IST
Last Updated 16 ನವೆಂಬರ್ 2017, 7:08 IST
ಜುಲೈನಿಂದಲೂ ಅತಿಥಿ ಶಿಕ್ಷಕರಿಗೆ ಸಂಬಳವಿಲ್ಲ!
ಜುಲೈನಿಂದಲೂ ಅತಿಥಿ ಶಿಕ್ಷಕರಿಗೆ ಸಂಬಳವಿಲ್ಲ!   

ಬಳ್ಳಾರಿ: ಸರ್ಕಾರಿ ಶಾಲೆಗಳಲ್ಲಿ ಅರೆಕಾಲಿಕ ನೇಮಕಾತಿ ಅಡಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಜುಲೈನಿಂದ ಸಂಬಳ ದೊರಕಿಲ್ಲ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಡಿಸೆಂಬರ್‌ನಲ್ಲಿ ಅನುದಾನ ಬಿಡುಗಡೆ ಮಾಡುವುದರಿಂದ, ಜನವರಿ ಅಥವಾ ಫೆಬ್ರುವರಿಯಲ್ಲಿ ಸಂಬಳ ದೊರಕುತ್ತದೆ ಎಂಬ ಸಂದೇಶವನ್ನು ಈಗಾಗಲೇ ಶಿಕ್ಷಕರಿಗೆ ರವಾನಿಸಲಾಗಿದೆ.

‘ವರ್ಷಕ್ಕೊಮ್ಮೆ ಕೊಡುವುದನ್ನೇ ಪ್ರತಿ ತಿಂಗಳೂ ಕೊಡಿ’ ಎಂಬ ಶಿಕ್ಷಕರ ಆಗ್ರಹಕ್ಕೆ ಇಲಾಖೆಯಿಂದ ನಿರೀಕ್ಷಿತ ಸ್ಪಂದನೆ ದೊರಕಿಲ್ಲ. ರಾಜ್ಯದಲ್ಲಿ ಅಂದಾಜು 11 ಸಾವಿರ ಅತಿಥಿ ಶಿಕ್ಷಕರಿದ್ದು, ಅವರೆಲ್ಲರೂ ವೇತನದ ನಿರೀಕ್ಷೆಯಲ್ಲೇ ಪಾಠ ಮಾಡುತ್ತಿದ್ದಾರೆ. ನಿರುದ್ಯೋಗದ ನಡುವೆ ದೊರಕಿರುವ ಈ ತಾತ್ಕಾಲಿಕ ಕೆಲಸವೂ ಅವರಿಗೆ ಸದ್ಯ ನೆರವಿಗೆ ಬರುತ್ತಿಲ್ಲ.

ADVERTISEMENT

ನಾಲ್ಕು ವರ್ಷದಿಂದ: ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಅಲ್ಲಿನ ಮುಖ್ಯಶಿಕ್ಷಕರೇ ಸ್ಥಳೀಯ ನಿರುದ್ಯೋಗಿ ಬಿ.ಇಡಿ. ಡಿ.ಇಡಿ ಪದವೀಧರರನ್ನು ಆಯ್ಕೆ ಮಾಡಿಕೊಳ್ಳುವ ಪದ್ಧತಿ ನಾಲ್ಕು ವರ್ಷದಿಂದ ಜಾರಿಯಲ್ಲಿದೆ. ಶಿಕ್ಷಕರು ಜುಲೈನಿಂದ ಮಾರ್ಚ್‌ವರೆಗಷ್ಟೇ ಕಾರ್ಯ ನಿರ್ವಹಿಸುತ್ತಾರೆ. ಅಗತ್ಯ ಕಂಡರೆ ಮತ್ತೆ ಹೊಸ ನೇಮಕಾತಿ ನಡೆಯುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುವವರಿಗೆ ₹7,500 ಮತ್ತು ಪ್ರೌಢಶಾಲೆಯ ಶಿಕ್ಷಕರಿಗೆ ₹8000 ವೇತನ ನಿಗದಿ ಮಾಡಲಾಗಿದ್ದು, ನೇಮಕಾತಿ ಪತ್ರವನ್ನು ನೀಡದೆಯೇ ಅವರಿಂದ ಸೇವೆ ಪಡೆಯಲಾಗುತ್ತಿದೆ.

‘ಪತ್ನಿ ಮತ್ತು ಮಗು ಇದ್ದು, ಸಂಸಾರದ ಖರ್ಚು ತೂಗಿಸಲು ಶೇ 3ರ ಬಡ್ಡಿ ದರದಲ್ಲಿ ಸಾಲ ಪಡೆದಿದ್ದೇನೆ. ಬಸ್‌ ಪಾಸ್‌ಗೂ ಹಣವಿಲ್ಲದೆ ಸಂಕಟಪಡುತ್ತಿದ್ದೇನೆ. ಪೋಷಕರನ್ನು ಕೇಳುವ ಪರಿಸ್ಥಿತಿಯಲ್ಲಿಯೂ ಇಲ್ಲ ’ ಎಂದು ತೆಕ್ಕಲ ಕೋಟೆಯ ಬಾಷಾಸಾಬ್‌ ಹೇಳಿದರು.

‘ಇಲಾಖೆ ನಮ್ಮ ಕಡೆಗೆ ಕರುಣೆ ತೋರಿ ನಾಲ್ಕು ತಿಂಗಳ ಸಂಬಳವನ್ನಾದರೂ ಬಿಡುಗಡೆ ಮಾಡಬೇಕು. ಹಿಂದಿನ ವರ್ಷ ಅಕ್ಟೋಬರ್‌ನಲ್ಲಿ ನೇಮಕಗೊಂಡಿದ್ದರೆ, ವೇತನ ಫೆಬ್ರುವರಿಯಲ್ಲಿ ದೊರಕಿತ್ತು. ಆದರೆ ಈ ವರ್ಷ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ನೇಮಕವಾದರೂ ವೇತನ ದೊರಕಿಲ್ಲ. ಜೂನ್‌ನಿಂದ ಕರ್ತವ್ಯ ನಿರ್ವಹಿಸಿದರೂ, ಜುಲೈನಿಂದ ಪರಿಗಣಿಸುತ್ತಿದ್ದಾರೆ’ ಎಂದು ಸಿರುಗುಪ್ಪ ತಾಲ್ಲೂಕಿನ ಬಲಕುಂದಿಯ ಶಿಕ್ಷಕ ರಾಜಾಸಾಬ್‌, ಉತ್ತನೂರಿನ ಸೈಫುಲ್ಲಾ ಅಳಲು ತೋಡಿಕೊಂಡರು.

‘ಪೂರ್ಣಾವಧಿ ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ, ಅತಿಥಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಅಂಥವರ ಬಗ್ಗೆ ಇಲಾಖೆಯು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ’ ಎಂದು ಸಂಡೂರು ತಾಲ್ಲೂಕಿನ ಉಬ್ಬಳಗಂಡಿ ಶಾಲೆಯ ಶಿಕ್ಷಕ ರಾಜೇಶ್‌ ವಿಷಾದಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಇಲಾಖೆಯ ಉಪನಿರ್ದೇಶಕ ಓ.ಶ್ರೀಧರನ್‌, ‘ವೇತನ ಬಿಡುಗಡೆ ಮಾಡುವುದು ಇಲಾಖೆಯ ಕೇಂದ್ರ ಕಚೇರಿಗೆ ಬಿಟ್ಟ ವಿಷಯ. ನಾವು ಏನಿದ್ದರೂ ಶಿಕ್ಷಕರನ್ನು ನೇಮಿಸುವ ಕೆಲಸವನ್ನಷ್ಟೇ ಮಾಡುತ್ತೇವೆ’. ನಿಯಮಿತ ವೇತನವಿಲ್ಲದೆ ಕೆಲಸ ಮಾಡುವುದು ಕಷ್ಟಕರ ಎಂಬುದು ನಮಗೂ ತಿಳಿದಿದೆ. ಆದರೆ ಇಲಾಖೆಯ ನೀತಿ ಹಾಗೆಯೇ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.